ರಷ್ಯಾದಿಂದ ಮತ್ತೆ ಅಣ್ವಸ್ತ್ರ ಎಚ್ಚರಿಕೆ

Kive
ಯೂಕ್ರೇನ್ ರಾಜಧಾನಿ ಕಿಯೆವ್ ಸಮೀಪ ಬುಚ್​ನಲ್ಲಿ ನಡೆದ ರಷ್ಯಾ ದಾಳಿ.
Published on
ಯೂಕ್ರೇನ್ ಯುದ್ಧಭೂಮಿಯಲ್ಲಿ ರಷ್ಯಾ ಸೇನೆ ಆಕ್ರಮಣ ತೀವ್ರಗೊಳಿಸುತ್ತಿದ್ದು, ಇನ್ನೂ ಸಾವಿರಾರು ವಿದ್ಯಾರ್ಥಿಗಳು ವಿವಿಧ ಪಟ್ಟಣಗಳಲ್ಲಿ ಸಿಲುಕಿರುವುದು ಆತಂಕ ತಂದಿದೆ. ರ್ಖಾವ್ ಪಟ್ಟಣವನ್ನು ತಕ್ಷಣ ತೊರೆಯುವಂತೆ ಸರ್ಕಾರ ವಿದ್ಯಾರ್ಥಿಗಳಿಗೆ ಸೂಚಿಸಿದೆ. ಕೇಂದ್ರ ಸರ್ಕಾರದ ಆಪರೇಷನ್ ಗಂಗಾ ಚುರುಕಿನಿಂದ ನಡೆಯುತ್ತಿದ್ದು, ಗಡಿ ಪ್ರದೇಶಕ್ಕೆ ಬಂದಿರುವ ಭಾರತೀಯರನ್ನು ರಕ್ಷಣೆ ಮಾಡಲಾಗುತ್ತಿದೆ. ರಷ್ಯಾದ ಸಚಿವ ಅಣ್ವಸ್ತ್ರ ಬಳಕೆ ಕುರಿತು ಪರೋಕ್ಷ ಎಚ್ಚರಿಕೆ ನೀಡಿರುವುದು ಸಂಚಲನ ಮೂಡಿಸಿದೆ.

ಮಾಸ್ಕೋ/ಕಿಯೆವ್: ಯೂಕ್ರೇನ್ ಮೇಲೆ ರಷ್ಯಾ ಸೇನೆಯ ದಾಳಿ ಸತತ ಏಳನೇ ದಿನ ಮುಂದುವರಿದಿದೆ. ರ್ಖಾವ್ ಪಟ್ಟಣದ ಮೇಲೆ ರಷ್ಯಾ ಸೇನೆ ಕ್ಷಿಪಣಿ ದಾಳಿ ನಡೆಸಿದೆ. ಪ್ರಾದೇಶಿಕ ಆಡಳಿತ ಕಟ್ಟಡ ಫ್ರೀಡಂ ಸ್ಕೆ್ವೕರ್ ಮೇಲೆ ಈ ದಾಳಿ ನಡೆದಿದ್ದು ಕನಿಷ್ಠ 21 ಜನ ಮೃತಪಟ್ಟಿದ್ದು, 110ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಈ ನಡುವೆ, ಮೂರನೇ ವಿಶ್ವ ಮಹಾಯುದ್ಧ ನಡೆದರೆ ಆಗ ಅಣ್ವಸ್ತ್ರ ಬಳಕೆಯಾಗಲಿದೆ ಎಂದು ರಷ್ಯಾದ ವಿದೇಶಾಂಗ ಸಚಿವ ಸೆರ್ಗೆ ಲಾವ್​ರೋವ್ ಎಚ್ಚರಿಸಿದ್ದಾಗಿ ಆರ್​ಐಎ ನ್ಯೂಸ್ ಏಜೆನ್ಸಿ ವರದಿ ಮಾಡಿದೆ. ಒಂದೊಮ್ಮೆ ಕಿಯೆವ್ ಬಳಿ ಅಣ್ವಸ್ತ್ರ ಇದ್ದರೆ ಖಚಿತವಾಗಿ ಅದು ‘ನಿಜವಾದ ಅಪಾಯ’ವನ್ನು ಎದುರಿಸಲಿದೆ ಎಂದು ಕಳೆದ ವಾರ ಲಾವ್​ರೋವ್ ಎಚ್ಚರಿಸಿದ್ದರು. ಈಗ ರಷ್ಯಾದ ವಿಶೇಷ ಮಿಲಿಟರಿ ಕಾರ್ಯಾಚರಣೆ ಒಂದು ವಾರ ದಾಟಿದ್ದು, ಮೂರನೇ ಮಹಾಯುದ್ಧದ ಪ್ರಸ್ತಾಪವನ್ನು ಲಾವ್​ರೋವ್ ಮಾಡಿರುವುದು ಗಮನಾರ್ಹ.

