ನಾಯಕತ್ವ ಗುಣ ಕಲಿಸುವ ಎನ್‌ಎಸ್‌ಯುಐ

nsui
ಎನ್‌ಎಸ್‌ಯುಐನಿಂದ ಏರ್ಪಡಿಸಿದ್ದ ನಮ್ಮೂರ ಹೆಮ್ಮೆ ಕಾರ್ಯಕ್ರಮದಲ್ಲಿ ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಕೀರ್ತಿ ಗಣೇಶ್, ಆರ್.ಪ್ರಸನ್ನಕುಮಾರ್, ಎನ್.ರಮೇಶ್, ವಿಜಯಕುಮಾರ್, ಎಚ್.ಸಿ.ಯೋಗೇಶ್, ವಿಶ್ವನಾಥ ಕಾಶಿ, ಯಮುನಾ ರಂಗೇಗೌಡ ಮುಂತಾದವರಿದ್ದರು.
Published on

ಶಿವಮೊಗ್ಗ: ಅವಕಾಶಗಳು ಎದುರಿಗಿದ್ದಾಗ ಯಾವುದೇ ಕಾರಣಕ್ಕೂ ನಾವು ಉದಾಸೀನ ಮಾಡಬಾರದು. ಅವಕಾಶಗಳನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದು ಎನ್‌ಎಸ್‌ಯುಐ ರಾಜ್ಯಾಧ್ಯಕ್ಷ ಕೀರ್ತಿ ಗಣೇಶ್ ಹೇಳಿದರು.

ಎನ್‌ಎಸ್‌ಯುಐ ಮಂಗಳವಾರ ಏರ್ಪಡಿಸಿದ್ದ ನಮ್ಮೂರ ಹೆಮ್ಮೆ-ಪ್ರತಿಭಾ ಪುರಸ್ಕಾರ ಹಾಗೂ ನೋಟ್‌ಬುಕ್ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಹಲವು ಮಂದಿ ಅವಕಾಶಗಳಿದ್ದರೂ ಅದರ ಪ್ರಯೋಜನ ಪಡೆದುಕೊಳ್ಳುವುದಿಲ್ಲ. ಹೀಗಾಗಿ ಅವರು ಗುರಿ ಸಾಧನೆಯಿಂದ ದೂರ ಉಳಿಯುತ್ತಾರೆ ಎಂದರು.

ವಿದ್ಯಾರ್ಥಿಗಳು ಕ್ರಿಯಾಶೀಲರಾಗಿದ್ದು ಉತ್ತಮ ಶಿಕ್ಷಣ ಪಡೆಯಬೇಕು. ವಿದ್ಯಾರ್ಥಿಗಳು ಹಾಗೂ ಶಿಕ್ಷಣಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಯಿದ್ದರೂ ಅದರ ಪರಿಹಾರಕ್ಕೆ ಎನ್‌ಎಸ್‌ಯುಐ ಶ್ರಮಿಸಲಿದೆ. ಇದರ ಜತೆಗೆ ಎನ್‌ಎಸ್‌ಯುಐನಿಂದ ನಾಯಕತ್ವ ಗುಣವೂ ಲಭಿಸುತ್ತದೆ. ಸಂಘಟನಾತ್ಮಕವಾಗಿ ಬೆಳೆಯಲು ಇದು ಸಹಕಾರಿಯಾಗಿದೆ ಎಂದು ತಿಳಿಸಿದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆರ್.ಪ್ರಸನ್ನಕುಮಾರ್ ಮಾತನಾಡಿ, ಶಿಕ್ಷಣ ಇಲಾಖೆಯಲ್ಲಿ ಮಧು ಬಂಗಾರಪ್ಪ ಅನೇಕ ಸುಧಾರಣೆಗಳನ್ನು ತಂದಿದ್ದಾರೆ. ನಮ್ಮ ಜಿಲ್ಲೆಯೂ ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಂತೆ ಅತ್ಯುತ್ತಮ ಸಾಧನೆ ಮಾಡಿ ನಮ್ಮದು ಬುದ್ದಿವಂತರ ಜಿಲ್ಲೆ ಎಂಬುದನ್ನು ಸಾಬೀತುಪಡಿಸಬೇಕಿದೆ ಎಂದರು.

ನಮ್ಮೂರ ಹೆಮ್ಮೆ ಕಾರ್ಯಕ್ರಮದ ಮೂಲಕ ಎನ್‌ಎಸ್‌ಯುಐ ಪ್ರತಿಭಾವಂತರನ್ನು ಗುರುತಿಸುತ್ತಿದೆ. ಪ್ರತಿಭಾ ಪುರಸ್ಕಾರ, ನೋಟ್ ಬುಕ್ ವಿತರಿಸುವ ಮೂಲಕ ಅವರಿಗೆ ನೆರವಾಗುತ್ತಿರುವುದು ಸಂತಸದ ಸಂಗತಿ. ರಾಜ್ಯ ಸರ್ಕಾರವೂ ವಿದ್ಯಾಸಿರಿ, ಯುವನಿಧಿ ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿಗಳಿಗೆ, ಪದವೀಧರರಿಗೆ ನೆರವು ನೀಡುತ್ತಿದೆ ಎಂದು ಹೇಳಿದರು.

ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಶೇ.95ಕ್ಕೂ ಹೆಚ್ಚು ಅಂಕ ಪಡೆದ ಸುಮಾರು 100 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.1,500 ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಿಸಲಾಯಿತು.

ಎನ್‌ಎಸ್‌ಯುಐ ಜಿಲ್ಲಾಧ್ಯಕ್ಷ ವಿಜಯ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎನ್.ರಮೇಶ್, ಪಾಲಿಕೆ ಮಾಜಿ ಸದಸ್ಯ ಎಚ್.ಸಿ.ಯೋಗೇಶ್, ಪಾಲಿಕೆ ಮಾಜಿ ಪ್ರತಿಪಕ್ಷ ನಾಯಕಿ ಯಮುನಾ ರಂಗೇಗೌಡ, ಹಾಪ್‌ಕಾಮ್ಸ್ ಜಿಲ್ಲಾಧ್ಯಕ್ಷ ವಿಜಯಕುಮಾರ್ (ಧನಿ), ಪ್ರಮುಖರಾದ ಮಧುಸೂದನ್, ಗಿರೀಶ್, ಚೇತನ್, ವಿಶ್ವನಾಥ್‌ಕಾಶಿ, ಚರಣ್, ಬಾಲಾಜಿ, ಹರ್ಷಿತ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net