ಡಿಸಿಎಂ ಆಗಿ ಉದಯನಿಧಿ ನೇಮಕ; ಸ್ಟಾಲಿನ್​​ ಕ್ಯಾಬಿನೆಟ್​ಗೆ ನಾಲ್ವರು ಹೊಸ ಸಚಿವರ ಸೇರ್ಪಡೆ | Oathing Ceremony

Untitled-design-2024-09-29T191746.521
Published on

ಚೆನ್ನೈ: ಸಿಎನ್ ಅಣ್ಣಾದೊರೈ ಅವರು ಆರಂಭಿಸಿದ ಪಕ್ಷವನ್ನು ನಂತರ ಕರುಣಾನಿಧಿ ಅವರು ಯಶಸ್ವಿಯಾಗಿ ಮುನ್ನಡೆಸಿದರು. ಕರುಣಾನಿಧಿ ಅವರ ಅಧಿಕಾರಾವಧಿಯ ನಂತರ ಹಾಲಿ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರು ಪಕ್ಷದ ಸಾರಥ್ಯವನ್ನು ವಹಿಸಿಕೊಂಡಿದ್ದು ಗೊತ್ತೆ ಇದೆ. ಸದ್ಯ ಸಂಪುಟದಲ್ಲಿ ಸಚಿವರಾಗಿದ್ದ ಸ್ಟಾಲಿನ್​​ ಅವರ ಪುತ್ರ ಉದಯನಿಧಿ ಸ್ಟಾಲಿನ್‌ ಅವರಿಗೆ ಉಪಮುಖ್ಯಮಂತ್ರಿಯಾಗಿ ಬಡ್ತಿ ನೀಡಲಾಗಿದೆ.

ಉದಯನಿಧಿ ಸ್ಟಾಲಿನ್ ಅವರನ್ನು ಉಪಮುಖ್ಯಮಂತ್ರಿಯಾಗಿ ನೇಮಿಸಿದ ನಂತರ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ)ನ ನಾಲ್ವರು ಶಾಸಕರು ಭಾನುವಾರ(ಸೆಪ್ಟೆಂಬರ್​​ 29) ತಮಿಳುನಾಡು ರಾಜ್ಯಪಾಲ ಆರ್ ಎನ್ ರವಿ ಅವರಿಂದ ಸಂಪುಟ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಪ್ರಮಾಣ ವಚನ ಸ್ವೀಕರಿಸಿದವರಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇತ್ತೀಚೆಗೆ ಸುಪ್ರೀಂ ಕೋರ್ಟ್‌ನಿಂದ ಜಾಮೀನು ಪಡೆದಿರುವ ಡಿಎಂಕೆ ನಾಯಕ ವಿ ಸೆಂಥಿಲ್ ಬಾಲಾಜಿ ಕೂಡ ಇದ್ದಾರೆ. ಇವರನ್ನು ಹೊರತುಪಡಿಸಿ ಆರ್ ರಾಜೇಂದ್ರನ್ (ಸೇಲಂ-ಉತ್ತರ), ಗೋವಿ ಚೆಜಿಯಾನ್ (ತಿರುವಿಡೈಮರುದೂರು), ಮತ್ತು ಎಸ್‌ಎಂ ನಾಸರ್ (ಅವಡಿ) ಈ ಮೂವರು ಶಾಸಕರು ಪ್ರಮಾಣ ವಚನ ಸ್ವೀಕರಿಸಿದರು.

ತಮಿಳುನಾಡಿನ ಮುಖ್ಯಮಂತ್ರಿಗಳ ಶಿಫಾರಸಿನ ಮೇರೆಗೆ ರಾಜ್ಯದ ಗೌರವಾನ್ವಿತ ರಾಜ್ಯಪಾಲರು ಹೊಸದಾಗಿ ಪ್ರಮಾಣ ವಚನ ಸ್ವೀಕರಿಸಿದ ಸಚಿವರಿಗೆ ವಿಷಯ ಹಂಚಿಕೆ ಮತ್ತು ಹುದ್ದೆಯನ್ನು ಅನುಮೋದಿಸಿದ್ದಾರೆ ಎಂದು ತಮಿಳುನಾಡಿನ ರಾಜಭವನ ಬಿಡುಗಡೆ ಮಾಡಿದ ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.

