ಬರ ಅಧ್ಯಯನ ತಂಡದ ನಡೆಗೆ ಆಕ್ಷೇಪ

CTD 7 BARA AYDAYAN-3
Published on

ಚಿತ್ರದುರ್ಗ: ಕೇಂದ್ರ ಬರಗಾಲ ಅಧ್ಯಯನ ತಂಡ ಜಿಲ್ಲೆಯಲ್ಲಿ ಶನಿವಾರ ನಡೆಸಿದ ಬೆಳೆಹಾನಿ ಅಧ್ಯಯನದ ಕ್ರಮ ರೈತರ ಅತೃಪ್ತಿಗೆ ಕಾರಣವಾಯಿತು.

ರಾಜ್ಯ ಸರ್ಕಾರ ಜಿಲ್ಲೆಯ ಆರು ತಾಲೂಕುಗಳನ್ನು ಬರಗಾಲ ಪೀಡಿತವೆಂದು ಘೋಷಿಸಿದೆ. ಮುಂಗಾರು ಮಳೆ ಸಾಕಷ್ಟು ಕೊರತೆಯಿಂದಾಗಿ ಕೃಷಿ ಮತ್ತು ತೋಟಗಾರಿಕೆ ಸೇರಿ ಜಿಲ್ಲೆಯಲ್ಲಿ 2.4 ಲಕ್ಷ ಹೆಕ್ಟೇರ್ ಬೆಳೆ ನಷ್ಟವಾಗಿದ್ದು, ಎನ್‌ಡಿಆರ್‌ಎಫ್ ಮಾರ್ಗಸೂಚಿ ಅನ್ವಯ 189.63 ಕೋಟಿ ರೂ. ಪರಿಹಾರ ಮೊತ್ತ ಬಿಡುಗಡೆಗೆ ಜಿಲ್ಲಾಡಳಿತ ಮನವಿ ಸಲ್ಲಿಸಿದೆ.

ಕೇಂದ್ರ ಜಲಶಕ್ತಿ ಆಯೋಗದ ನಿರ್ದೇಶಕ ವಿ.ಅಶೋಕ್‌ಕುಮಾರ್ ನೇತೃತ್ವದ ಕೇಂದ್ರದ ಅಧ್ಯಯನದ 3ನೇ ತಂಡ ಚಿತ್ರದುರ್ಗ, ಚಳ್ಳಕೆರೆ ತಾಲೂಕುಗಳ ವಿವಿಧ ಗ್ರಾಮಗಳ ಜಮೀನುಗಳಿಗೆ ಭೇಟಿ ನೀಡಿ ಬೆಳೆಹಾನಿ, ರ‌್ಯಾಂಡಮ್ ಗ್ರೌಂಡ್ ಟ್ರೂಥಿಂಗ್ ಸರ್ವೇಯನ್ನು ಪರಿಶೀಲಿಸಿತು. ಹೆದ್ದಾರಿ, ಮುಖ್ಯರಸ್ತೆಗಳ ಪಕ್ಕದ ಜಮೀನುಗಳಿಗೆ ಭೇಟಿ ನೀಡಿ ಅಧಿಕಾರಿಗಳು ತೆರಳುತ್ತಿದ್ದಾರೆಂಬ ಅಸಮಾಧಾನ ರೈತರಲ್ಲಿ ಕಾಣಿಸಿತು.

ಜನ-ಜಾನುವಾರುಗಳಿಗೆ ಕುಡಿವ ನೀರಿಗೆ ತೊಂದರೆ ಆಗಿದೆ, ಮೇವಿನ ಕೊರತೆಯಾಗುತ್ತಿದೆ. ಮೂಕ ಪ್ರಾಣಿಗಳು ಏನು ಮಾಡಬೇಕು? ರಾಗಿ ಬೆಳೆ ನಷ್ಟವಾಗಿದೆ. ಮೇವು ಇಲ್ಲದಂತಾಗಿದೆ. 12 ಮಳೆಗಳು ಕೈಕೊಟ್ಟಿವೆ, ಹಿಂಗಾರನ್ನೂ ನೆಚ್ಚಿಕೊಳ್ಳುವಂತಿಲ್ಲ ಎಂದ ರೈತರು, ಹೆಚ್ಚಿನ ಪರಿಹಾರ ನೀಡುವಂತೆ ಕೋರಿದರು.

