ಕಾನೂನು ಸಲಹೆ: ತಾತನ ಆಸ್ತಿಯ ಹಕ್ಕನ್ನು ಪಡೆದುಕೊಳ್ಳುವುದು ಹೇಗೆ?

nyayaweb
Published on

ಪ್ರಶ್ನೆ: ನನ್ನ ತಾತನಿಗೆ 4 ಜನ ಗಂಡು ಮಕ್ಕಳು ಹಾಗೂ ಐವರೂ ಹೆಣ್ಣು ಮಕ್ಕಳು. ನನ್ನ ತಾತನವರು 2011 ರಲ್ಲಿ ಮರಣಹೊಂದಿದ್ದು, ಅಜ್ಜಿ 2016 ರಲ್ಲಿ ಮರಣಹೊಂದಿರುತ್ತಾರೆ. ನನ್ನ ತಾತನಿಗೆ ಪಿತ್ರಾರ್ಜಿತವಾಗಿ 6 ಎಕರೆ ಜಮೀನು ಬಂದಿದ್ದು, ನನ್ನ ಮಾವಂದಿರು ತಾತ ಮತ್ತು ಅಜ್ಜಿ ಮರಣಹೊಂದಿದ ನಂತರ ಅವರ ತಂಗಿಯರನ್ನು ತಿಳಿಸದೆ ಅವರುಗಳ ಹೆಸರಿಗೆ ಮಾತ್ರ ಪೌತಿ ಖಾತೆ ಮಾಡಿಸಿರುತ್ತಾರೆ, ಕೇಳಿದರೆ ನಮಗೆ ತಂಗಿಯರೇ ಇಲ್ಲ ಹಾಗಾಗಿ ನಮ್ಮ ಹೆಸರಿಗೆ ಪೌತಿ ಖಾತೆ ಮಾಡಿಸಿದ್ದೇವೆ ಎನ್ನುತ್ತಿದ್ದಾರೆ, ದಯವಿಟ್ಟು ಹಿಂದೂ ಉತ್ತರಾಧಿಕಾರ ತಿದ್ದುಪಡಿ ಕಾಯ್ದೆ-2005ರಡಿಯಲ್ಲಿ ಆಸ್ತಿಯ ಹಕ್ಕನ್ನು ಪಡೆದುಕೊಳ್ಳುವುದು ಹೇಗೆ ತಿಳಿಸಿ?

ಉತ್ತರ: ಮೃತ ಹಿಂದೂ ಪುರುಷನ ಸ್ವಯಾರ್ಜಿತ ಮತ್ತು ಪ್ರತ್ಯೇಕ ಆಸ್ತಿಗಳು ಆತನ ಪತ್ನಿ ಮತ್ತು ಎಲ್ಲ ಮಕ್ಕಳಿಗೆ ಸಮಾನವಾಗಿ ಹಂಚಿಕೆಯಾಗ ಬೇಕು. ನಿಮ್ಮ ತಾತ 2011ರಲ್ಲಿ ಮತ್ತು ನಿಮ್ಮ ಅಜ್ಜಿ 2016ರಲ್ಲಿ ತೀರಿಕೊಂಡಿರುವುದರಿಂದ ನಿಮ್ಮ ತಾತ ಮತ್ತು ಅಜ್ಜಿಯ ಎಲ್ಲ ಮಕ್ಕಳಿಗೂ ಆಸ್ತಿಯಲ್ಲಿ ಸಮಾನ ಹಕ್ಕು ಇರುತ್ತದೆ. 2005ರ ನಂತರ ನಿಮ್ಮ ತಾತ ತೀರಿಕೊಂಡಿರುವುದರಿಂದ ಯಾವುದೇ ರೀತಿಯಲ್ಲಿ ನೋಡಿದರೂ, ಈಗಿರುವ ಕಾನೂನಿನಂತೆ ನಿಮ್ಮ ತಾತನ ಹೆಣ್ಣು ಮಕ್ಕಳಿಗೂ ಸಮಪಾಲು ಬರುತ್ತದೆ. ಖಾತೆಯಲ್ಲಿ ನಿಮ್ಮ ತಾತನ ಹೆಣ್ಣು ಮಕ್ಕಳ ಹೆಸರು ಇಲ್ಲದರ ಬಗ್ಗೆ ಯೋಚಿಸಬೇಕಾಗಿಲ್ಲ.

ಕೂಡಲೇ ತಾತನ ಹೆಣ್ಣುಮಕ್ಕಳಿಗೆ ವಿಭಾಗದ ದಾವೆ ಹಾಕುವಂತೆ ತಿಳಿಸಿ. ದಾವೆಯಲ್ಲಿ ನೋಟೀಸು ಜಾರಿ ಆದ ಮೇಲೆ ಪ್ರಕರಣವನ್ನು ಮಧ್ಯಸ್ಥಿಕೆಗೆ ಕಳಿಸಲು ನ್ಯಾಯಾಲಯವನ್ನು ಕೇಳಿಕೊಳ್ಳಿ. ಮಧ್ಯಸ್ಥಿಕೆಯ ಮೂಲಕ ರಾಜೀ ಸೂತ್ರಕ್ಕೆ ಬರಬಹುದು. ಒಪ್ಪಿಗೆ ಆಗದಿದ್ದರೆ ನ್ಯಾಯಾಲಯದಲ್ಲಿ ಪ್ರಕರಣ ಮುಂದುವರೆದರೂ ಚಿಂತೆಯಿಲ್ಲ. ನಿಮ್ಮ ತಾತನ ಮಕ್ಕಳು ಎನ್ನುವುದನ್ನು ನಿಮ್ಮ ಸೋದರತ್ತೆಯರು ಸಾಬೀತು ಪಡಿಸಿದರೆ ಸಾಕು. ಧೈರ್ಯವಾಗಿ ಕೇಸು ಹಾಕಲು ತಿಳಿಸಿ. 

                                                                                        (ಅಂಕಣಕಾರರು ಹಿರಿಯ ವಕೀಲರು ಹಾಗೂ ಮಧ್ಯಸ್ಥಿಕೆದಾರರು)

ಸೂಚನೆ: ಕಾನೂನಿಗೆ ಸಂಬಂಧಿಸಿದ ನಿಮ್ಮ ಪ್ರಶ್ನೆಗಳನ್ನು susheelasarathi@yahoo.co.in ಅಥವಾ lalitha.vijayavani@gmail.com ಗೆ ಕಳುಹಿಸಬಹುದು. (ಕೋರ್ಟ್‌ಗಳಲ್ಲಿ ಇತ್ಯರ್ಥಕ್ಕೆ  ಬಾಕಿ ಇರುವ ಪ್ರಕರಣಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ದಯವಿಟ್ಟು ಕೇಳಬೇಡಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net