6 ದಿನ 6 ಸಾವಿರ ರಷ್ಯನ್ನರ ಹತ್ಯೆ: ಯೂಕ್ರೇನ್ ಮೇಲೆ ರಷ್ಯನ್ನರ ದಾಳಿ ಏಳನೇ ದಿನ ದಾಟಿದೆ. ರಷ್ಯಾದ ವಾಯುಪಡೆ ಯೂಕ್ರೇನ್​ನ ರ್ಖಾವ್ ಪಟ್ಟಣದ ಮೇಲೆ ನಿರಂತರ ಶೆಲ್ಲಿಂಗ್ ಮಾಡುತ್ತಿದೆ. ಆದಾಗ್ಯೂ, ಆರು ದಿನಗಳ ಯುದ್ಧದಲ್ಲಿ 6000 ರಷ್ಯನ್ನರ ಹತ್ಯೆ ಮಾಡಲಾಗಿದೆ ಎಂದು ಯೂಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್​ಸ್ಕಿ ಹೇಳಿದ್ದಾರೆ.

ನಿರಾಯುಧರಿಂದ ದಾಳಿ: ನಿರಾಯುಧರಾಗಿರುವ ಯೂಕ್ರೇನಿಯನ್ನರು ರಷ್ಯಾ ವಾಹನಗಳಿಗೆ ಮುತ್ತಿಗೆ ಹಾಕುತ್ತಿರುವ ವಿಡಿಯೋಗಳು ಇನ್​ಸ್ಟಾಗ್ರಾಂನಲ್ಲಿ ವೈರಲ್ ಆಗಿವೆ. ಒಂದು ವಿಡಿಯೋದಲ್ಲಿ 4ಗಿ4 ವಾಹನದ ಮೇಲೆರಗಿದ ಯೂಕ್ರೇನಿಯನ್ನರು ಅದನ್ನು ಪುಡಿಗೈಯಲು ಪ್ರಯತ್ನಿಸಿದರು. ಚಾಲಕ ವೇಗವನ್ನು ಹೆಚ್ಚಿಸಿ ತಪ್ಪಿಸಿಕೊಂಡು ಹೋದ ದೃಶ್ಯ ವಿಡಿಯೋದಲ್ಲಿದೆ.

ರಷ್ಯಾ ಯೋಧರಲ್ಲಿ ಯುದ್ಧ ವಿಮುಖತೆ: ‘ಪಟ್ಟಣಗಳ ಮೇಲೆ, ನಾಗರಿಕರ ಮೇಲೆ ದಾಳಿ ನಡೆಸುವುದಕ್ಕೆ ಸೂಚನೆ ಬಂದಿದೆ. ಮನಸಿಲ್ಲದಿದ್ದರೂ ಅನಿವಾರ್ಯವಾಗಿ ಆದೇಶ ಪಾಲಿಸಬೇಕಾದ ಪರಿಸ್ಥಿತಿ ಇದೆ. ನಮ್ಮಿಂದ ಈ ಯುದ್ಧ ಸಾಧ್ಯವಾಗುತ್ತಿಲ್ಲ’ ಎಂದು ರಷ್ಯಾದ ಹಲವು ಯೋಧರು ಕುಟುಂಬ ಸದಸ್ಯರ ಜತೆಗೆ ನಡೆಸಿದ ಟೆಕ್ಸ್ ್ಟ ಮೆಸೇಜ್​ಗಳು ಬಹಿರಂಗವಾಗಿವೆ. ನ್ಯೂಯಾರ್ಕ್ ಟೈಮ್್ಸ ವರದಿ ಪ್ರಕಾರ, ಹಲವು ರಷ್ಯಾ ಯೋಧರು ತಮ್ಮ ಯುದ್ಧ ವಾಹನಗಳನ್ನು ತಾವೇ ಹಾಳು ಮಾಡಿಕೊಂಡು ದಾಳಿ ನಡೆಸುವುದನ್ನು ತಪ್ಪಿಸಿಕೊಳ್ಳಲಾರಂಭಿಸಿದ್ದಾರೆ. ಶಸ್ತ್ರಾಸ್ತ್ರ, ಆಹಾರ ಮತ್ತು ಇಂಧನ ಪೂರೈಕೆ ಕೊರತೆಯನ್ನು ಎದುರಿಸುತ್ತಿದ್ದಾರೆ. ಸವಾಲುಗಳು ಮತ್ತು ಸಂಕಷ್ಟಗಳು ಅವರನ್ನೂ ತಲ್ಲಣಗೊಳಿಸಿವೆ.

