

ನರ್ಸ್ ಸಮಯಪ್ರಜ್ಞೆಯಿಂದ ಅವಳಿ ಮಕ್ಕಳ ತಾಯಿಗೆ ಹೊಸ ಜೀವನವೇ ಸಿಕ್ಕಿದೆ. ನೂರು ವಿದ್ಯೆಗಳನ್ನು ಕಲಿಯುವುದು ದೊಡ್ಡದಲ್ಲ...ಅದನ್ನು ಸಮಯಕ್ಕೆ ಸರಿಯಾಗಿ ಪ್ರಯೋಗಿಸುವುದು ತುಂಬ ಮುಖ್ಯ ಎಂಬುದನ್ನು ಈ ದಾದಿ ತೋರಿಸಿಕೊಟ್ಟಿದ್ದಾರೆ.
ಮಹಾರಾಷ್ಟ್ರದ ಔರಂಗಾಬಾದ್ನಲ್ಲಿ ನಡೆದ ಈ ಘಟನೆಯ ಬಗ್ಗೆ ತಿಳಿದರೆ ನಿಮಗೂ ಹೆಮ್ಮೆಯೆನಿಸುತ್ತದೆ.
ಔರಂಗಾಬಾದ್ನ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಸ್ತ್ರೀರೋಗ ಮತ್ತು ಪ್ರಸೂತಿ ವಿಭಾಗದ ವೈದ್ಯ ಡಾ. ಶ್ರೀನಿವಾಸ್ ಗಡಪ್ಪಾ ಅವರು ಘಟನೆ ಬಗ್ಗೆ ವಿವರಿಸಿ, ನರ್ಸ್ ಜ್ಞಾನೇಶ್ವರಿ ಘೋಡ್ಕೆ ಅವರನ್ನು ಕೊಂಡಾಡಿದ್ದಾರೆ.
ಜ್ಞಾನೇಶ್ವರಿ ಅವರು ಸಮಯಕ್ಕೆ ಸರಿಯಾಗಿ ವೈದ್ಯಕೀಯ ಸಲಹೆಯನ್ನು ನೀಡದೆ ಇದ್ದರೆ, ಮಹಿಳೆಯ ರಕ್ತಸ್ರಾವ ನಿಲ್ಲಿಸಲು ಸಾಧ್ಯವಾಗುತ್ತಿರಲಿಲ್ಲ. ಅಷ್ಟೇ ಅಲ್ಲ, ಅನ್ಯಾಯವಾಗಿ ಅವರಿಗೆ ಇನ್ನೊಂದು ಸರ್ಜರಿ ಮಾಡಿ, ಗರ್ಭಕೋಶವನ್ನೇ ತೆಗೆಯಬೇಕಿತ್ತು ಎಂದು ಹೇಳಿದ್ದಾರೆ.
22 ವರ್ಷದ ಯುವತಿ ಜು.17ರಂದು ನಮ್ಮ ಆಸ್ಪತ್ರೆಯಲ್ಲಿ ಅವಳಿ ಮಕ್ಕಳಿಗೆ ಜನ್ಮನೀಡಿದರು. ಅವರಿಗೆ ಸಿಸೇರಿಯನ್ ಮೂಲಕ ಹೆರಿಗೆ ಮಾಡಿಸಲಾಗಿತ್ತು. ಆದರೆ ಸಿಸೇರಿಯನ್ ಆದ ಬಳಿಕ ಅವರಿಗೆ ಒಂದೇ ಸಮನೆ ರಕ್ತಸ್ರಾವ ಶುರುವಾಯಿತು. ಎಷ್ಟೇ ಚಿಕಿತ್ಸೆ ನೀಡಿದರೂ, ಪ್ರಯತ್ನಿಸಿದರೂ ಬ್ಲೀಡಿಂಗ್ ಮಾತ್ರ ನಿಲ್ಲುತ್ತಲೇ ಇರಲಿಲ್ಲ.
