ಸ್ವಾರ್ಥ ಸಾಧನೆಗೆ ಒಬಿಸಿ ರಾಜಕಾರಣ

Rahul Gandhi
Published on

ನವದೆಹಲಿ: ಹಿಂದುಳಿದ ವರ್ಗಗಳ ಜನರಿಗಾಗಿ ಕಾಂಗ್ರೆಸ್ ಸಾಕಷ್ಟು ಕೆಲಸ ಮಾಡಿಲ್ಲ ಎಂದು ಆ ಪಕ್ಷದ ಮುಖಂಡ ರಾಹುಲ್ ಗಾಂಧಿ ಹೇಳಿರುವುದನ್ನು ಬಹುಜನ ಸಮಾಜ ಪಕ್ಷದ (ಬಿಎಸ್​ಪಿ) ನಾಯಕಿ ಮಾಯಾವತಿ ಶನಿವಾರ ಕಟುವಾಗಿ ಟೀಕಿಸಿದ್ದಾರೆ. ಶುಕ್ರವಾರ ನವದೆಹಲಿಯಲ್ಲಿ ನಡೆದ ಇತರ ಹಿಂದುಳಿದ ವರ್ಗಗಳ (ಒಬಿಸಿ) ಜನರ ಸಮಾವೇಶದಲ್ಲಿ ಮಾತನಾಡಿದ್ದ ಗಾಂಧಿ, ಹಿಂದುಳಿದ ಸಮಾಜಕ್ಕಾಗಿ ಕೆಲಸ ಮಾಡಲು ತಾವು ಮತ್ತು ತಮ್ಮ ಪಕ್ಷ ವಿಫಲವಾಗಿದೆ ಎಂದಿದ್ದ ಗಾಂಧಿ, ಅದಕ್ಕಾಗಿ ಕ್ಷಮೆ ಕೋರಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಮಾಯಾವತಿ, ಇದು ಹೊಸದೇನೂ ಅಲ್ಲ ಎಂದಿದ್ದಾರೆ. ‘ಹೃದಯ ಹೇಳುವುದೇ ಒಂದು, ನಾಲಿಗೆ ನುಡಿಯುವುದೇ ಇನ್ನೊಂದು ಎನ್ನುವ ರೀತಿ ಇದು ಸ್ವಾರ್ಥ ರಾಜಕಾರಣದಂತೆ ಕಾಣಿಸುತ್ತದೆ’ ಎಂದು ಎಕ್ಸ್ ಪೋಸ್ಟ್​ನಲ್ಲಿ ಮಾಯಾವತಿ ಕುಟುಕಿದ್ದಾರೆ.

ಮೀಸಲಾತಿ ಸಹಿತ ಒಬಿಸಿ ಸಮುದಾಯದ ರಾಜಕೀಯ ಮತ್ತು ಆರ್ಥಿಕ ಆಶೋತ್ತರಗಳು ಅಥವಾ ಸಾಂವಿಧಾನಿಕ ಹಕ್ಕುಗಳ ವಿಚಾರದಲ್ಲಿ ಕಾಂಗ್ರೆಸ್ ಯಾವತ್ತೂ ಪ್ರಾಮಾಣಿಕವಾಗಿರಲಿಲ್ಲ ಎಂದು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಹೇಳಿದ್ದಾರೆ.

ರಾಹುಲ್ 2ನೇ ಅಂಬೇಡ್ಕರ್!

ನವದೆಹಲಿ: ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಇತರ ಹಿಂದುಳಿದ ವರ್ಗಗಳಿಗೆ (ಒಬಿಸಿ) ‘ ಎರಡನೇ ಅಂಬೇಡ್ಕರ್’ ಆಗಬಹುದು ಎಂದು ಹಾಗೂ ಕಾಂಗ್ರೆಸ್ ಮುಖಂಡರೊಬ್ಬರು ವರ್ಣಿಸಿರುವುದು ಸಂವಿಧಾನದ ಪಿತಾಮಹ ಎಂದೂ ಕರೆಯಲಾಗುವ ಮಹಾನ್ ಸಾಮಾಜಿಕ ಸುಧಾರಕ ಬಿ.ಆರ್. ಅಂಬೇಡ್ಕರ್​ರಿಗೆ ಎಸಗಿದ ಅವಮಾನ ಎಂದು ಬಿಜೆಪಿ ಟೀಕಿಸಿದೆ.

‘ಇತಿಹಾಸವು ಪ್ರಗತಿಗಾಗಿ ಅವಕಾಶಗಳನ್ನು ಪುನಃ ಪುನಃ ಒದಗಿಸುವುದಿಲ್ಲ ಎನ್ನುವುದನ್ನು ಒಬಿಸಿ ಜನರು ಅರ್ಥಮಾಡಿಕೊಳ್ಳಬೇಕು. ತಾಲ್ಕಟೋರಾ ಸ್ಟೇಡಿಯಂನಲ್ಲಿ ರಾಹುಲ್ ಹೇಳಿದ್ದನ್ನು ಅವರು ಅನುಸರಿಸಬೇಕು ಹಾಗೂ ಬೆಂಬಲಿಸಬೇಕು. ಹಾಗೆ ಮಾಡಿದರೆ ಅವರಿಗೆ ರಾಹುಲ್ ಗಾಂಧಿ ಎರಡನೇ ಅಂಬೇಡ್ಕರ್ ಆಗಬಲ್ಲರು’ ಎಂಬುದಾಗಿ ಕಾಂಗ್ರೆಸ್ ನಾಯಕ ಉದಿತ್ ರಾಜ್ ಶನಿವಾರ ಎಕ್ಸ್ ಪೋಸ್ಟ್​ನಲ್ಲಿ ಅಭಿಪ್ರಾಯ ಪಟ್ಟಿದ್ದರು. ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಜಾತಿ ಗಣತಿ ನಡೆಸದಿರುವುದು ಒಂದು ತಪು್ಪ ಎಂದು ರಾಹುಲ್ ಗಾಂಧಿ ಹೇಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net