ಬಾಂಬಿಂಗ್ ನಿಲ್ಲಿಸಿ ಮಾತುಕತೆ ನಡೆಸಿ: ಯೂಕ್ರೇನ್ ಪಟ್ಟಣಗಳ ಮೇಲೆ ಬಾಂಬಿಂಗ್ ಅನ್ನು ಕೂಡಲೇ ನಿಲ್ಲಿಸಿ. ಅರ್ಥಪೂರ್ಣ ಮಾತುಕತೆ ಆಗಬೇಕು ಎಂದರೆ ಅದಕ್ಕೆ ಮುಂಚಿತವಾಗಿ ಕದನವಿರಾಮ ಘೋಷಣೆ ಆಗಬೇಕು ಎಂದು ಯೂಕ್ರೇನ್ ಅಧ್ಯಕ್ಷ ವೊಲೊಡಿವಿರ್ ಝೆಲೆನ್​ಸ್ಕಿ ರಷ್ಯಾವನ್ನು ಆಗ್ರಹಿಸಿದ್ದಾರೆ. ಯುರೋಪ್ ವಾಯುಮಾರ್ಗದಲ್ಲಿ ರಷ್ಯಾದ ವಾಯುಪಡೆ ವಿಮಾನಗಳು ಸಂಚರಿಸದಂತೆ ನಿಷೇಧ ಹೇರಬೇಕು ಎಂದು ನ್ಯಾಟೋ ಸದಸ್ಯ ರಾಷ್ಟ್ರಗಳಿಗೆ ಝೆಲೆನ್​ಸ್ಕಿ ಒತ್ತಾಯಿಸಿದ್ದಾರೆ. ರಷ್ಯಾದ ಆಶಯದಂತೆ, ನ್ಯಾಟೋ ಕೂಟಕ್ಕೆ ಯೂಕ್ರೇನ್ ಸೇರ್ಪಡೆ ಮಾಡಲು ಸದಸ್ಯರಾಷ್ಟ್ರಗಳು ಸಿದ್ಧವಾಗಿಲ್ಲ ಎಂದಾದರೆ, ಯೂಕ್ರೇನ್​ಗೆ ಸಾಮಾನ್ಯ ಸುರಕ್ಷೆಯನ್ನು ಖಾತರಿಪಡಿಸುವ ಕೆಲಸವನ್ನಾದರೂ ನ್ಯಾಟೋ ಮಾಡಬೇಕು ಎಂದು ಝೆಲೆನ್​ಸ್ಕಿ ಆಗ್ರಹಿಸಿದ್ದಾರೆ.

ಸಾಮಾನ್ಯರಿಗೆ ಫಜೀತಿ: ರಷ್ಯಾ ಸೇನೆಯನ್ನು ಹಿಮ್ಮೆಟ್ಟಿಸಲು ನಾಗರಿಕರು ಕೂಡ ಅಸ್ತ್ರ ಕೈಗೆತ್ತಿಕೊಳ್ಳಿ ಎಂದು ಯೂಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲನ್​ಸ್ಕಿ ನೀಡಿದ ಕರೆ ಸಾಮಾನ್ಯ ನಾಗರಿಕರಿಗೆ ಮುಳುವಾಗಿದೆ. ಒಂದೆಡೆ ರಷ್ಯಾ ಸೇನೆ, ಇನ್ನೊಂದೆಡೆ ಯೂಕ್ರೇನ್ ಸೇನೆ, ಇವರ ನಡುವೆ ಶಸ್ತ್ರ ಹಿಡಿದ ಕೆಲವು ನಾಗರಿಕರು ಸಾಮಾನ್ಯ ನಾಗರಿಕರ ಬದುಕನ್ನು ಸಂಕಷ್ಟಕ್ಕೆ ದೂಡಿದ್ದಾರೆ. ಅವರ ಹತಾಶ ಕ್ರಮಗಳಿಂದಾಗಿ ಸಾಮಾನ್ಯರು ತೊಂದರೆಗೆ ಒಳಗಾಗಿದ್ದು, ತಮ್ಮದೆಲ್ಲವನ್ನೂ ಕಳೆದುಕೊಳ್ಳತೊಡಗಿದ್ದಾರೆ ಎಂದು ಗೊನ್​ಜಲಾ ಲಿರಾ ಎಂಬ ನಿಷೇಧಿತ ಯೂಟೂಬರ್ ವಿಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ.

