

ಶಿವಮೊಗ್ಗ: ಎನ್‌ಸಿಸಿ ಮತ್ತು ಎಸ್‌ಎಸ್‌ಎಸ್ ದೇಶದ ಎರಡು ಕಣ್ಣುಗಳಿದ್ದಂತೆ. ಎನ್‌ಸಿಸಿ ದೇಶ ಕಾಯಲು ಅವಕಾಶ ಒದಗಿಸಿದರೆ, ಎನ್‌ಎಸ್‌ಎಸ್ ಸದೃಢ ರಾಷ್ಟ್ರ ಕಟ್ಟಲು ಸಹಕಾರಿಯಾಗಿದೆ ಎಂದು ಕುವೆಂಪು ವಿವಿ ಪ್ರಭಾರ ಕುಲಪತಿ ಡಾ.ಎಸ್.ವೆಂಕಟೇಶ್ ಹೇಳಿದರು.
ಎಟಿಎನ್‌ಸಿ ಕಾಲೇಜಿನ ಎನ್‌ಎಸ್‌ಎಸ್ ಘಟಕದಿಂದ ಏರ್ಪಡಿಸಿದ್ದ ಏಳು ದಿನಗಳ ಕುವೆಂಪು ವಿವಿ ಮಟ್ಟದ ಅಂತರ ಕಾಲೇಜು ಶಿಬಿರಕ್ಕೆ ಚಾಲನೆ ನೀಡಿದ ಅವರು, ಎನ್‌ಎಸ್‌ಎಸ್ ರಾಷ್ಟ್ರೀಯ ಭಾವೈಕ್ಯತೆ, ಸೇವಾ ಮನೋಭಾವ ಬೆಳೆಸುವುದರೊಂದಿಗೆ ಉತ್ತಮ ನಾಯಕತ್ವ ಹಾಗೂ ವ್ಯಕ್ತಿತ್ವ ನಿರ್ಮಾಣಕ್ಕೆ ಕಾರಣವಾಗುತ್ತದೆ ಎಂದರು.
ಕುವೆಂಪು ವಿವಿ ಎನ್‌ಎಸ್‌ಎಸ್ ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ.ನಾಗರಾಜ ಪರಿಸರ ಮಾತನಾಡಿ, ವಿದ್ಯಾರ್ಥಿಗಳು ಸಾಮಾಜಿಕ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಎನ್‌ಎಸ್‌ಎಸ್ ಸಹಕಾರಿಯಾಗಿದೆ. ಇದು ಉತ್ತಮ ನಾಗರಿಕರನ್ನು ರೂಪಿಸುತ್ತದೆ. ಇದರಿಂದ ವಿದ್ಯಾರ್ಥಿಗಳು ಶಿಸ್ತು ಬೆಳೆಸಿಕೊಳ್ಳುವ ಜತೆಗೆ ದೈಹಿಕ ಮತ್ತು ಮಾನಸಿಕವಾಗಿ ಶಕ್ತರಾಗುತ್ತಾರೆ ಎಂದು ಹೇಳಿದರು.
ಪ್ರಾಚಾರ್ಯೆ ಪಿ.ಆರ್.ಮಮತಾ ಅಧ್ಯಕ್ಷತೆ ವಹಿಸಿದ್ದರು. ಎನ್‌ಇಎಸ್ ಖಚಾಂಚಿ ಡಿ.ಜಿ. ರಮೇಶ್, ಪ್ರಮುಖರಾದ ಡಾ.ಕೆ.ವಿ.ಗಿರಿಧರ್, ಪ್ರೊ.ಕೆ.ಎಂ.ನಾಗರಾಜು, ಪ್ರೊ.ಎಸ್.ಜಗದೀಶ್, ಪ್ರೊ.ಎನ್.ಮಂಜುನಾಥ ಮುಂತಾದವರಿದ್ದರು. ಡಾ. ನಾಗರಾಜ ಪರಿಸರ ಸದ್ಭಾವನಾ ದಿನಾಚರಣೆ ಅಂಗವಾಗಿ ಪ್ರತಿಜ್ಞಾವಿಧಿ ಬೋಧಿಸಿದರು.