

ವಿಜಯವಾಣಿ ವಿಶೇಷ ಸಿದ್ದಾಪುರ
ನರೇಗಾ ಯೋಜನೆಯಡಿ ಮಹಿಳೆಯರು ನೆಮ್ಮದಿಯಿಂದ ಕೆಲಸ ಮಾಡಬೇಕೆಂಬ ಸದುದ್ದೇಶದಿಂದ ಸರ್ಕಾರ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಶಿಶುಪಾಲನಾ ಕೇಂದ್ರಗಳನ್ನು ಕೂಸಿನ ಮನೆ ಎಂಬ ಹೆಸರಿನಡಿ ಪ್ರಾರಂಭಿಸಿದೆ.
ಆದರೆ ಜನರಲ್ಲಿ ಜಾಗೃತಿ ಕೊರತೆಯಿಂದಾಗಿ ಸರ್ಕಾರದ ಮಹತ್ವಾಕಾಂಕ್ಷಿ ಕೂಸಿನ ಮನೆ ಯೋಜನೆ ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಸಾಧಿಸುವಲ್ಲಿ ವಿಫಲವಾಗಿದೆ.
ಇದನ್ನೂ ಓದಿ: ಹಳ್ಳ ಹಿಡಿದ ‘ಕೂಸಿನ ಮನೆ’ ಯೋಜನೆ
ಗ್ರಾಮೀಣ ಪ್ರದೇಶದಲ್ಲಿ ನರೇಗಾ ಯೋಜನೆಯಡಿ ಮಹಿಳೆಯರಿಗೆ ಹೆಚ್ಚಿನ ಉದ್ಯೋಗ ಅವಕಾಶ ಕಲ್ಪಿಸಲು ಹಾಗೂ ದುಡಿಯುವ ಮಹಿಳೆಯರ ಮಕ್ಕಳಿಗೆ ಸುರಕ್ಷತೆ ಯೋಜನೆ ಉದ್ದೇಶವಾಗಿತ್ತು.
ಅಲ್ಲದೆ ಪೂರಕ ಪೌಷ್ಟಿಕ ಆಹಾರ ಸೌಲಭ್ಯ ಒದಗಿಸಲು ಸಹಕಾರಿಯಾಗುವಂತೆ ಸರ್ಕಾರ 2023-24ನೇ ಸಾಲಿನಲ್ಲಿ ಈ ಕೂಸಿನ ಮನೆ ಅನುಷ್ಠಾನ ಮಾಡಿದೆ. ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ನರೇಗಾ ಕ್ರಿಯಾಶೀಲಾ ಉದ್ಯೋಗ ಕಾರ್ಡ್ ಹೊಂದಿರುವ ಕುಟುಂಬದ ಮೂರು ವಷರ್ದೊಳಗಿನ ಮಕ್ಕಳಿಗೆ ಈ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ.
ಮುಖ್ಯವಾಗಿ ನರೇಗಾ ಯೋಜನೆಯಡಿ ಅತೀ ಹೆಚ್ಚು ಮಾನವ ದಿನಗಳನ್ನು ಸೃಜಿಸುವ ಗ್ರಾಮ ಪಂಚಾಯಿತಿಗಳಲ್ಲಿ ಈ ಶಿಶು ಪಾಲನಾ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ.
ಇದರಿಂದಾಗಿ ಗ್ರಾಮೀಣ ಪ್ರದೇಶಗಳಲ್ಲಿ ಮಹಿಳೆಯರಿಗೆ ಹೆಚ್ಚಿನ ಉದ್ಯೋಗ ಅವಕಾಶಗಳನ್ನು ಕಲ್ಪಿಸಲು ಸಾಧ್ಯವಾಗುತ್ತದೆ. ಈ ಕೇಂದ್ರಗಳ ಅನುಷ್ಠಾನ, ಉಸ್ತುವಾರಿ ಮತ್ತು ಸಮರ್ಪಕ ನಿರ್ವಹಣೆಗಾಗಿ ಜಿಲ್ಲೆ, ತಾಲೂಕು ಮತ್ತು ಕೇಂದ್ರಗಳ ಹಂತದಲ್ಲಿಯೇ ಸರ್ಕಾರ ಸಮಿತಿಗಳನ್ನು ಸಹ ರಚನೆ ಮಾಡಿದೆ.