ಕಿಯೆವ್​ನತ್ತ ಹೊರಟ ರಷ್ಯನ್ ಪಡೆಗೆ ತಡೆ: ಕಿಯೆವ್ ನಗರ ವಶಪಡಿಸಿಕೊಳ್ಳಲು ಹೊರಟಿದ್ದ ರಷ್ಯನ್ ಸೇನಾ ಪಡೆಗೆ ಹಿನ್ನಡೆ ಉಂಟಾಗಿದೆ. ಇಂಧನ, ಆಹಾರ ಮತ್ತು ಶಸ್ತ್ರಾಸ್ತ್ರಗಳ ಪೂರೈಕೆ ಸರಿಯಾಗಿ ಅವುಗಳಿಗೆ ಆಗುತ್ತಿಲ್ಲ. ಇದಲ್ಲದೆ, ಯೂಕ್ರೇನಿಯನ್ನರ ಪ್ರತಿರೋಧ ಕೂಡ ಹೆಚ್ಚಾದ ಕಾರಣ ಕಿಯೆವ್​ನತ್ತ ಮುನ್ನುಗ್ಗಲು ಆಗುತ್ತಿಲ್ಲ ಎಂದು ಅಮೆರಿಕ ಸರ್ಕಾರದ ಮೂಲಗಳು ಹೇಳಿವೆ.

ಅಳೆದು ತೂಗಿ ಭಾರತದ ನಿರ್ಣಯ: ವಿಶ್ವಸಂಸ್ಥೆಯಲ್ಲಿ ರಷ್ಯಾ ವಿರುದ್ಧ ಬೆನ್ನು ಬೆನ್ನಿಗೆ ನಿರ್ಣಯಗಳು ಮಂಡನೆ ಆಗಲಿದ್ದು, ಇದುವರೆಗೆ ಭಾರತ ಗೈರಾಗುವ ಮೂಲಕ ತಟಸ್ಥ ನಿಲುವನ್ನು ಪಾಲನೆ ಮಾಡಿದೆ. ಆದರೆ, ಬದಲಾದ ಸನ್ನಿವೇಶದಲ್ಲಿ ರಷ್ಯಾದ ದಾಳಿಗೆ ಯೂಕ್ರೇನ್​ನಲ್ಲಿ ಅಮಾಯಕ ಭಾರತೀಯರು ಪ್ರಾಣತೆತ್ತಿದ್ದಾರೆ. ಹೀಗಾಗಿ, ವಿಶ್ವಸಂಸ್ಥೆಯಲ್ಲಿ ಮುಂದೆ ನಡೆಯಲಿರುವ ರಷ್ಯಾ ವಿರುದ್ಧದ ನಿರ್ಣಯಗಳ ವೋಟಿಂಗ್ ಹೆಚ್ಚು ಪ್ರಾಮುಖ್ಯ ಪಡೆಯಲಿದೆ. ನಿರ್ಣಯಗಳಲ್ಲಿ ಬಳಸಿದ ಭಾಷೆಯನ್ನು ಅನುಸರಿಸಿ ಭಾರತದ ನಿಲುವು ಕೂಡ ಅಳೆದು ತೂಗಿ ಇರಲಿದೆ ಎಂದು ಸರ್ಕಾರಿ ಮೂಲಗಳು ಸುಳಿವು ನೀಡಿವೆ.

ಮಾನವೀಯ ನೆರವಿಗೆ ನಿರ್ಣಯ: ಯೂಕ್ರೇನ್​ನಲ್ಲಿರುವ ಜನರ ರಕ್ಷಣೆಗಾಗಿ ಬೇಷರತ್ ಮಾನವೀಯ ನೆರವಿನ ನಿರ್ಣಯವನ್ನು ವಿಶ್ವಸಂಸ್ಥೆಯಲ್ಲಿ ಮಂಡಿಸಲು ಫ್ರಾನ್ಸ್ ಚಿಂತನೆ ನಡೆಸಿದೆ. ಇದಕ್ಕಾಗಿ ಕದನ ವಿರಾಮ ಘೋಷಿಸಲು ರಷ್ಯಾ ಮತ್ತು ಯೂಕ್ರೇನ್ ಮೇಲೆ ಒತ್ತಡ ಹೇರಲು ಫ್ರಾನ್ಸ್ ಮುಂದಾಗಿದೆ. ಭಾರತ ಇದನ್ನು ಹೇಗೆ ಪರಿಗಣಿಸಲಿದೆ ಎಂಬುದು ಸದ್ಯದ ಕುತೂಹಲ.

ಮೋಲ್ಡೋವಾ ಮುಂದಿನ ಟಾರ್ಗೆಟ್?

