ದೇವಾಲಯದ ವ್ಯಾಪ್ತಿಯಲ್ಲಿ ಮಾಂಸಹಾರ ನಿಷೇಧಕ್ಕೆ ಆಕ್ಷೇಪ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್

highcourt
Published on

ಬೆಂಗಳೂರು:  ತುಮಕೂರು ಜಿಲ್ಲೆಯ ಶಿವನಗೆರೆ ಶ್ರೀ ಹೊನ್ನೇಶ್ವರಸ್ವಾಮಿ ದೇವಾಲಯದ ವ್ಯಾಪ್ತಿಯಲ್ಲಿ ಮಾಂಸಾಹಾರ ಸೇವಿಸಬಾರದು ಎಂಬ ಷರತ್ತು ವಿಧಿಸಿ ಪೊಲೀಸರು ಹೊರಡಿಸಿರುವ ಅಧಿಸೂಚನೆ ರದ್ದುಕೋರಿ ಸಲ್ಲಿಕೆಯಾಗಿರುವ ಅರ್ಜಿ ಸಂಬಂಧ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.

ದೇವಸ್ಥಾನದ ಸುತ್ತ 200 ಮೀಟರ್ ವ್ಯಾಪ್ತಿಯಲ್ಲಿ ಮಾಂಸಾಹಾರ ಸೇವನೆ ನಿಷೇಧಿಸಿ ಬಡವನಹಳ್ಳಿ ಪೊಲೀಸ್ ಠಾಣೆ ಪೊಲೀಸರು 2024ರ ಜು. 13ರಂದು ಹೊರಡಿಸಿರುವ ನೋಟಿಸ್ ಪ್ರಶ್ನಿಸಿ ಶ್ರೀ ಹೊನ್ನೇಶ್ವರಸ್ವಾಮಿ ದೇವಸ್ಥಾನ ಜೀರ್ಣೋದ್ಧಾರ ಸೇವಾ ಸಮಿತಿ ಟ್ರಸ್ಟ್ ಅಧ್ಯಕ್ಷ ಜೆ. ಮಂಜುನಾಥ ಹಾಗೂ ದೇವಸ್ಥಾನದ ಗುರುಗಳಾದ ಜಿ.ಎಸ್.ರಾಮಚಂದ್ರಸ್ವಾಮಿ ಸಲ್ಲಿಸಿರುವ ತಕರಾರು ಅರ್ಜಿಯನ್ನು ಬಿ.ಎಂ.ಶ್ಯಾಮ್ ಪ್ರಸಾದ್ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ ದೇವಲಾಯದ 200ಮೀ. ವ್ಯಾಪ್ತಿಯಲ್ಲಿ ಯಾರೋರ್ವರು ಮಾಂಸವನ್ನು ಸೇವಸಿಬಾರದು ಮತ್ತು ಪ್ರಾಣೆ ಬಲಿ ನೀಡಬಾರದು. ನಿಯಮ ಉಲ್ಲಂಸಿದಲ್ಲಿ ದಂಡ ವಿಧಿಸುವುದಾಗಿ ಅಧಿಸೂಚನೆ ಹೊರಡಿಸಿದ್ದಾರೆ. ಇದು ಸ್ಥಳೀಯ ಪದ್ಧತಿ ಮತ್ತು ಅಲ್ಲಿನ ನಿವಾಸಿಗಳ ಆಹಾರ ಆಯ್ಕೆಗೆ ವಿರುದ್ಧವಾಗಿದೆ. ಯಾರು ದೂರು ನೀಡದ ಹೊರತಾಗಿ ಪೊಲೀಸರು ಈ ತರನಾದ ನೋಟಿಸ್ ನೀಡುವುದು ಒಪ್ಪುವಂತದಲ್ಲ ಎಂದು ಪೀಠದ ಮುಂದೆ ವಿವರಿಸಿದರು.

ವಾದ ಆಲಿಸಿದ ನ್ಯಾಯಪೀಠ ನೋಟಿಸ್ ಕೊಡುವ ಮೊದಲು ಸ್ಥಳೀಯ ಆಚಾರ ಸಂಪ್ರದಾಯಗಳನ್ನು ಪರಿಶೀಲಿಸಲಾಗಿದೆಯೇ? ದೇವಸ್ಥಾನದ ಬಳಿ ಮಾಂಸಹಾರ ಸೇವನೆ ಯಾವ ಕಾರಣಕ್ಕಾಗಿ ನಿಷೇಧಿಸಲಾಗಿದೆ ಎಂಬ ಬಗ್ಗೆ ಪೊಲೀಸರ ಮೂಲಕ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತು. ಅಲ್ಲದೇ ಅರ್ಜಿ ಸಂಬಂಧ ರಾಜ್ಯ ಗೃಹ ಇಲಾಖೆ, ತುಮಕೂರು ಜಿಲ್ಲಾಧಿಕಾರಿ, ಮಧುಗಿರಿ ತಹಸೀಲ್ದಾರ್, ಬಡವನಹಳ್ಳಿ ಪೊಲೀಸ್ ಸರ್ಕಲ್ ಇನ್ಸ್‌ಪೆಕ್ಟರ್‌ಗೆ ನೋಟಿಸ್ ಜಾರಿಗೊಳಿಸಿದ ನ್ಯಾಯಪೀಠ ವಿಚಾರಣೆಯನ್ನು ಸೆ.10ಕ್ಕೆ ಮುಂದೂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net