ಶತಕೋಟ್ಯಧಿಪತಿ ಭಾರತೀಯರ ಸಂಖ್ಯೆ 191ಕ್ಕೆ; ಕುಬೇರರ ಸಂಖ್ಯೆಯಲ್ಲಿ ಶೇ.6 ಹೆಚ್ಚಳ

India Currency
Published on

ನವದೆಹಲಿ: ಭಾರತದಲ್ಲಿ ಅತ್ಯಧಿಕ ಸಂಪತ್ತು ಹೊಂದಿರುವ ವ್ಯಕ್ತಿಗಳ (ಎಚ್​ಎನ್​ಡಬ್ಲ್ಯುಐ) ಪ್ರಮಾಣ 2024ರಲ್ಲಿ ಶೇಕಡ 6ರಷ್ಟು ಹೆಚ್ಚಾಗಿದ್ದು ಸಂಪತ್ತಿನ ಬೆಳವಣಿಗೆಯಿಂದಾಗಿ ಶತಕೋಟ್ಯಧಿಪತಿ ಭಾರತೀಯರ ಸಂಖ್ಯೆ191ಕ್ಕೆ ಏರಿದೆ ಎಂದು ನೈಟ್ ಫ್ರಾಂಕ್ ಸಂಸ್ಥೆ ಹೇಳಿದೆ.

10 ದಶಲಕ್ಷ ಅಮೆರಿಕನ್ ಡಾಲರ್​ಗಿಂತ ಅಧಿಕ ಐಶ್ವರ್ಯ ಹೊಂದಿರುವ ಭಾರತೀಯರ ಪ್ರಮಾಣ ಶೇ.6ರಷ್ಟು ಏರಿ 85,698 ಆಗಿದೆ. ಹಿಂದಿನ ವರ್ಷ ಅದು 80,686 ಆಗಿತ್ತು ಎಂದು ಬುಧವಾರ ಬಿಡುಗಡೆ ಮಾಡಿದ ‘ವೆಲ್ತ್ ರಿಪೋರ್ಟ್​-2025’ರಲ್ಲಿ ಆಸ್ತಿಪಾಸ್ತಿ ಸಮಾಲೋಚಕ ಕಂಪನಿ (ಪ್ರಾಪರ್ಟಿ ಕನ್ಸಲ್ಟಂಟ್) ತಿಳಿಸಿದೆ. ಎಚ್​ಎನ್​ಡಬ್ಲ್ಯುಐಗಳ ಸಂಖ್ಯೆ 2028ರ ವೇಳೆಗೆ 93,753ಕ್ಕೆ ಏರುವ ನಿರೀಕ್ಷೆ ಇದೆ ಎಂದು ಅದು ಅಂದಾಜು ಮಾಡಿದೆ. ಇದು ಭಾರತದಲ್ಲಿ ಸಂಪತ್ತು ಹೆಚ್ಚಳವಾಗುತ್ತಿರುವ ಸೂಚನೆಯಾಗಿದೆ ಎಂದಿದೆ.

ಎಚ್​ಎನ್​ಡಬ್ಲ್ಯುಐ ಜನರ ಏರಿಕೆಯಾಗುತ್ತಿರುವ ಪ್ರವೃತ್ತಿಯು ದೇಶದ ದೀರ್ಘಕಾಲೀನ ಆರ್ಥಿಕ ಬೆಳವಣಿಗೆ, ಹೆಚ್ಚುತ್ತಿರುವ ಹೂಡಿಕೆ ಅವಕಾಶಗಳು ಮತ್ತು ಐಷಾರಾಮಿ ಮಾರುಕಟ್ಟೆ ರೂಪುಗೊಳ್ಳುತ್ತಿರುವುದನ್ನು ಎತ್ತಿ ತೋರಿಸುತ್ತದೆ. ಜಾಗತಿಕ ಸಂಪತ್ತು ಸೖಷ್ಟಿಯಲ್ಲಿ ಭಾರತವೂ ಒಂದು ಪ್ರಮುಖ ಪಾತ್ರಧಾರಿಯಾಗಿ ಮುಂಚೂಣಿಗೆ ಬರುತ್ತಿರುವುದನ್ನು ಸೂಚಿಸುತ್ತದೆ ಎಂದು ನೈಟ್ ಫ್ರಾಂಕ್ ಇಂಡಿಯಾದ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ ಶಿಶಿರ್ ಬಜಾಲ್ ಹೇಳಿದ್ದಾರೆ. ಜಾಗತಿಕ ಧನಿಕರಲ್ಲಿ ಭಾರತದ ಪಾಲು ಶೇ.3.7 ಆಗಿದ್ದು ನಾಲ್ಕನೇ ಸ್ಥಾನದಲ್ಲಿದೆ. ಅಮೆರಿಕ (9,05,413 ಎಚ್​ಎನ್​ಡಬ್ಲ್ಯುಐ), ಚೀನಾ (4,71,634) ಮತ್ತು ಜಪಾನ್ (1,22,119) ಮೊದಲ 3 ಸ್ಥಾನದಲ್ಲಿವೆ. 2019ರಲ್ಲಿ ಭಾರತೀಯ ಶತಕೋಟ್ಯಧಿಪತಿಗಳ (ಬಿಲಿಯನೇರ್) ಸಂಖ್ಯೆ ಕೇವಲ 9 ಇದ್ದಿದ್ದು 2024ರ ಒಂದೇ ವರ್ಷ 26 ಸೇರ್ಪಡೆಯಾಗಿ ಅವರ ಒಟ್ಟು ಸಂಖ್ಯೆ 191 ಆಗಿದೆ.