ಬೆಲರೂಸ್ ಅಧ್ಯಕ್ಷ ಅಲೆಕ್ಸಾಂಡರ್ ಲುಕಾಶೆನ್ಕೊ ಅವರು ದೇಶದ ರಕ್ಷಣಾ ಸಮಿತಿ ಸಭೆ ನಡೆಸುತ್ತಿರುವಾಗ ಮ್ಯಾಪ್ ಹಿಡಿದು ವಿವರಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ಇದರ ಪ್ರಕಾರ, ರಷ್ಯಾದ ಮುಂದಿನ ಟಾರ್ಗೆಟ್ ಮೋಲ್ಡೋವಾ ಎಂದು ಹೇಳಲಾಗುತ್ತಿದೆ. ಲುಕಾಶೆನ್ಕೋ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್​ಗೆ ಆಪ್ತರಾಗಿರುವುದು ಇದಕ್ಕೆ ಕಾರಣ. ಮೋಲ್ಡೋವಾ ಹಳೆಯ ಸೋವಿಯತ್ ಯೂನಿಯನ್​ನ ಭಾಗವಾಗಿದ್ದು, ಯೂಕ್ರೇನ್ ಮತ್ತು ರೊಮೇನಿಯಾ ಗಡಿಗೆ ತಾಗಿಕೊಂಡಿದೆ.

ಯುದ್ಧಭೂಮಿ ಚಿತ್ರಣ ಕೊಟ್ಟ ವಿದ್ಯಾರ್ಥಿಗಳು

  • ಹಸಿವಿನಿಂದ ಕಂಗಾಲಾಗಿದ್ದ ನಮಗೆ ಕ್ಯಾಬ್ ಶುಲ್ಕ ಭರಿಸುವ ಶಕ್ತಿ ಬಿಡಿ, ಆಹಾರ ಖರೀದಿಸುವುದಕ್ಕೂ ದುಡ್ಡು ಇರಲಿಲ್ಲ. ರೈಲಿಗೆ ಹತ್ತಿದರೆ ಅಲ್ಲಿಂದ ಕೆಳಕ್ಕೆ ತಳ್ಳಿದ್ದರು. ಅನೇಕರು ನಮ್ಮೊಂದಿಗೆ ಕೆಟ್ಟದಾಗಿ ನಡೆದುಕೊಂಡರು. ಸ್ಥಳೀಯರ ಆಕ್ರೋಶ ನಮ್ಮ ಮೇಲೆ ತಿರುಗಿತ್ತು ಎಂದು ಆಂಧ್ರಪ್ರದೇಶ ಮೂಲದ ವಿದ್ಯಾರ್ಥಿಗಳು ಹೇಳಿದರು.
  • ಪೋಲಂಡ್ ಗಡಿ ತಲುಪುವುದಕ್ಕಾಗಿ ನಾಲ್ಕು ದಿನಗಳ ಕಾಲ 50 ಕಿ.ಮೀ.ಗೂ ಅಧಿಕ ನಡೆದೇ ಬಂದೆ. ಕೆಲವು ಕಡೆ ಜತೆಗಾರರಿದ್ದರು. ಇನ್ನು ಕೆಲವು ಕಡೆ ಒಂಟಿಯಾಗಿದ್ದೆ. ಫೆ.25ರಂದು ಸ್ನೇಹಿತರ ಜತೆಗೂಡಿ ನಡೆಯಲಾರಂಭಿಸಿದ್ದೆವು. ಯೂಕ್ರೇನ್-ಪೋಲಂಡ್ ಗಡಿ ತಲುಪಿದಾಗ ಅಲ್ಲಿ ಎಂಟು ಗಂಟೆ ಕಾಲ ಕಾಯಬೇಕಾಯಿತು. ಯೂಕ್ರೇನ್ ಯೋಧರು ಭಾರತೀಯರ ವಿರುದ್ಧ ಆಕ್ರೋಶಭರಿತರಾಗಿದ್ದರು. ಅವರು ಭಾರತೀಯರನ್ನು ಹುಡುಕಿ ಹುಡುಕಿ ಥಳಿಸುತ್ತಿದ್ದರು. ಗಾಳಿಯಲ್ಲಿ ಗುಂಡು ಹಾರಿಸಿ ನಮ್ಮನ್ನೆಲ್ಲ ಬೆದರಿಸಿದ್ದರು. ಕೊನೆಗೂ ಗಡಿಭಾಗದಲ್ಲಿ ಪೋಲಂಡ್​ಗೆ ಪ್ರವೇಶಿಸಲು ಅನುಮತಿ ಸಿಕ್ಕಿತು ಎಂದು ಉತ್ತರ ಭಾರತದ ವಿದ್ಯಾರ್ಥಿನಿಯೊಬ್ಬರು ಹೇಳಿದ್ದಾಗಿ ವರದಿಯಾಗಿದೆ.