ಯುವತಿಯ ಜೀವ ಉಳಿಸಬೇಕು ಎಂದರೆ ಎರಡನೇ ಸರ್ಜರಿ ಮಾಡಲೇಬೇಕಿತ್ತು. ಗರ್ಭಕೋಶ ಹೊರತೆಗೆದು, ರಕ್ತಸ್ರಾವ ನಿಲ್ಲಿಸುವುದು ಅನಿವಾರ್ಯವಾಗಿತ್ತು. ಅದಕ್ಕಾಗಿ ನಾವೆಲ್ಲ ವೈದ್ಯರು ಸಿದ್ಧತೆ ಮಾಡಿಕೊಳ್ಳುತ್ತಿದ್ದೆವು. ಅಷ್ಟರಲ್ಲಿ ದಾದಿ ಘೋಡ್ಕೆ, ಆ ಮಹಿಳೆಗೆ ನವಜಾತ ಶಿಶುಗಳಿಗೆ ಹಾಲೂಡಿಸುವಂತೆ ಸಲಹೆ ನೀಡಿದರು. ಅವಳಿ ಮಕ್ಕಳಿಗೆ ಎದೆಹಾಲು ಉಣಿಸಲು ತಿಳಿಸಿದರು.
ಇದು ಸುಮ್ಮನೆ ಹೇಳಿದ್ದಲ್ಲ. ವೈದ್ಯಕೀಯವಾಗಿ ಇದಕ್ಕೆ ಕಾರಣವಿದೆ. ಎದೆಹಾಲು ಉಣಿಸುವ ಸಂದರ್ಭದಲ್ಲಿ ಮಹಿಳೆಯರ ದೇಹದಲ್ಲಿ ಬಿಡುಗಡೆಯಾಗುವ ಆಕ್ಸಿಟೋಸಿನ್ ಹಾರ್ಮೋನುಗಳು ರಕ್ತಸ್ರಾವ ನಿಲ್ಲಿಸುವುದರಲ್ಲಿ ತುಂಬ ಸಹಕಾರಿ. ಅದೇ ಐಡಿಯಾವನ್ನು ಇಲ್ಲಿಯೂ ಅನ್ವಯ ಮಾಡಲಾಯಿತು ಎಂದು ವೈದ್ಯರು ತಿಳಿಸಿದ್ದಾರೆ. ಇದನ್ನೂ ಓದಿ: ಕೋವಿಡ್ನಂಥ ಲಾಕ್ಡೌನ್ಗಳಿಂದ ಪಾರಾಗಲು ಸುರಕ್ಷಿತ ಅಡಗುದಾಣ ಹುಡುಕುತ್ತಿರುವ ಅತಿಶ್ರೀಮಂತರು
ನಮಗೆ ಈ ವಿಷಯ ಗೊತ್ತಿತ್ತು. ಆದರೆ ಯಾವತ್ತೂ ಪ್ರಯೋಗ ಮಾಡಿರಲಿಲ್ಲ. ಅವಳಿ ಮಕ್ಕಳಿಗೆ ಹಾಲುಣಿಸಲು ಪ್ರಾರಂಭಿಸಿ ಮಹಿಳೆಗೆ ಒಂದು ತಾಸಿನಲ್ಲಿ ರಕ್ತಸ್ರಾವ ನಿಂತುಹೋಯಿತು. ಗರ್ಭಕೋಶ ತೆಗೆದಿದ್ದರೆ ಮುಂದೆ ಕೆಲವು ಸಮಸ್ಯೆಗಳನ್ನು ಅವರು ಎದುರಿಸಬೇಕಿತ್ತು. ಆದರೆ ನರ್ಸ್ ಆ ಮಹಿಳೆಗೆ ಒಂದು ಹೊಸ ಜೀವನವನ್ನೇ ನೀಡಿದರು ಎಂದು ವೈದ್ಯರು ತಿಳಿಸಿದ್ದಾರೆ.
ನರ್ಸ್ ಘೋಡ್ಕೆ ಅವರು 11 ವರ್ಷದಿಂದ ಇದೇ ಉದ್ಯೋಗದಲ್ಲಿ ಇದ್ದಾರೆ. ತನ್ನ ದಾದಿ ವೃತ್ತಿಯ ಸಂದರ್ಭದಲ್ಲಿ ಕಲಿತ ಆಕ್ಸಿಟೋಸಿನ್ ಪಾಠವನ್ನು ಸರಿಯಾದ ಸಮಯದಲ್ಲಿ ಪ್ರಯೋಗಿಸಿದ್ದಾರೆ ಎಂದು ಹೊಗಳಿದ್ದಾರೆ. (ಏಜೆನ್ಸೀಸ್)