

ಶಿವಮೊಗ್ಗ: ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮಗಳು ರಾಷ್ಟ್ರದ ವಿಕಾಸಕ್ಕೆ ಪೂರಕವಾಗಿದ್ದು ವಿದ್ಯಾರ್ಥಿಗಳು ಗ್ರಾಮ ಜೀವನವನ್ನು ಅರ್ಥ ಮಾಡಿಕೊಂಡು ಹಳ್ಳಿಗಳ ವಿಕಾಸಕ್ಕೆ ಶ್ರಮಿಸಿ, ತನ್ಮೂಲಕ ರಾಷ್ಟ್ರದ ಏಳಿಗೆಗೆ ಕಾರಣರಾಗಬೇಕು ಎಂದು ಪಶುವೈದ್ಯಕೀಯ ಮಹಾವಿದ್ಯಾಲಯದ ಡೀನ್ ಡಾ. ಗಣೇಶ ಉಡುಪ ಹೇಳಿದರು.
ಪಶುವೈದ್ಯಕೀಯ ಮಹಾವಿದ್ಯಾಲಯದ ಎನ್‌ಎಸ್‌ಎಸ್ ಘಟಕದಿಂದ ಕಾಚಿಕೊಪ್ಪ ಗ್ರಾಮದಲ್ಲಿ ಶುಕ್ರವಾರ ಏಳು ದಿನಗಳ ವಿಶೇಷ ವಾರ್ಷಿಕ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಎಲ್ಲ ಗ್ರಾಮಸ್ಥರೊಂದಿಗೆ ಬೆರೆತು, ಎಲ್ಲರೊಡನೆ ಒಂದಾಗಿ ಬಾಳುವ ಆದರ್ಶ ಪಾಲಿಸಬೇಕು. ಅದರಲ್ಲೂ ಗ್ರಾಮೀಣ ಜನ ಜೀವನದ ಅರಿವು ಇಂದಿನ ವಿದ್ಯಾರ್ಥಿಗಳಿಗೆ ಅತ್ಯಗತ್ಯ ಎಂದು ಹೇಳಿದರು.
ಮಂಡಘಟ್ಟ ಪಂಚಾಯತಿ ಅಧ್ಯಕ್ಷೆ ಅನಿತಾ ಕೇಶವಮೂರ್ತಿ ಹಾಗೂ ಆಯನೂರು ಪಶು ಚಿಕಿತ್ಸಾಲಯದ ಮುಖ್ಯ ಪಶುವೈದ್ಯಾಧಿಕಾರಿ ಡಾ. ದಯಾನಂದ್ ಮಾತನಾಡಿದರು. ಗ್ರಾಮ ಪಂಚಾಯತಿ ಸದಸ್ಯ ಶಿವಕುಮಾರ್, ರೈತ ಸಂಘದ ಉಪಾಧ್ಯಕ್ಷ ಎಂ.ಮಂಜಪ್ಪ, ಮುಖಂಡರಾದ ನಾಗರಾಜಪ್ಪ, ಮಹೇಶ್ವರಪ್ಪ, ಗುರುಬಸಪ್ಪ ಮತ್ತಿತರರು ಹಾಜರಿದ್ದರು.
ಆರೋಗ್ಯ, ಕಣ್ಣು ತಪಾಸಣೆ: ವಿಕಸಿತ ಭಾರತಕ್ಕಾಗಿ ಗ್ರಾಮವಿಕಾಸ ಎಂಬ ಧ್ಯೇಯದೊಂದಿಗೆ ಹಮ್ಮಿಕೊಂಡಿರುವ ಶಿಬಿರದಲ್ಲಿ ಶಿವಮೊಗ್ಗದ ಸರ್ಕಾರಿ ಆಯುರ್ವೇದ ಮಹಾವಿದ್ಯಾಲಯದಿಂದ ಉಚಿತ ಆರೋಗ್ಯ ತಪಾಸಣೆ, ಶಂಕರ ನೇತ್ರ ಆಸ್ಪತ್ರೆಯಿಂದ ಕಣ್ಣು ತಪಾಸಣೆ, ಭಾರತೀಯ ದಂತವೈದ್ಯರ ಸಂಘದಿಂದ ದಂತ ತಪಾಣೆ, ಜತೆಗೆ ಬರಡು ರಾಸುಗಳ ಶಿಬಿರ, ತಜ್ಞರೊಡನೆ ಕೃಷಿ, ಪಶುಸಂಗೋಪನೆ ಮತ್ತಿತರ ವಿಷಯಗಳ ಚರ್ಚೆ ಮುಂತಾದ ಪ್ರಗತಿಪರ ಕಾರ್ಯಕ್ರಮಗಳನ್ನು ಆಯೋಜಿಸಿದೆ.