ಯನುಕೋವ್ಯಾಚ್​ಗೆ ಯೂಕ್ರೇನ್ ಸಾರಥ್ಯ?: ಯೂಕ್ರೇನ್ ಅನ್ನು ಸಂಪೂರ್ಣ ವಶಪಡಿಸಿಕೊಂಡ ನಂತರದಲ್ಲಿ ಅಲ್ಲಿನ ಮಾಜಿ ಅಧ್ಯಕ್ಷ ತಲೆಮರೆಸಿಕೊಂಡಿರುವ ವಿಕ್ಟರ್ ಯನುಕೋವ್ಯಾಚ್ ಅವರನ್ನು ಹೊಸ ಅಧ್ಯಕ್ಷ ಎಂದು ಘೋಷಿಸಲು ರಷ್ಯಾ ತಯಾರಿ ನಡೆಸಿದೆ. ವಿಕ್ಟರ್ ಸದ್ಯ ಬೆಲರೂಸ್​ನ ರಾಜಧಾನಿ ಮಿನ್​ಸ್ನಲ್ಲಿದ್ದಾರೆ ಎಂದು ಯೂಕ್ರೇನ್ ಗುಪ್ತಚರ ಸಂಸ್ಥೆ ವರದಿಮಾಡಿದೆ.

ರಫ್ತುದಾರರ ಸಂಕಷ್ಟ: ರಷ್ಯಾ ಮತ್ತು ಕಾಮನ್​ವೆಲ್ತ್ ಇಂಡಿಪೆಂಡೆಂಟ್ ಸ್ಟೇಟ್ (ಸಿಐಎಸ್) ದೇಶಗಳಲ್ಲಿ ಭಾರತದ ರಫ್ತುದಾರರು ರವಾನಿಸಿದ 500 ದಶಲಕ್ಷ ಡಾಲರ್ ಮೌಲ್ಯದ ಸರಕುಗಳ ಅತಂತ್ರವಾಗಿವೆ. ಅವುಗಳಿಗೆ ನೀಡಲಾಗಿದ್ದ ಕ್ರೆಡಿಟ್ ಗ್ಯಾರೆಂಟಿ ರಕ್ಷಣೆಯನ್ನು ಈ ಪ್ರದೇಶಗಳ ಮಟ್ಟಿಗೆ ಬ್ಯಾಂಕುಗಳು ಹಿಂಪಡೆದಿರುವುದು ಇದಕ್ಕೆ ಕಾರಣ. ಎಕ್ಸ್​ಪೋರ್ಟ್ ಕ್ರೆಡಿಟ್ ಗ್ಯಾರೆಂಟಿ ಕಾರ್ಪೆರೇಶನ್ ಗುರುವಾರದಿಂದ ಈ ರಕ್ಷಣೆಯನ್ನು ಹಿಂಪಡೆಯುವುದಾಗಿ ಘೋಷಿಸಿದೆ. ರಷ್ಯಾಕ್ಕೆ ಭಾರತದಿಂದ 2.5 ಶತಕೋಟಿ ಡಾಲರ್ ಮೌಲ್ಯದ ಸರಕು ಮತ್ತು ಸಿಐಎಸ್ ದೇಶಗಳಿಗೆ 1.5 ಶತಕೋಟಿ ಡಾಲರ್ ಮೌಲ್ಯದ ಸರಕುಗಳನ್ನು ವಾರ್ಷಿಕವಾಗಿ ರಫ್ತು ಮಾಡಲಾಗುತ್ತದೆ.

ವಿದೇಶಿ ಹೂಡಿಕೆ ಭಾರತಕ್ಕೆ: ರಷ್ಯಾ ಬ್ಯಾಂಕುಗಳು ಮತ್ತು ಉದ್ಯಮಗಳ ಮೇಲೆ ನಿರ್ಬಂಧ ಕ್ರಮ ಅನುಷ್ಠಾನವಾಗುತ್ತಿರುವ ಕಾರಣ ಷೇರುಪೇಟೆಯಿಂದ ವಿದೇಶಿ ಹೂಡಿಕೆ ಹಿಂಪಡೆತ ಹೆಚ್ಚಾಗಿದೆ. ಗ್ಲೋಬಲ್ ಫಂಡ್ ಮ್ಯಾನೇಜರ್​ಗಳು ರಷ್ಯಾ ಸಂಸ್ಥೆಗಳಲ್ಲಿ ಮಾಡಿದ್ದ ಹೂಡಿಕೆಯನ್ನು ಹಿಂಪಡೆಯಲಾರಂಭಿಸಿವೆ. ನರ್ಗೆಸ್ ಬ್ಯಾಂಕ್ ಇನ್​ವೆಸ್ಟ್​ಮೆಂಟ್ ಮ್ಯಾನೇಜ್​ವೆುಂಟ್ ರಷ್ಯಾ ಅಸೆಟ್ಸ್​ನಲ್ಲಿ ಹೂಡಿಕೆ ಮಾಡಿದ್ದ 1.3 ಲಕ್ಷಕೋಟಿ ಡಾಲರ್ ಹೂಡಿಕೆ ಹಿಂಪಡೆದಿರುವುದಾಗಿ ಸೋಮವಾರ ಹೇಳಿದೆ. ನಾರ್ವೆಯ ಪ್ರಧಾನಮಂತ್ರಿ ಜೊನಾಸ್ ಗಹ್ರ್ ಸ್ಟೋರ್, ರಷ್ಯಾದಲ್ಲಿ ಹೂಡಿಕೆ ಮಾಡಿದ್ದ 300 ಕೋಟಿ ಡಾಲರ್ ಸಂಪತ್ತನ್ನು ಮಾರಾಟ ಮಾಡಿ, ಅಲ್ಲಿ ಹೂಡಿಕೆ ಮಾಡದೇ ಇರಲು ತೀರ್ವನಿಸಲಾಗಿದೆ ಎಂದು ಸೋಮವಾರ ಹೇಳಿದ್ದರು.