ಕನ್ನಡ ಗೊತ್ತಿದ್ದ ಅಶೋಕ್‌ಕುಮಾರ್ ರೈತರೊಂದಿಗೆ ಮಾತನಾಡುತ್ತಾ, ತಂಡದ ಇತರ ಸದಸ್ಯರಿಗೆ ವಿವರಿಸುತ್ತಿದ್ದರು. ಬಿತ್ತನೆ, ವಿವಿಧ ಬೆಳೆಗೆ ತಗಲುವ ವೆಚ್ಚ, ಇಳುವರಿ ಮೊದಲಾದ ಮಾಹಿತಿ ಪಡೆದರು.

ತಂಡ ಚಿತ್ರದುರ್ಗ ತಾಲೂಕಿನ ವಿಜಾಪುರದ ಮಲ್ಲಿಕಾರ್ಜುನಯ್ಯ, ಎಸ್.ಎಂ.ತಿಪ್ಪೇಸ್ವಾಮಿ, ಸೌಭಾಗ್ಯಮ್ಮ ಜಮೀನಿಗೆ ಭೇಟಿ ನೀಡಿ ಹಾಳಾಗಿದ್ದ ಮೆಕ್ಕೆಜೋಳ, ರಾಗಿ ಬೆಳೆ ವೀಕ್ಷಿಸಿದರು. ಬಿರಾವರದ ವಿನಯ್, ಪರಮಶಿವಯ್ಯ, ಕುಬೇಂದ್ರಗೌಡ, ಹರೀಶ್‌ಬಾಬು ಜಮೀನಲ್ಲಿ ಒಣಗಿದ್ದ ರಾಗಿ ಮತ್ತು ಮೆಕ್ಕೆಜೋಳವನ್ನು ಗಮನಿಸಿತು.

ವಿನಯ್ ಅವರ 4 ಎಕರೆಯಲ್ಲಿದ್ದ ಮೆಕ್ಕೆಜೋಳ, ತೊಗರಿ ಹಾಳಾಗಿದ್ದನ್ನು ತಂಡ ವೀಕ್ಷಿಸಿತು. ಬೀರಾವರದಲ್ಲಿ ಕೃಷ್ಣಪ್ಪ, ಹರೀಶ್‌ಬಾಬು, ಶಶಾಂಕ್ ಅವರ ಹೊಲದಲ್ಲಿದ್ದ ರಾಗಿ ನೆಲಕಚ್ಚಿತ್ತು.

ಗೋನೂರಿನ ರವಿನಾರಾಯಣ್ ಅವರ 5 ಎಕರೆ ಜಮೀನಲ್ಲಿದ್ದ ಕಾಳುಕಟ್ಟದ ಮೆಕ್ಕೆಜೋಳವನ್ನು ತಂಡ ವೀಕ್ಷಿಸಿತು. ಸಕಾಲಕ್ಕೆ ಮಳೆಯಾಗದೆ ಎಡೆಕುಂಟೆ, ಔಷಧ, ಗೊಬ್ಬರ ಹಾಕಲಿಲ್ಲ. ಎಕರೆ ಈಗ ಆಗಿರುವ 12-13 ಸಾವಿರ ರೂ. ಬದಲು 15-20 ಸಾವಿರ ರೂ. ಅಧಿಕ ನಷ್ಟವಾಗುತ್ತಿತ್ತು. ಬೆಳೆ ಚೆನ್ನಾಗಿದ್ದರೆ ಎಕರೆಗೆ ಕನಿಷ್ಠ 25-30 ಕ್ವಿಂಟಾಲ್ ಸಿಗುತ್ತಿತ್ತು ಎಂದು ರವಿನಾರಾಯಣ್ ಹೇಳಿದರು. ಪರಿಹಾರ ಮೊತ್ತ ಅತ್ಯಲ್ಪವಿರುತ್ತದೆ. ಬೀಜ, ಗೊಬ್ಬರ, ಕೂಲಿ ಖರ್ಚಾದರೂ ಸರಿದೂಗುವ ರೀತಿ ಪರಿಹಾರ ಕೊಡಬೇಕೆಂದು ಕೋರಿದರು.

ಚಿತ್ರದುರ್ಗ ತಾಲೂಕಿನಲ್ಲಿ ಹೆಚ್ಚಾಗಿ ಮೆಕ್ಕೆಜೋಳ ಬೆಳೆಯಲಾಗುತ್ತದೆ. ಆದರೆ, ಈ ಬಾರಿ ಮಳೆ ಕೊರತೆಯಿಂದಾಗಿ ಬಿತ್ತನೆ ತಡವಾಯಿತು. ಬಿತ್ತನೆ ನಂತರವೂ ಮಳೆ ಬರಲಿಲ್ಲವೆಂದು ಈಶಣ್ಣ ಬೇಸರಿಸಿದರು.