ಕೇಂದ್ರಗಳಿಗೆ ಬರುವ ಮಕ್ಕಳನ್ನು ನೋಡಿಕೊಳ್ಳಲು ಈಗಾಗಲೇ ತರಬೇತಿ ನೀಡಿದ ಕೇರ್ ಟೇಕರ್ಸ್‌ಗಳನ್ನು ಸಹ ಕೆಲಸಕ್ಕೆ ತೆಗೆದುಕೊಳ್ಳಲಾಗಿದೆ. ಕೇಂದ್ರಗಳಲ್ಲಿ ಕ್ರಿಯಾಶೀಲಾ ಉದ್ಯೋಗ ಕಾರ್ಡ್ ಹೊಂದಿರುವ ಕುಟುಂಬದ ಮಹಿಳೆಯರನ್ನು ಗುರುತಿಸಿ ಆ ಗ್ರಾಮದ ಗರಿಷ್ಠ 25 ಮಕ್ಕಳನ್ನು ಆಯ್ಕೆ ಮಾಡಿಕೊಂಡು ದಿನದಲ್ಲಿ 4 ರಿಂದ 6.30 ಗಂಟೆಗಳ ಕಾಲ ಆ ಮಕ್ಕಳನ್ನು ಕೇರ್ ಟೇಕರ್ಸ್‌ಗಳು ನೋಡಿಕೊಳ್ಳುದು ಮತ್ತು ಆಯಾ ಅವಧಿಗೆ ತಕ್ಕಂತೆ ವೇತನ ಪಾವತಿ ಸೇರಿ ಇತರ ವಿಷಯಗಳ ಬಗ್ಗೆ ಸರ್ಕಾರ ಈಗಾಗಲೇ ಸುತ್ತೋಲೆಯಲ್ಲಿ ತಿಳಿಸಿದೆ.
ಕಾರಟಗಿ ತಾಲೂಕು ವ್ಯಾಪ್ತಿಯಲ್ಲಿ ಒಟ್ಟು 13 ಗ್ರಾಮ ಪಂಚಾಯಿತಿಗಳಿವೆ. ಎಲ್ಲ ಗ್ರಾಪಂಗಳಲ್ಲಿ ಈಗಾಗಲೇ ಕೂಸಿನ ಮನೆ ನಿರ್ಮಾಣ ಮಾಡಲಾಗಿದೆ. ಕೆಲವೆಡೆ ಗ್ರಾಪಂ ಕಚೇರಿ ಆವರಣದಲ್ಲಿರುವ ಕಟ್ಟಡದಲ್ಲಿಯೇ ಶಿಶುಪಾಲನ ಕೇಂದ್ರಗಳನ್ನು ತರೆಯಲಾಗಿದೆ. ಮತ್ತೆ ಕೆಲಕಡೆ ಗ್ರಾಮ ಪಂಚಾಯಿತಿಯಿಂದ ದೂರವಿರುವ ಶಾಲೆಗಳ ಆವರಣದಲ್ಲಿ ನಿರ್ಮಾಣ ಮಾಡಲಾಗಿದೆ.
ಕೆಲವೆಡೆ ಶಾಲೆಗಳು ಬಹುದೂರ ವಿರುವುದರಿಂದ ಶಿಶುಪಾಲನ ಕೇಂದ್ರಕ್ಕೆ ಮಕ್ಕಳನ್ನು ಬಿಡಲು ಮಹಿಳೆಯರು ಹಿಂದೇಟು ಹಾಕುತ್ತಿದ್ದಾರೆ. ಇನ್ನು ಈ ಯೋಜನೆ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಕೊರತೆ ಇರುವುದರಿಂದ ಮಕ್ಕಳು ಕೂಸಿನ ಮನೆಗೆ ನಿರೀಕ್ಷಿತ ಮಟ್ಟದಲ್ಲಿ ಬರುತ್ತಿಲ್ಲ. ಹೀಗಾಗಿ ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಜನರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಬೇಕಾದ ಅವಶ್ಯಕತೆಯಿದೆ.
ಕಾರಟಗಿ ತಾಲೂಕು ವ್ಯಾಪ್ತಿಯಲ್ಲಿ ಈಗಾಗಲೇ ಸರ್ಕಾರದ ಸೂಚನೆಯಂತೆ ಎಲ್ಲ ಗ್ರಾಪಂಗಳ ವ್ಯಾಪ್ತಿಯಲ್ಲಿ ಕೂಸಿನ ಮನೆಗಳನ್ನು ನಿರ್ಮಾಣ ಮಾಡಲಾಗಿದೆ. ಮಕ್ಕಳನ್ನು ನೋಡಿಕೊಳ್ಳಲು ತರಬೇತಿ ಪಡೆದ ಕೇರ್ ಟೇಕರ್ಸ್‌ಗಳು ಸಹ ಇದ್ದಾರೆ. ಆದರೆ, ಹೆಚ್ಚಿನ ಮಕ್ಕಳು ಕೇಂದ್ರಕ್ಕೆ ಬರುತ್ತಿಲ್ಲ. ಜನರಲ್ಲಿ ಇನ್ಮುಂದೆ ಈ ಯೋಜನೆ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಲು ಕ್ರಮ ವಹಿಸಲಾಗುವುದು.| ಲಕ್ಷ್ಮೀದೇವಿ, ತಾಲೂಕು ಪಂಚಾಯಿತಿ ಇಒ ಕಾರಟಗಿ