ಸಮಾಜದಲ್ಲಿ ಸೇವೆ ಮಾಡುವುದು ಕಲಿಕೆಯೇ; ಎಂ.ಎಚ್. ಪಾಟೀಲ

26-RNR-03
Published on

ರಾಣೆಬೆನ್ನೂರ: ಕೇವಲ ನಾಲ್ಕು ಗೋಡೆಗಳ ಮಧ್ಯೆ ಕಲಿತ ಪಾಠ ಅಷ್ಟೇ ಶಿಕ್ಷಣವಲ್ಲ. ಸಾಮಾಜಿಕ ಸೇವೆ ಸೇರಿ ಸಮಾಜದಲ್ಲಿ ನಡೆಯುವ ಪ್ರತಿಯೊಂದು ಕೆಲಸ ಕಾರ್ಯಗಳು, ಘಟನಾವಳಿಗಳು ನಿತ್ಯದ ಬದುಕಿನ ಪಾಠ ಕಲಿಸಿಕೊಡುತ್ತವೆ ಎಂದು ಬಿಇಒ ಎಂ.ಎಚ್. ಪಾಟೀಲ ಹೇಳಿದರು.
ನಗರದ ಆರ್‌ಟಿಇಎಸ್ ಬಿಎಡ್ ಕಾಲೇಜ್‌ನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ ತಾಲೂಕಿನ ರಾಹುತನಕಟ್ಟಿ ಗ್ರಾಮದಲ್ಲಿ ಭಾನುವಾರ ಏರ್ಪಡಿಸಿದ್ದ ಎನ್‌ಎಸ್‌ಎಸ್ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿ ದಿಸೆಯಿಂದಲೇ ಎಲ್ಲರೂ ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು. ಎನ್‌ಎಸ್‌ಎಸ್ ಶಿಬಿರದಿಂದ ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣ ಬೆಳೆಯುತ್ತದೆ ಎಂದರು.
ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸುಭಾಸ ಸಾವಕಾರ ಅಧ್ಯಕ್ಷತೆ ವಹಿಸಿದ್ದರು.
ಪ್ರಾಚಾರ್ಯ ಡಾ. ಕೋಟ್ರೇಶ ಬಸಾಪುರ, ಎನ್‌ಎಸ್‌ಎಸ್ ಸಂಯೋಜನಾಧಿಕಾರಿ ಡಾ. ಸಿ.ಎಸ್. ಕುಮ್ಮೂರ, ಉಪನ್ಯಾಸಕರಾದ ಅರುಣಕುಮಾರ ಕಲ್ಮಠ, ಸುಧಾ ನ್ಯಾಮತಿ, ದೀಪಾ ಕೆ.ವಿ., ರಾಘವೇಂದ್ರ ಕಡ್ಲಿಮಠ, ಗಾಯತ್ರಿ ಕೆ.ಬಿ., ಮಧುಮತಿ ಸಂಶಿ, ಗುತ್ತೆಮ್ಮ ಬಿ.ಕೆ, ಸರೋಜಾ ಕೊರವರ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net