8ರೊಳಗೆ 31 ವಿಮಾನಗಳಲ್ಲಿ ಬುಚಾರೆಸ್ಟ್​ನಲ್ಲಿ ಸಚಿವ ಜ್ಯೋತಿರಾದಿತ್ಯ: ಭಾರತೀಯರ ಸ್ಥಳಾಂತರ ಕಾರ್ಯಾಚರಣೆಗೆ ನಿಯೋಜಿತರಾಗಿರುವ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಬುಧವಾರ ಬುಚಾರೆಸ್ಟ್​ನಲ್ಲಿ ರೊಮೇನಿಯಾ, ಮೋಲ್ಡೋವಾ ದಲ್ಲಿರುವ ಭಾರತದ ರಾಯಭಾರಿಗಳ ಜತೆಗೆ ಮಾತುಕತೆ ನಡೆಸಿದರು. ಬುಚಾರೆಸ್ಟ್ ಮತ್ತು ಸಕೀವಾದಿಂದ ಭಾರತೀಯರ ಸ್ಥಳಾಂತರ ಕಾರ್ಯದ ಪ್ರಗತಿಪರಿಶೀಲನೆ ನಡೆಸಿದರು. ಕಾರ್ಯಾಚರಣೆ ಕ್ಷಿಪ್ರವಾಗಿ ನಡೆಯುತ್ತಿದೆ ಎಂದು ಸಿಂಧಿಯಾ ಟ್ವೀಟ್ ಮಾಡಿದ್ದಾರೆ.

6,300 ಭಾರತೀಯರು ವಾಪಸ್: ಯೂಕ್ರೇನ್​ನಲ್ಲಿ ಸಿಲುಕಿಕೊಂಡಿರುವ ಭಾರತೀಯರನ್ನು ‘ಆಪರೇಷನ್ ಗಂಗಾ’ ಮೂಲಕ ಭಾರತಕ್ಕೆ ಕರೆತರಲಾಗುತ್ತಿದೆ. ಮಾರ್ಚ್ 8ರೊಳಗೆ ಒಟ್ಟು 31 ವಿಮಾನಗಳ ಮೂಲಕ 6,300ಕ್ಕೂ ಹೆಚ್ಚು ಭಾರತೀಯರನ್ನು ವಾಪಸ್ ಕರೆತರಲಾಗುವುದು. ಮಾರ್ಚ್ 2ರ ದತ್ತಾಂಶ ಪ್ರಕಾರ, 21 ವಿಮಾನಗಳು ಭಾರತೀಯರನ್ನು ರೊಮೇನಿಯಾದ ಬುಚರೆಸ್ಟ್, ಹಂಗರಿಯ ಬುಡಾಪೆಸ್ಟ್​ನಿಂದ ಕರೆತರುವ ಕೆಲಸದಲ್ಲಿ ನಿರತವಾಗಿವೆ. ಪೋಲಂಡ್​ನ ಝೆಜೋವ್​ನಿಂದ 4, ಸ್ಲೊವಾಕಿಯಾದ ಕೊಸೈಸ್​ನಿಂದ 1 ವಿಮಾನ ಇದೇ ಕೆಲಸದಲ್ಲಿವೆ. ಭಾರತೀಯ ವಾಯುಪಡೆ ವಿಮಾನ ಕೂಡ ಬುಚಾರೆಸ್ಟ್​ನಿಂದ ಈ ಕೆಲಸದಲ್ಲಿ ನಿರತವಾಗಿದೆ.