ರಿಯಲ್ ಎಸ್ಟೇಟ್ ವಿಶ್ವದಲ್ಲಿ ಬೆಂಗಳೂರಿಗೆ 40ನೇ ಸ್ಥಾನ: ರಿಯಲ್ ಎಸ್ಟೇಟ್ ಬೆಳವಣಿಗೆ ಕ್ಷೇತ್ರದಲ್ಲಿ ಬೆಂಗಳೂರು ಜಾಗತಿಕವಾಗಿ 40ನೇ ಸ್ಥಾನದಲ್ಲಿದೆ. ಐಷಾರಾಮಿ ವಸತಿಗಳ ವಾರ್ಷಿಕ ಬೆಲೆ ಏರಿಕೆಯಲ್ಲಿ ಜಗತ್ತಿನ 100 ನಗರಗಳ ಪೈಕಿ ದೆಹಲಿ 18 ಹಾಗೂ ಮುಂಬೈ 21ನೇ ಶ್ರೇಯಾಂಕಕ್ಕೆ ಏರಿದೆ. ಪ್ರೖೆಂ ಇಂಟರ್​ನ್ಯಾಷನಲ್ ರೆಸಿಡೆನ್ಶಿಯಲ್ ಇಂಡೆಕ್ಸ್ (ಪಿಐಆರ್​ಐ 100) ಮೌಲ್ಯ 2024ರಲ್ಲಿ ಶೇ. 3.6 ಏರಿಕೆ ಆಗಿದೆಯೆಂದು ನೈಟ್ ಫ್ರಾಂಕ್ ವರದಿ ತಿಳಿಸಿದೆ. ದೆಹಲಿ 2024ರ 37ನೇ ಸ್ಥಾನದಿಂದ 18 ಹಾಗೂ ಬೆಂಗಳೂರು 59ನೇ ಸ್ಥಾನದಿಂದ 40ಕ್ಕೆ ಜಿಗಿದಿದೆ. ಆದರೆ, ಭಾರತದ ಆರ್ಥಿಕ ರಾಜಧಾನಿ ಮುಂಬೈ 2023ರಲ್ಲಿ ಇದ್ದದ್ದಕ್ಕಿಂತ 13 ಸ್ಥಾನ ಕಳೆದುಕೊಂಡು 21ಕ್ಕೆ ಕುಸಿದಿದೆ. ಸಿಯೋಲ್, ಮನಿಲಾ, ದುಬೈ, ರಿಯಾದ್ ಮತ್ತು ಟೋಕಿಯೋ ಅಗ್ರ ಟಾಪ್ 5 ಸ್ಥಾನದಲ್ಲಿವೆ. ಕಲೆ, ವೈನ್, ವಿರಳ ವಿಸ್ಕಿ, ಬಣ್ಣದ ಡೈಮಂಡ್ ಮತ್ತು ಪೀಠೋಪಕರಣಗಳ ಬೆಲೆಗಳು 2024ರಲ್ಲಿ ಕುಸಿದಿವೆ ಎಂಬ ವಿಚಾರವನ್ನೂ ನೈಟ್ ಫ್ರಾಂಕ್ ಬಹಿರಂಗಪಡಿಸಿದೆ. ಕಲಾತ್ಮಕ ವಸ್ತುಗಳ ಬೆಲೆ ಗರಿಷ್ಠ ಶೇ. 18.3 ಇಳಿಕೆ ದಾಖಲಿಸಿದೆ. ಹ್ಯಾಂಡ್​ಬ್ಯಾಗ್ (ಶೇ. 2.8), ಆಭರಣಗಳು (ಶೇ. 2.3), ನಾಣ್ಯಗಳು (ಶೇ. 2.1), ಕೈಗಡಿಯಾರಗಳು (ಶೇ. 1.7) ಮತ್ತು ಕ್ಲಾಸಿಕ್ ಕಾರ್​ಗಳು (ಶೇ. 1.2) ಬೆಲೆಗಳಲ್ಲಿ ಏರಿಕೆ ಕಂಡ ಐಷಾರಾಮಿ ವಸ್ತುಗಳಾಗಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net