

ಕಲಬುರಗಿ: ಜಾತಿ ಗಣತಿ ಮಾಡಿರುವ ಕಾಂತರಾಜ ವರದಿ ಸ್ವೀಕರಿಸಲು ಆಗ್ರಹಿಸಿ ಚಿತ್ರದುರ್ಗದಲ್ಲಿ ಜ.೨೮ರಂದು ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಮಹಾಂತೇಶ ಕೌಲಗಿ ಹೇಳಿದರು.
ಶೋಷಿತ ಸಮುದಾಯಗಳ ಮಹಾ ಒಕ್ಕೂಟ ಹಾಗೂ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಸಹಯೋಗದಲ್ಲಿ ಚಿತ್ರದುರ್ಗದ ಹೊರವಲಯದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಪೀಠದ ಪಕ್ಕದ ಬೃಹತ್ ಮೈದಾನದಲ್ಲಿ ಸಂವಿಧಾನ, ಸಾಮಾಜಿಕ ನ್ಯಾಯ, ಸಹಬಾಳ್ವೆ ಮತ್ತು ಸ್ವಾಭಿಮಾನದ ಸಂರಕ್ಷಣೆಗಾಗಿ ಶೋಷಿತ ಜಾಗೃತಿ ಸಮಾವೇಶ ನಡೆಯಲಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದು, ಜನಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.
ನ್ಯಾ.ಕಾಂತರಾಜ ವರದಿ ಸ್ವೀಕರಿಸಿ, ಜಾರಿ ಮಾಡಬೇಕು, ಕೇಂದ್ರ ಸರ್ಕಾರ ಜಾತಿವಾರು ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆ ಮಾಡಬೇಕು, ಕೇಂದ್ರ ಸರ್ಕಾರ ಜಾರಿ ಮಾಡಿರುವ ಇಡಬ್ಲೂÈಎಸ್ ಶೇ.೧೦ ರದ್ದು ಮಾಡಬೇಕು, ಶೋಷಿತರಿಗೆ ಮೀಸಲು ಹಂಚಬೇಕು, ಲೋಕಸಭೆ, ವಿಧಾನಸಭೆ ಚುನಾವಣೆಗಳಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲು ನೀಡಬೇಕು, ಮಹಿಳಾ ರಾಜಕೀಯ ಒಳ ಮೀಸಲು ಜಾರಿ ಮಾಡಬೇಕು. ಜನಸಂಖ್ಯೆಗೆ ಅನುಗುಣವಾಗಿ ಮೀಸಲು ಹೆಚ್ಚಿಸಬೇಕು, ಖಾಸಗಿ ಕ್ಷೇತ್ರದಲ್ಲಿ ಮೀಸಲು ನೀಡಬೇಕು ಎಂದು ಹಕ್ಕೊತ್ತಾಯ ಮಾಡಲಾಗುವುದು ಎಂದು ತಿಳಿಸಿದರು.
ಕುಮಾರ ಯಾದವ, ವಿನೋದಕುಮಾರ ಜನೇವರಿ, ಬೈಲಪ್ಪ ನೆಲೋಗಿ, ಪಿಡ್ಡಪ್ಪ ಜಾಲಗಾರ, ಮಹೇಬೂಬ್ ಶಾ ದರ್ವೇಶಿ, ಸಾಯಬಣ್ಣ ಹೇಳವಾರ, ಪಿತಾಂಬರ ಕಲಗುರ್ತಿ, ಚಂದು ಪವಾರ, ಮಕದ್ದುಮ್ ಶಾ, ಸಿದ್ದು ಜಮಾದಾರ ಇತರರಿದ್ದರು.