  • ವಿ.ಸೆಂಥಿಲಬಾಲಾಜಿ (ಕರೂರ್ ವಿಧಾನಸಭಾ ಕ್ಷೇತ್ರ): ವಿದ್ಯುತ್ ಮತ್ತು ಅಸಾಂಪ್ರದಾಯಿಕ ಇಂಧನ ಅಭಿವೃದ್ಧಿ ಅಬಕಾರಿ ಸಚಿವರು
  • ಗೋವಿ ಚೆಜಿಯಾನ್ (ತಿರುವಿಡೈಮರುದೂರ್ ವಿಧಾನಸಭಾ ಕ್ಷೇತ್ರ): ಉನ್ನತ ಶಿಕ್ಷಣ ಸಚಿವರು (ತಾಂತ್ರಿಕ ಶಿಕ್ಷಣ, ಎಲೆಕ್ಟ್ರಾನಿಕ್ಸ್, ವಿಜ್ಞಾನ ಮತ್ತು ತಂತ್ರಜ್ಞಾನ ಸೇರಿದಂತೆ ಉನ್ನತ ಶಿಕ್ಷಣ.)
  • ಆರ್ ರಾಜೇಂದ್ರನ್ (ಸೇಲಂ ಉತ್ತರ ವಿಧಾನಸಭಾ ಕ್ಷೇತ್ರ): ಪ್ರವಾಸೋದ್ಯಮ ಸಚಿವರು (ಪ್ರವಾಸೋದ್ಯಮ ಮತ್ತು ಸಕ್ಕರೆ, ಕಬ್ಬು ಅಬಕಾರಿ ಮತ್ತು ಕಬ್ಬು ಅಭಿವೃದ್ಧಿ.)
  • ಎಸ್‌ಎಂ ನಾಸರ್ (ಅವಡಿ ಅಸೆಂಬ್ಲಿ ಕ್ಷೇತ್ರ): ಅಲ್ಪಸಂಖ್ಯಾತರ ಕಲ್ಯಾಣ ಮತ್ತು ಅನಿವಾಸಿ ತಮಿಳರ ಕಲ್ಯಾಣ ಸಚಿವರು (ಅಲ್ಪಸಂಖ್ಯಾತರ ಕಲ್ಯಾಣ, ಅನಿವಾಸಿ ತಮಿಳರ ಕಲ್ಯಾಣ, ನಿರಾಶ್ರಿತರು ಮತ್ತು ವಲಸೆಗಾರರು ಮತ್ತು ವಕ್ಫ್ ಬೋರ್ಡ್.)

ಈ ಹಿಂದೆ ಯುವಜನ ಕಲ್ಯಾಣ ಮತ್ತು ಕ್ರೀಡಾ ಅಭಿವೃದ್ಧಿ ಸಚಿವರಾಗಿ ಸೇವೆ ಸಲ್ಲಿಸುತ್ತಿದ್ದ ಉದಯನಿಧಿ ಸ್ಟಾಲಿನ್ ಅವರನ್ನು ಶನಿವಾರ ಉಪಮುಖ್ಯಮಂತ್ರಿಯಾಗಿ ಪದೋನ್ನತಿಗೊಳಿಸಲಾಯಿತು. ಈ ಬಗ್ಗೆ ಮಾತನಾಡಿದ ಅವರು, ಈ ವಿಚಾರವಾಗಿ ಖಂಡಿತವಾಗಿಯೂ ಟೀಕೆಗಳಿವೆ. ಎಲ್ಲಾ ಟೀಕೆಗಳನ್ನು ಸ್ವೀಕರಿಸಲು ಮತ್ತು ಸಾರ್ವಜನಿಕರಿಗೆ ನನ್ನ ಕೈಲಾದಷ್ಟು ಕೆಲಸ ಮಾಡಲು ಪ್ರಯತ್ನಿಸುತ್ತೇನೆ. ನಿಮ್ಮ ಎಲ್ಲಾ ಟೀಕೆಗಳನ್ನು ನಾನು ಸ್ವೀಕರಿಸುತ್ತೇನೆ ಮತ್ತು ನನ್ನ ಕೆಲಸದ ಮೂಲಕ ಅವುಗಳಿಗೆ ಉತ್ತರಿಸುತ್ತೇನೆ ಎಂದು ಹೇಳಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net