

ಶಿವಮೊಗ್ಗ: ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆ ಹಾಗೂ ಉತ್ತಮ ಭವಿಷ್ಯ ರೂಪಿಸುವಲ್ಲಿ ಎನ್‌ಎಸ್‌ಎಸ್ ಮಹತ್ತರ ಪಾತ್ರ ವಹಿಸುತ್ತದೆ ಎಂದು ಎನ್‌ಎಸ್‌ಎಸ್ ರಾಜ್ಯ ಪ್ರಶಸ್ತಿ ಪುರಸ್ಕೃತ, ಎಟಿಎನ್‌ಸಿ ಕಾಲೇಜಿನ ಪ್ರಾಧ್ಯಾಪಕ ಪ್ರೊ. ಕೆ.ಎಂ.ನಾಗರಾಜು ಹೇಳಿದರು.
ರಾಜೇಂದ್ರ ನಗರದ ರೋಟರಿ ಸಭಾಂಗಣದಲ್ಲಿ ರೋಟರಿ ಶಿವಮೊಗ್ಗ ಪೂರ್ವದಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಎನ್‌ಎಸ್‌ಎಸ್‌ನಲ್ಲಿ ಪಾಲ್ಗೊಳ್ಳುವುದರಿಂದ ಧೈರ್ಯ, ವಿಶ್ವಾಸ ಹಾಗೂ ಮನೋಸಾಮರ್ಥ್ಯ ವೃದ್ಧಿಯಾಗುತ್ತದೆ ಎಂದು ತಿಳಿಸಿದರು.
ಶಿಬಿರಗಳಲ್ಲಿ ಭಾಗವಹಿಸುವುದರಿಂದ ಗ್ರಾಮೀಣ ಬದುಕಿನ ಜನರ ಜೀವನಶೈಲಿ, ಗ್ರಾಮೀಣ ಕ್ರೀಡೆ, ಕಲೆ ಪ್ರಕಾರಗಳ ಪರಿಚಯವಾಗುತ್ತದೆ. ವಿದ್ಯಾಭ್ಯಾಸದ ಜತೆಗೆ ವಿದ್ಯಾರ್ಥಿಗಳು ಎನ್‌ಎಸ್‌ಎಸ್‌ನಲ್ಲಿ ತೊಡಗಿಸಿಕೊಳ್ಳಬೇಕು. ಇದು ಜೀವನದ ಉತ್ತಮ ಅವಕಾಶ ಎಂದು ಅಭಿಪ್ರಾಯಪಟ್ಟರು.
ದೇಶದ ಅಭಿವೃದ್ಧಿಯಲ್ಲಿ ಎನ್‌ಎಸ್‌ಎಸ್ ಪಾತ್ರ ದೊಡ್ಡದು. ಶಿಬಿರ ನಡೆಯುತ್ತಿರುವ ಗ್ರಾಮಾಂತರ ಪ್ರದೇಶದಲ್ಲಿ ಸ್ಥಳೀಯರು ಕೈಜೋಡಿಸಿ ಸಹಕಾರ ನೀಡಬೇಕು. ಸಂಘ ಸಂಸ್ಥೆಗಳ ಸಹಕಾರ ದೊರೆತರೆ ಉತ್ತಮ ಸೇವೆ ಸಲ್ಲಿಸಲು ಸಹಕಾರಿಯಾಗುತ್ತದೆ ಎಂದು ಹೇಳಿದರು.
ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷ ಸತೀಶ್ ಚಂದ್ರ ಮಾತನಾಡಿ, ರಾಷ್ಟ್ರೀಯ ಶಿಕ್ಷಣ ಸಮಿತಿಯು ವಿದ್ಯಾಭ್ಯಾಸದ ಜತೆಗೆ ಪಠ್ಯೇತರ ಚಟುವಟಿಕೆಗಳಿಗೂ ಪ್ರೋತ್ಸಾಹ ನೀಡುತ್ತಿದೆ. ಎನ್‌ಎಸ್‌ಎಸ್‌ನಲ್ಲಿ ತೊಡಗಿಸಿಕೊಂಡ ವಿದ್ಯಾರ್ಥಿಗಳು ಜೀವನದಲ್ಲಿ ಉನ್ನತ ಸ್ಥಾನ ತಲುಪಿ ಸಮಾಜದ ಸೇವೆ ಸಲ್ಲಿಸುತ್ತಿದ್ದಾರೆ ಎಂದು ತಿಳಿಸಿದರು.
ರೋಟರಿ ಮಾಜಿ ಸಹಾಯಕ ಗೌರ‌್ನರ್ ಜಿ.ವಿಜಯಕುಮಾರ್, ವಸಂತ ಹೋಬಳಿದಾರ್, ನಿವೃತ್ತ ಅಧಿಕಾರಿ ಚಂದ್ರಶೇಖರಯ್ಯ, ಡಾ. ಪರಮೇಶ್ವರ ಶಿಗ್ಗಾವ್, ಅರುಣ್ ದೀಕ್ಷಿತ್, ನಿವೃತ್ತ ಪ್ರಾಚಾರ್ಯ ಡಾ. ಧನಂಜಯ, ಪ್ರದೀಪ್ ಎಲಿ, ಕೇಶವಪ್ಪ, ಸಂತೋಷ್, ಕಾರ್ಯದರ್ಶಿ ಕಿಶೋರ್ ಕುಮಾರ್, ಗಣೇಶ್ ಎಂ.ಅಂಗಡಿ ಉಪಸ್ಥಿತರಿದ್ದರು.