ಹಲ್ಲೆ ನಡೆಸಿದರೆ ಎನ್​ಎಸ್​ಎ ಕೇಸ್

case april 20
Published on

ಲಖನೌ: ಕರೊನಾ ಸೋಂಕಿಗೆ ಶುಶ್ರೂಷೆ ನೀಡುತ್ತಿರುವ ವೈದ್ಯಕೀಯ ಸಿಬ್ಬಂದಿ ಮೇಲೆ ಹಲ್ಲೆ ನಡೆಸುತ್ತಿರುವ ತಬ್ಲಿಘಿ ಜಮಾತ್ ಸದಸ್ಯರ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್​ಎಸ್​ಎ) ಅಡಿಯಲ್ಲಿ ಪ್ರಕರಣ ದಾಖಲಿಸಲು ಉತ್ತರ ಪ್ರದೇಶ ಸರ್ಕಾರ ಆದೇಶಿಸಿದೆ. ಗಾಜಿಯಾಬಾದ್​ನಲ್ಲಿ ವೈದ್ಯಕೀಯ ಸಿಬ್ಬಂದಿ ಮೇಲೆ ಹಲ್ಲೆ ನಡೆದ ಬೆನ್ನಿಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಈ ಕಠಿಣ ಕ್ರಮಕ್ಕೆ ಆದೇಶಿಸಿದ್ದಾರೆ. ಸಾರ್ವಜನಿಕ ಸುವ್ಯವಸ್ಥೆಗೆ ಭಂಗ ತರುತ್ತಿದ್ದಾರೆಂದು ಕಂಡುಬಂದ ಆರೋಪಿಗಳನ್ನು ವರ್ಷದ ಅವಧಿಗೆ ಯಾವುದೇ ಕಾರಣ ನೀಡಿದೆ ಬಂಧನದಲ್ಲಿ ಇರಿಸಿಕೊಳ್ಳಲು ಎನ್​ಎಸ್​ಎ ಅಡಿ ಅವಕಾಶ ಇದೆ.

ಆಸ್ಪತ್ರೆಯಲ್ಲಿ ನಡೆದದ್ದೇನು?: ತಬ್ಲಿಘಿ ಜಮಾತ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ 6 ಮಂದಿಯನ್ನು ಗಾಜಿಯಾಬಾದ್​ನ ಎಂಎಂಜಿ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಸುರಕ್ಷತೆ ನಿಯಮ ಉಲ್ಲಂಘಿಸುತ್ತಿದ್ದ ಇವರಿಗೆ ವೈದ್ಯಕೀಯ ಸಿಬ್ಬಂದಿ ಪದೇ ಪದೆ ಎಚ್ಚರಿಕೆ ನೀಡುತ್ತಿದ್ದರೂ, ಲೆಕ್ಕಿಸದೆ ಸಿಬ್ಬಂದಿಯ ಜತೆಗೆ ಜಗಳ ತೆಗೆದು ಅವಾಚ್ಯವಾಗಿ ಬೈದಾಡಿದರು. ಅಸಭ್ಯ ವರ್ತನೆ ತೋರಿದರು. ವಾರ್ಡ್​ಗಳಲ್ಲಿ ನಗ್ನವಾಗಿ ಓಡಾಡತೊಡಗಿದರು. ಬೀಡಿ, ಸಿಗರೇಟ್ ನೀಡುವಂತೆ ಪೀಡಿಸತೊಡಗಿದರು.

ಕೆಲವರು ಮಹಿಳಾ ಸಿಬ್ಬಂದಿ ಮೇಲೆ ಹಲ್ಲೆಯನ್ನೂ ಮಾಡಿದರು. ಈ ಬಗ್ಗೆ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಗೆ (ಸಿಎಂಒ) ಹಲ್ಲೆಗೊಳಗಾದ ಸಿಬ್ಬಂದಿ ದೂರು ನೀಡಿದ್ದಾರೆ. ಇದರ ಆಧಾರದ ಸಿಎಂಒ ಪೊಲೀಸರಲ್ಲಿ ದೂರು ದಾಖಲಿಸಿದರು. ಈಗ ಇವರ ವಿರುದ್ಧ ಎನ್​ಎಸ್​ಎ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ದೆಹಲಿಯ ಹಜರತ್ ನಿಜಾಮುದ್ದೀನ್​ನಲ್ಲಿ ನಡೆದ ತಬ್ಲಿಘಿ ಜಮಾತ್​ನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ 136 ಜನರನ್ನು ಗುರುತಿಸಲಾಗಿದ್ದು, ಇವರಲ್ಲಿ ಆರು ಮಂದಿಯಲ್ಲಿ ಸೋಂಕಿನ ಲಕ್ಷಣ ಗೋಚರಿಸಿದ ಕಾರಣ ಅವರನ್ನು ಐಸೋಲೇಷನ್ ವಾರ್ಡ್​ನಲ್ಲಿ ಇರಿಸಲಾಯಿತು.

ಈ ಪೈಕಿ ಒಬ್ಬನಲ್ಲಿ ಪಾಸಿಟಿವ್ ಕಾಣಿಸಿಕೊಂಡಿದೆ. ಅನುಚಿತ ವರ್ತನೆ, ಹಲ್ಲೆ ಹಿನ್ನೆಲೆಯಲ್ಲಿ ಈ ಸದಸ್ಯರ ಇರುವ ಕ್ವಾರಂಟೈನ್ ಮತ್ತು ಐಸೋಲೇಷನ್ ವಾರ್ಡ್​ಗಳಿಗೆ ಮಹಿಳಾ ಸಿಬ್ಬಂದಿ ನಿಯೋಜಿಸದಂತೆ ಉತ್ತರ ಪ್ರದೇಶ ಸರ್ಕಾರ ಆದೇಶಿಸಿದೆ. ಇಂಥ ಜನರಿರುವ ವಾರ್ಡ್​ಗಳಿಗೆ ಪುರುಷ ನರ್ಸ್, ವೈದ್ಯರು ಮತ್ತು ಪೊಲೀಸ್ ಸಿಬ್ಬಂದಿ ಮಾತ್ರ ನಿಯೋಜಿಸಬೇಕು ಎಂದು ಸೂಚಿಸಲಾಗಿದೆ.

ಕಾನೂನು ಪಾಲಿಸದವರು, ಸರ್ಕಾರಿ ಆದೇಶ ಧಿಕ್ಕರಿಸುವವರು ಮಾನವೀಯತೆಯ ಶತ್ರುಗಳು. ಶುಶ್ರೂಷಕಿಯರ ಮೇಲೆ ಅವರು ನಡೆಸಿದ ಕೃತ್ಯ ಅತ್ಯಂತ ಹೀನ ಅಪರಾಧ. ಈ ದುರುಳರನ್ನು ಸುಮ್ಮನೆ ಬಿಡುವುದಿಲ್ಲ. | ಯೋಗಿ ಆದಿತ್ಯನಾಥ್ ಉತ್ತರ ಪ್ರದೇಶ ಮುಖ್ಯಮಂತ್ರಿ https://www.vijayavani.net/earth-quake-in-kr-nagara-and-arakalagudu/

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net