

ಶಿವಮೊಗ್ಗ: ನುಲಿಯ ಚಂದಯ್ಯ ಕಾಯಕಕ್ಕೆ ಹೆಸರು ವಾಸಿಯಾದವರು. ಇವರು ಸುಮಾರು 48 ವಚನಗಳನ್ನು ರಚಿಸಿದ್ದು, ಆ ಮೂಲಕ ಕಾಯಕ ಸಮೂಹಕ್ಕೆ ಹೆಚ್ಚು ಶಕ್ತಿಯನ್ನು ತುಂಬಿದ್ದಾರೆ. ಉತ್ತಮ ಸಂದೇಶ ನೀಡಿದ್ದಾರೆ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಹೇಳಿದರು.
ಜಿಲ್ಲಾಡಳಿತದಿಂದ ಶನಿವಾರ ಏರ್ಪಡಿಸಿದ್ದ ನುಲಿಯ ಚಂದಯ್ಯ ಜಯಂತಿ ಉದ್ಘಾಟಿಸಿ ಮಾತನಾಡಿದ ಅವರು, ನುಲಿಯ ಚಂದಯ್ಯ ಕೆರೆಯ ಹಿನ್ನೀರ ದಡದಲ್ಲಿ ಬೆಳೆದ ಸೊಗಸಾದ ಹುಲ್ಲು ತಂದು ಹಗ್ಗ ಹೊಸೆದು ಅದನ್ನು ಮಾರಿ ಬಂದ ಹಣದಿಂದ ಜಂಗಮರಿಗೆ ದಾಸೋಹ ನಡೆಸುತ್ತಿದ್ದರು ಎಂದು ಹೇಳಿದರು.
ಬನವಾಸಿಯ ಮಧುಕೇಶ್ವರ ದೇವಾಲಯದ ಕಲ್ಲು ಮಂಟಪದಲ್ಲಿ ನುಲಿಯ ಚಂದಯ್ಯ, ಅಗ್ಗವಣಿಯ ಹೊನ್ನಯ್ಯ, ಮೋಳಿಗೆ ಮಾರಯ್ಯ. ಹಡಪದ ಅಪ್ಪಣ್ಣ, ಜೇಡರ ದಾಸಿಮಯ್ಯ, ಆಯ್ದಕ್ಕಿ ಮಾರಯ್ಯ, ಹಾಳಿನ ಹಂಪಣ್ಣ ಅವರ ಮೂರ್ತಿಗಳನ್ನು ಅವರವರ ಅಂಕಿತ ನಾಮದೊಡನೆ ಕೆತ್ತಲಾಗಿದೆ ಎಂದರು.ತಿಳಿಸಿದರು.
ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸಿ.ಎಸ್.ಚಂದ್ರಭೂಪಾಲ ಮಾತನಾಡಿ, ನುಲಿಯ ಚಂದಯ್ಯ 12ನೇ ಶತಮಾನದಲ್ಲಿ ಬಸವಣ್ಣನವರಿಗೆ ಬಹಳ ಪ್ರಿಯವಾದ ವಚನಕಾರರಾಗಿದ್ದರು. ಶಾಲಾ, ಕಾಲೇಜುಗಳಲ್ಲೂ ಇಂತಹ ಮಹನೀಯರ ಕಾರ್ಯಕ್ರಮಗಳನ್ನು ಆಚರಣೆ ಮಾಡುವ ಮೂಲಕ ಮಕ್ಕಳಲ್ಲಿ ಅರಿವು ಮೂಡಿಸಬೇಕು ಎಂದು ಅಭಿಪ್ರಾಯಪಟ್ಟರು.
ಸಮಾಜದ ಮುಖಂಡ ಅನಿಲ್‌ಕುಮಾರ್ ವಿಶೇಷ ಉಪನ್ಯಾಸ ನೀಡಿ, ನುಲಿಯ ಚಂದಯ್ಯ ಕಾಯಕಕ್ಕೆ ಹೆಚ್ಚಿನ ಪ್ರಾಮುಖ್ಯತೆ ಕೊಡುತ್ತಿದ್ದರು. ಗುರುವೇ ಆಗಿರಲಿ, ಜಂಗಮನೇ ಆಗಿರಲಿ ಆತ ಮೊದಲು ಕಾಯಕವನ್ನು ಮಾಡಬೇಕು ಎಂದು ತಮ್ಮ ವಚನಗಳಲ್ಲಿ ಅವರು ತಿಳಿಸಿದ್ದಾರೆ ಎಂದರು.
ಮನುಷ್ಯನಿಗೆ ಕಾಯಕ ನಿಷ್ಠೆ ಮುಖ್ಯ. ಪ್ರೀತಿಯಿಂದ ಕಾಯಕ ಮಾಡಿದರೆ ಮಾತ್ರ ಮಾನವೀಯ ಗುಣಗಳು ಹುಟ್ಟಲು ಸಾಧ್ಯ ಎಂದಿರುವ ನುಲಿಯ ಚಂದಯ್ಯ ಬಲವಂತದ ಹಾಗೂ ಕಾಡಿ ಬೇಡಿ ಮಾಡುವ ಕಾಯಕ ತೃಪ್ತಿ ನೀಡುವುದಿಲ್ಲ ಎಂದಿದ್ದಾರೆ ಎಂದು ತಿಳಿಸಿದರು.
ಎಎಸ್ಪಿ ರಮೇಶ್ ಕುಮಾರ್ ಮಾತನಾಡಿ, ನುಲಿಯ ಚಂದಯ್ಯ ಅನುಭವ ಮಂಟಪದಿಂದ ದೂರಾದ ಮೇಲೆ ಶಿವಮೊಗ್ಗ, ತೀರ್ಥಹಳ್ಳಿ ಹಾಗೂ ಹೊಳಲ್ಕೆರೆಗೆ ಬಂದಿದ್ದರು. ಇಲ್ಲಿಯೂ ಕಾಯಕ ಮಾಡಿ ದಾಸೋಹವನ್ನು ನೀಡಿದರು. ಇಂತಹ ಮಹನೀಯರು ಹಾಕಿ ಕೊಟ್ಟ ದಾರಿಯಲ್ಲಿ ನಾವೆಲ್ಲಾ ಸಾಗಬೇಕು. ಆಗ ಮಾತ್ರ ಅವರ ವಿಚಾರಗಳನ್ನು ಸಮಾಜದಲ್ಲಿ ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ತಹಸೀಲ್ದಾರ್ ರಾಜೀವ್, ಕೊರಚ ಸಮಾಜದ ಸಂಘದ ಜಿಲ್ಲಾಧ್ಯಕ್ಷ ಸುರೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಉಮೇಶ್ ಮುಂತಾದವರು ಉಪಸ್ಥಿತರಿದ್ದರು.