ಹತ್ತಾರು ಜಮೀನುಗಳಿಗೆ ಭೇಟಿ ಕೊಟ್ಟರೆ ವಾಸ್ತವ ಸ್ಥಿತಿ ತಿಳಿಯುತ್ತದೆ ಎಂದು ಅಧಿಕಾರಿಗಳ ನಡೆಗೆ ಬೋರಯ್ಯ ಅಸಮಾಧಾನ ವ್ಯಕ್ತಪಡಿಸಿದರು. ಗೋನೂರಲ್ಲಿ ಎತ್ತಿನಗಾಡಿಯಲ್ಲಿ ಸಾಗಿಸುತ್ತಿದ್ದ ಹಾಳಾದ ಮೆಕ್ಕೆಜೋಳ, ಬರದ ಭೀಕರತೆಯನ್ನು, ರೈತರ ಸಂಕಷ್ಟವನ್ನು ಅನಾವರಣಗೊಳಿಸಿತು. ಹಾಯ್ಕಲ್ ಗ್ರಾಮದ ಜಮೀನಲ್ಲೂ ತಂಡ ಪರಿಶೀಲನೆ ನಡೆಸಿತು.

ತಂಡದ ಸದಸ್ಯರಾದ ಎಂಎನ್‌ಸಿಎಫ್‌ಸಿ ಉಪನಿರ್ದೇಶಕ ಕರಣ್ ಚೌಧರಿ, ಆಹಾರ ಇಲಾಖೆ ಉಪಕಾರ್ಯದರ್ಶಿ ಸಂಗೀತ್‌ಕುಮಾರ್, ರಾಜ್ಯ ಪ್ರಕೃತಿ ವಿಕೋಪ ನಿರ್ವಹಣಾ ಕೇಂದ್ರದ ಹಿರಿಯ ಸಲಹೆಗಾರ ಡಾ.ಶ್ರೀನಿವಾಸರೆಡ್ಡಿ, ಜಿಪಂ ಸಿಇಒ ಎಸ್.ಜೆ.ಸೋಮಶೇಖರ್, ಎಡಿಸಿ ಬಿ.ಟಿ.ಕುಮಾರಸ್ವಾಮಿ, ಎಸಿ ಎಂ.ಕಾರ್ತಿಕ್, ಕೃಷಿ ಇಲಾಖೆ ಜೆಡಿ ಬಿ.ಮಂಜುನಾಥ್, ಪಶು ವೈದ್ಯಕೀಯ ಸೇವಾ ಇಲಾಖೆ ಡಿಡಿ ಡಾ.ಬಾಬುರತ್ನ, ತೋಟಗಾರಿಕೆ ಇಲಾಖೆ ಡಿಡಿ ಜಿ.ಸವಿತಾ, ತಹಸೀಲ್ದಾರ್ ಡಾ.ನಾಗವೇಣಿ ಇತರರಿದ್ದರು.

ಕೇಂದ್ರಕ್ಕೆ ವರದಿ: ಜಿಲ್ಲೆಯಲ್ಲಿ ಮೆಕ್ಕೆಜೋಳ, ರಾಗಿ, ಶೇಂಗಾ, ತೊಗರಿ ಹಾಗೂ ತೋಟಗಾರಿಕೆ ಬೆಳೆಗಳನ್ನು ವೀಕ್ಷಿಸಲಾಗಿದೆ. ರೈತರಿಂದ ಮಾಹಿತಿ ಪಡೆಯಲಾಗಿದೆ. ಜಿಲ್ಲಾಡಳಿತವು ವಾಸ್ತವ ಸ್ಥಿತಿ ತಿಳಿಸಿದೆ. ಕ್ರೋಢಿಕೃತ ಅಧ್ಯಯನ ವರದಿಯನ್ನು ಕೇಂದ್ರಕ್ಕೆ ಸಲ್ಲಿಸಲಾಗುವುದು.-ಅಶೋಕ್‌ಕುಮಾರ್, ನಿರ್ದೇಶಕ, ಕೇಂದ್ರ ಜಲಶಕ್ತಿ ಆಯೋಗ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net