

ಮೇಲುಕೋಟೆ: ಶ್ರೀ ಚೆಲುವನಾರಾಯಣಸ್ವಾಮಿಗೆ ವೈರಮುಡಿ ಬ್ರಹ್ಮೋತ್ಸವದ ವೇಳೆ ಪಾಂಡವಪುರ ವಿಜಯ ಪ್ರಥಮದರ್ಜೆ ಕಾಲೇಜಿನ ಎನ್‌ಎಸ್‌ಎಸ್ ಶಿಬಿರಾರ್ಥಿಗಳು ಸೇವೆ ಮಾಡುವ ಮೂಲಕ ನಾಗರಿಕರ ಮೆಚ್ಚುಗೆಗೆ ಪಾತ್ರರಾದರು.
ಶಾಸಕ ದರ್ಶನ್‌ಪುಟ್ಟಣ್ಣಯ್ಯ ಆಹ್ವಾನದ ಮೇರೆಗೆ ಶಿಬಿರಾಧಿಕಾರಿ ಪ್ರೊ.ವೆಂಕಟೇಗೌಡ ಅವರ ಮಾರ್ಗದರ್ಶನದಲ್ಲಿ ಏ.6 ರಿಂದ 12ರವರೆಗೆ ವಾರ್ಷಿಕ ವಿಶೇಷ ಶಿಬಿರವನ್ನು ಮೇಲುಕೋಟೆಯಲ್ಲಿ ಹಮ್ಮಿಕೊಳ್ಳಲಾಗಿ ಐವತ್ತು ವಿದ್ಯಾರ್ಥಿಗಳು ಭಕ್ತರ ಅನುಕೂಲಕ್ಕಾಗಿ ಹಲವು ರೀತಿಯ ಶ್ರಮದಾನ ಮಾಡಿದರು. ಏ.7ರ ವೈರಮುಡಿ ಉತ್ಸವದಂದು 12 ಗಂಟೆ ನಿರಂತರವಾಗಿ ಸಹಸ್ರಾರು ಭಕ್ತರಿಗೆ ಅನ್ನಪ್ರಸಾದ ಬಡಿಸಿ ಅನ್ನದಾನ ನಿರ್ವಹಣೆ ಮಾಡಿದರು. ಜತೆಗೆ ರಥೋತ್ಸವ ತೆಪ್ಪೋತ್ಸವ ಸೇರಿದಂತೆ ಬ್ರಹ್ಮೋತ್ಸವದ ನಡೆದ ಏ.12ರವರೆಗೆ ಪ್ರತಿದಿನ ಅನ್ನದಾನ ಸುಸಜ್ಜಿತವಾಗಿ ನಡೆಸಿದರು. ಕೊನೆಯ ದಿನ ನಾಲ್ಕು ಟ್ರಾಕ್ಟರ್‌ಗಳಷ್ಟು ಪ್ಲಾಸ್ಟಿಕ್‌ತ್ಯಾಜ್ಯಗಳು, ಬಳಸಿ ಬಿಸಾಡಿದ ಬಟ್ಟೆಗಳು, ತಿಂದು ಉಳಿಸಿದ ಆಹಾರಗಳ ರಾಶಿ, ಪ್ಲಾಸ್ಟಿಕ್ ನೀರಿನ ಬಾಟಲಿಗಳನ್ನು ಮುಜಗರವಿಲ್ಲದೆ ಸ್ವಚ್ಛ ಮಾಡಿದರು. ಕಲ್ಯಾಣಿಯ ಸಾಲುಮಂಟಪದ ಹಿಂಭಾಗ ನಿರ್ಮಿಸಿದ್ದ ತುಳಸಿ ತೋಟದಲ್ಲಿ ಹೇರಳವಾಗಿ ಬೆಳೆದಿದ್ದ ಕಳೆಯ ಗಿಡಗಳನ್ನು ಕಿತ್ತು ಪಾತಿ ಮಾಡಿ ತೋಟಕ್ಕೆ ಕಳೆ ತಂದುಕೊಟ್ಟರು.
ವೈರಮುಡಿಯ ತೀರ್ಥಸ್ನಾನ ಮಹೋತ್ಸವದಂದು ಕಲ್ಯಾಣಿಯ ಸುತ್ತ ಸ್ವಚ್ಛತಾ ಕಾರ್ಯ ಮಾಡುವ ಜತೆಗೆ ಪೊಲೀಸರ ಅನುಪಸ್ಥಿತಿಯಲ್ಲಿ ಬೆಳಗ್ಗೆ 5ರಿಂದ 2.30ಗಂಟೆಯವರೆಗೆ ಕಲ್ಯಾಣಿಯ ನೀರನ್ನು ಯಾರೂ ಸ್ಪರ್ಷಿಸದಂತೆ ಕಟ್ಟೆಚ್ಚರ ವಹಿಸಿ ಸಂಪ್ರದಾಯ ಕಾಪಾಡುವ ಜತೆಗೆ 50 ಸಾವಿರದಷ್ಟು ಭಕ್ತರು ನೆರೆದಿದ್ದರೂ ತೀರ್ಥಸ್ನಾನದಲ್ಲಿ ಯಾವುದೇ ನೂಕುನುಗ್ಗಲಾಗದಂತೆ ನೋಡಿಕೊಂಡರು. ರಥೋತ್ಸವದಂದು ದೇವಾಲಯದಲ್ಲಿ ದರ್ಶನಕ್ಕೆ ಸಾಗುವ ಭಕ್ತರ ಸರತಿಸಾಲನ್ನೂ ನಿರ್ವಹಿಸಿದರು. ಶಿಬಿರಾರ್ಥಿಗಳಿಗೆ ಅನ್ನದಾನ ಭವನದಲ್ಲೇ ವಾಸ್ತವ್ಯ ಮತ್ತು ಊಟ-ತಿಂಡಿಯ ವ್ಯವಸ್ಥೆ ಮಾಡಲಾಗಿತ್ತು. ಸಹಶಿಬಿರಾಧಿಕಾರಿಗಳಾಗಿ ಉಪನ್ಯಾಸಕ ರಾಜೇಶ್, ಮಹದೇವಯ್ಯ, ಎಚ್.ಎನ್.ಸುರೇಶ್ ಭಾಗವಹಿಸಿದ್ದರು.
ಪಾಂಡವಪುರ ವಿಜಯ ಪ್ರಥಮದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರಾರ್ಥಿಗಳು ಮೇಲುಕೋಟೆ ವೈರಮುಡಿ ಬ್ರಹ್ಮೋತ್ಸವದಲ್ಲಿ ಮಾಡಿದ ಸಾರ್ಥಕವಾದ ಶ್ರಮದಾನ ಸೇವೆಯನ್ನು ಪ್ರಶಂಸಿಸಿರುವ ದೇವಾಲಯದ ಇಒ ಶೀಲಾ ಮತ್ತು ಪಾರುಪತ್ತೇಗಾರ್ ಸ್ಥಾನಾಚಾರ್ಯ ಶ್ರೀನಿವಾಸ ನರಸಿಂಹನ್ ಗುರೂಜಿ ವಿದ್ಯಾರ್ಥಿಗಳಿಗೆ ಚೆಲುವನಾರಾಯಣ ಸ್ವಾಮಿಯ ಕೃಪೆಯಿಂದ ಉಜ್ವಲ ಭವಿಷ್ಯ ಲಭ್ಯವಾಗಲಿ ಎಂದು ಹಾರೈಸಿದರು.