ಸಂಕಷ್ಟದಲ್ಲಿ ಭಾರತೀಯ ವಿದ್ಯಾರ್ಥಿಗಳು

ಯೂಕ್ರೇನ್​ನ ಈಶಾನ್ಯ ಮತ್ತು ಪೂರ್ವಭಾಗದಲ್ಲಿ 4,000ಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಒಳಗಾಗಿದ್ದಾರೆ. ರಷ್ಯಾ ಮತ್ತು ಯೂಕ್ರೇನ್ ಗಡಿಭಾಗದಲ್ಲಿರುವ ಈ ವಿದ್ಯಾರ್ಥಿಗಳನ್ನು ಅಲ್ಲಿಂದ ಸುರಕ್ಷಿತವಾಗಿ ಭಾರತಕ್ಕೆ ಕರೆತರಲು ರಷ್ಯಾ ‘ಮಾನವೀಯ ನೆಲೆ’ಯಲ್ಲಿ ಕಾರ್ಯನಿರ್ವಹಿಸುವುದಾಗಿ ಭಾರತದಲ್ಲಿರುವ ರಷ್ಯಾ ರಾಯಭಾರಿ ಡೆನಿಸ್ ಅಲಿಪೋವ್ ಸ್ಪಷ್ಟಪಡಿಸಿದ್ದಾರೆ. ಯೂಕ್ರೇನ್ ರಾಯಭಾರಿ ಕೂಡ ಈ ನಿಟ್ಟಿನಲ್ಲಿ ಮುತುವರ್ಜಿವಹಿಸಿದ್ದು, ಯೂಕ್ರೇನ್ ಸರ್ಕಾರದ ನೆರವಿನೊಂದಿಗೆ ಅವರನ್ನು ಭಾರತಕ್ಕೆ ಸ್ಥಳಾಂತರಿಸಲು ನೆರವು ಒದಗಿಸುವುದಾಗಿ ಹೇಳಿದ್ದಾರೆ. ಭಾರತದ ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶ್ರಿಂಗ್ಲಾ ಈ ರಾಯಭಾರಿಗಳ ಸಂಪರ್ಕದಲ್ಲಿದ್ದು, ಭಾರತೀಯರ ಸುರಕ್ಷಿತ ವಾಪಸಾತಿಯನ್ನು ಖಚಿತಪಡಿಸುತ್ತಿದ್ದಾರೆ.

ಪಾಕಿಗಳ ನೆರವಿಗೆ ಬಂದ ತಿರಂಗಾ!: ಯೂಕ್ರೇನ್​ನಲ್ಲಿ ಸಿಲುಕಿಕೊಂಡಿರುವ ಪಾಕಿಸ್ತಾನೀಯರ ರಕ್ಷಣೆಗೆ ಅಲ್ಲಿನ ಸರ್ಕಾರ ಸರಿಯಾದ ಕ್ರಮ ತೆಗೆದುಕೊಂಡಿಲ್ಲ. ರಷ್ಯಾಕ್ಕೆ ಬೆಂಬಲ ಸೂಚಿಸಿದ ಪ್ರಧಾನಿ ಇಮ್ರಾನ್ ಖಾನ್, ಮಾಸ್ಕೋಗೆ ತೆರಳಿದ್ದು ಗಮನಸೆಳೆದಿತ್ತು. ಯೂಕ್ರೇನ್​ನಲ್ಲಿರುವ ಪಾಕಿಸ್ತಾನೀಯರು ರಕ್ಷಣೆಗಾಗಿ ಕೊನೆಗೆ ಮೊರೆ ಹೋಗಿದ್ದು ಭಾರತೀಯ ವಿದ್ಯಾರ್ಥಿಗಳು ಮತ್ತು ಭಾರತದ ರಾಷ್ಟ್ರಧ್ವಜಕ್ಕೆ ಎಂಬ ಅಂಶ ಬೆಳಕಿಗೆ ಬಂದಿದೆ. ಪಾಕಿಗಳ ಜತೆಗೆ ಟರ್ಕಿ ವಿದ್ಯಾರ್ಥಿಗಳು ಕೂಡ ಭಾರತದ ತಿರಂಗಾ ಬಳಸಿಕೊಂಡು ಯೂಕ್ರೇನ್ ಬಿಟ್ಟು ನೆರೆಯ ರಾಷ್ಟ್ರ ಪ್ರವೇಶಿಸಿದ್ದಾರೆ. ಈ ಕುರಿತು ಆ ವಿದ್ಯಾರ್ಥಿಗಳು ಹಂಚಿಕೊಂಡ ಅನುಭವದ ವಿಡಿಯೋ ವೈರಲ್ ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net