

NTR: 'ದೇವರ 2' ಚಿತ್ರದ ಶೂಟಿಂಗ್ನಲ್ಲಿ ಸಖತ್ ಬಿಜಿಯಾಗಿರುವ ಟಾಲಿವುಡ್ ಸೂಪರ್ಸ್ಟಾರ್, ನಟ ಜೂನಿಯರ್ ಎನ್ಟಿಆರ್, ಇತ್ತಿಚೆಗಷ್ಟೇ ಜಪಾನ್ನಲ್ಲಿ ಹಮ್ಮಿಕೊಳ್ಳಲಾಗಿದ್ದ ಚಿತ್ರೀಕರಣ ಮುಗಿಸಿಕೊಂಡು ತವರಿಗೆ ವಾಪಾಸ್ ಆಗಿದ್ದರು. ಈ ವೇಳೆ ರಿಲೀಸ್ ಆಗಿ ಚಿತ್ರಪ್ರೇಮಿಗಳಿಂದ ಉತ್ತಮ ಪ್ರತಿಕ್ರಿಯೆಗಳನ್ನು ಪಡೆದುಕೊಂಡು ಬಾಕ್ಸ್ ಆಫೀಸ್ನಲ್ಲಿ ಸದ್ದು ಮಾಡುತ್ತಿರುವ 'ಮ್ಯಾಡ್ ಸ್ಕ್ವೇರ್' ಚಿತ್ರದ ಸಕ್ಸಸ್ ಮೀಟ್ ಈವೆಂಟ್ನಲ್ಲಿ ಕಾಣಿಸಿಕೊಂಡ ಎನ್ಟಿಆರ್, ಕೆಲವು ಕುತೂಹಲಕಾರಿ ವಿಷಯಗಳನ್ನು ವೇದಿಕೆಯಲ್ಲಿ ಹಂಚಿಕೊಂಡರು.
ನಟ ನಾರ್ನೆ ನಿತಿನ್, ಸಂಗೀತ್ ಶೋಭನ್, ರಾಮ್ ನಿತಿನ್, ವಿಷ್ಣು ಸೇರಿದಂತೆ ಮುಂತಾದ ಕಲಾವಿದರು ಅಭಿನಯಿಸಿದ 'ಮ್ಯಾಡ್ ಸ್ಕ್ವೇರ್' ಚಿತ್ರ ಮಾರ್ಚ್ 28ರಂದು ಬಿಡುಗಡೆಗೊಂಡು ದೊಡ್ಡ ಮಟ್ಟದ ಹಿಟ್ನತ್ತ ಸಾಗುತ್ತಿದೆ. ಈಗಾಗಲೇ 75 ಕೋಟಿ ರೂ.ಗೂ ಹೆಚ್ಚು ಗಳಿಕೆ ಮಾಡಿರುವ ಚಿತ್ರತಂಡಕ್ಕೆ ಶುಭ ಹಾರೈಸಿದ ಜೂ. ಎನ್ಟಿಆರ್, ನಾರ್ನೆ ನಿತಿನ್ ಬೆನ್ನುತಟ್ಟಿ ಮಾತನಾಡಿದರು.
"ನಾನು 2011ರಲ್ಲಿ ವಿವಾಹವಾದೆ. ಆಗ ನಿತಿನ್ ತುಂಬಾ ಚಿಕ್ಕ ಹುಡುಗ. ಆ ಸಮಯದಲ್ಲಿ ಅವನು ನನ್ನೊಂದಿಗೆ ಹೆಚ್ಚು ಮಾತನಾಡುತ್ತಿರಲಿಲ್ಲ. ಆದರೆ, ಮೊದಲ ಬಾರಿಗೆ ಧೈರ್ಯದಿಂದ ನನ್ನ ಬಳಿಗೆ ಬಂದು, ಅಣ್ಣ, ನಾನು ನಟನಾಗಲು ಬಯಸುತ್ತೇನೆ. ಇದಕ್ಕೆ ನಿಮ್ಮ ಪ್ರೋತ್ಸಾಹ ಬೇಕು ಎಂದು ಕೇಳಿದ. ಆಗ ನಾನು ಇದು ನಿನ್ನ ಆಯ್ಕೆ. ನನಗೆ ಓಕೆ. ಆದರೆ, ಪ್ರೋತ್ಸಾಹ ಕೊಡುವುದಿಲ್ಲ ಎಂದು ಹೇಳಿ ಕಳಿಸಿದ್ದೆ. ಈ ಮಾತಿಗೆ ಅವನು ಏನು ಅಂದುಕೊಂಡ ಅಂತ ಬಹಳ ಯೋಚಿಸಿದ್ದೆ. ಆದ್ರೆ, ಇಂದು ಅವನನ್ನು ನೋಡಿದಾಗ ತುಂಬ ಖುಷಿ ಆಗುತ್ತೆ" ಎಂದರು.
"ಅಂದು ನಾನು ಏನೂ ಕೇಳಲಿಲ್ಲ. ಅದೇ ಇಂದು ಅವನನ್ನು ನೋಡಿದಾಗ, ನನಗೆ ಹೆಮ್ಮೆ ಅನಿಸುತ್ತದೆ. ಈಗ ಯಶಸ್ಸಿನ ಹಾದಿಯನ್ನು ಕಂಡಿದ್ದಾನೆ. ಇದಕ್ಕೆ ಕಾರಣ ಅವನೊಂದಿಗೆ ಕೆಲಸ ಮಾಡಿದ ನಿರ್ದೇಶಕರು ಮತ್ತು ನಿರ್ಮಾಪಕರು. ಅವರೇ ನಿತಿನ್ ಯಶಸ್ಸಿಗೆ ಕಾರಣ" ಎಂದು ಹೇಳುತ ಸಂತಸ ವ್ಯಕ್ತಪಡಿಸಿದರು,(ಏಜೆನ್ಸೀಸ್).