

ಪಟನಾ: ದೇಶದಾದ್ಯಂತ ಆಕ್ರೋಶಕ್ಕೆ ಕಾರಣವಾಗಿರುವ ಕೋಲ್ಕತಾದ ಟ್ರೈನಿ ವೈದ್ಯೆಯ ಅತ್ಯಾಚಾರ-ಕೊಲೆ ಪ್ರಕರಣ ನಡೆದು ಒಂದು ತಿಂಗಳಾದ ನಂತರ ಬಿಹಾರದ ಖಾಸಗಿ ಆಸ್ಪತ್ರೆಯೊಂದರಲ್ಲಿ ತನ್ನ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಯತ್ನವನ್ನು ದಾದಿಯೊಬ್ಬರು ಸಮಯಪ್ರಜ್ಞೆ ಹಾಗೂ ಸಾಹಸದಿಂದ ವಿಫಲಗೊಳಿಸಿದ ಪ್ರಕರಣ ವರದಿಯಾಗಿದೆ. ಸಾಮೂಹಿಕ ಅತ್ಯಾಚಾರಕ್ಕೆ ಯತ್ನಿಸಿದ ಒಬ್ಬ ವೈದ್ಯನ ಮರ್ವಂಗಕ್ಕೆ ಬ್ಲೇಡ್ನಿಂದ ಗಾಯಗೊಳಿಸಿದ ದಾದಿ ತನ್ನ ಮೇಲಿನ ದೌರ್ಜನ್ಯವನ್ನು ತಡೆದಿದ್ದಾರೆ.
ಸಮಷ್ಠಿಪುರ ಜಿಲ್ಲೆಯ ಗಂಗಾಪುರದ ಆರ್ಬಿಎಸ್ ಹೆಲ್ತ್ ಕೇರ್ ಸೆಂಟರ್ನ ದಾದಿ, ಬುಧವಾರ ರಾತ್ರಿ ಕೆಲಸ ಮುಗಿಸಿ ಮನೆಗೆ ಹೋಗುವ ಸಿದ್ಧತೆಯಲ್ಲಿದ್ದಾಗ ಆಸ್ಪತ್ರೆಯ ಆಡಳಿತಾಧಿಕಾರಿಯೂ ಆದ ವೈದ್ಯ ಸಂಜಯ್ ಕುಮಾರ್ ಹಾಗೂ ಆತನ ಇಬ್ಬರು ಸಹಚರರು ಆಕೆ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲು ಮುಂದಾದರು. ಆ ವೇಳೆ, ಮೂರೂ ಆರೋಪಿಗಳು ಪಾನಮತ್ತರಾಗಿದ್ದರು ಎಂದು ತಿಳಿದು ಬಂದಿದೆ. ಕುಮಾರ್ ಮತ್ತಿತರರ ಹಿಡಿತದಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ನರ್ಸ್, ಕೈಗೆ ಸಿಕ್ಕ ಬ್ಲೇಡ್ನಿಂದ ವೈದ್ಯನ ಗುಪ್ತಾಂಗವನ್ನು ಕತ್ತರಿಸಿ ಗಾಯಗೊಳಿಸಿದರು. ದುರುಳರ ಕೈಯಿಂದ ತಪ್ಪಿಸಿಕೊಂಡು ಹೋಗಲು ಸಫಲರಾದ ಆಕೆ, ಸಮೀಪದ ಹೊಲವೊಂದರಲ್ಲಿ ಅಡಗಿ ಕುಳಿತು ಮೊಬೈಲ್ನಿಂದ ಪೊಲೀಸರಿಗೆ ಫೋನ್ ಮಾಡಿದರು. ತಕ್ಷಣವೇ ಆಸ್ಪತ್ರೆಗೆ ಧಾವಿಸಿದ ಪೊಲೀಸರ ತಂಡ, ದಾದಿಯ ಸುರಕ್ಷತೆಯನ್ನು ಖಾತರಿಪಡಿಸಿ ಮೂರೂ ಆರೋಪಿಗಳನ್ನು ಬಂಧಿಸಿತು ಎಂದು ಡಿವೈಎಸ್ಪಿ ಸಂಜಯ್ ಕುಮಾರ್ ಪಾಂಡೆ ತಿಳಿಸಿದ್ದಾರೆ. ಇನ್ನಿಬ್ಬರು ಆರೋಪಿಗಳನ್ನು ಸುನಿಲ್ ಕುಮಾರ್ ಗುಪ್ತಾ ಮತ್ತು ಅವಧೇಶ್ ಕುಮಾರ್ ಎಂದು ಗುರುತಿಸಲಾಗಿದೆ. ಬಿಹಾರದಲ್ಲಿ ಜಾರಿಯಲ್ಲಿರುವ ಪಾನ ನಿಷೇಧ ಕಾನೂನು ಅನ್ವಯವೂ ಆರೋಪಿಗಳ ವಿರುದ್ಧ ಕೇಸ್ಗಳನ್ನು ದಾಖಲಿಸಲಾಗಿದೆ.
ನವದೆಹಲಿ: ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದ ರೈಲ್ವೆ ಸಿಬ್ಬಂದಿಯು ಸಂತ್ರಸ್ತೆಯ ಸಂಬಂಧಿಕರು ಮತ್ತು ಸಾರ್ವಜನಿಕರ ಥಳಿತದಿಂದಾಗಿ ಸಾವಿಗೀಡಾಗಿದ್ದಾನೆ. ಬಿಹಾರದಿಂದ ಹೊರಟು ಗುರುವಾರ ದೆಹಲಿ ತಲುಪಿದ ಹಮ್ಫರ್ ಎಕ್ಸ್ಪ್ರೆಸ್ನಲ್ಲಿ ಈ ಪ್ರಕರಣ ನಡೆದಿದೆ. ರೈಲ್ವೆಯ ಡಿ ಗ್ರೂಪ್ ಉದ್ಯೋಗಿ ಪ್ರಶಾಂತ್ ಕುಮಾರ್ ಎಂಬಾತ ಬಾಲಕಿಯನ್ನು ತನ್ನ ಸೀಟ್ನಲ್ಲಿ ಕುಳಿತುಕೊಳ್ಳುವಂತೆ ಮಾಡಿದ್ದ. ಬಳಿಕ ಆಕೆಯ ತಾಯಿ ಶೌಚಗೃಹಕ್ಕೆ ಹೋಗಿದ್ದಾಗ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದ. ರೈಲು ಲಖನೌದ ಐಷ್ಬಾಗ್ ಜಂಕ್ಷನ್ಗೆ ಬರುತ್ತಿದ್ದಂತೆ ಸಂಬಂಧಿಕರು ಹಾಗೂ ಇತರ ಪ್ರಯಾಣಿಕರು ಸೇರಿ ಆರೋಪಿಗೆ ಥಳಿಸಿದ್ದಾರೆ. ಸುಮಾರು ಒಂದೂವರೆ ಗಂಟೆಯ ಪ್ರಯಾಣದುದ್ದಕ್ಕೂ ಜನರು ಥಳಿಸಿದ್ದರು. ನಂತರ ರೈಲ್ವೆ ಪೊಲೀಸರು ಆತನನ್ನು ಆಸ್ಪತ್ರೆಗೆ ಕರೆದೊಯ್ದಿದ್ದು, ಅಷ್ಟರಲ್ಲಾಗಲೇ ಆತ ಸಾವಿಗೀಡಾಗಿದ್ದ.