ಈಶಾನ್ಯ ದೆಹಲಿ ಹಿಂಸಾಚಾರ: ರಾಷ್ಟ್ರೀಯ ಭದ್ರತೆ ಸಲಹೆಗಾರ ಅಜಿತ್​ ದೋವಲ್​ರಿಂದ ಸ್ಥಳೀಯರೊಂದಿಗೆ ಮಾತುಕತೆ

Ajit Dova;
Published on

ನವದೆಹಲಿ: ಸಿಎಎ ಪರ-ವಿರೋಧ ಬಣದಿಂದ ಈಶಾನ್ಯ ದೆಹಲಿಯಲ್ಲಿ ಉಲ್ಬಣಗೊಂಡಿರುವ ಹಿಂಸಾಚಾರವನ್ನು ತಹಬದಿಗೆ ತರಲು ರಾಷ್ಟ್ರೀಯ ಭದ್ರತೆ ಸಲಹೆಗಾರ ಅಜಿತ್ ದೋವಲ್​ರಿಗೆ ಉಸ್ತುವಾರಿಯನ್ನು ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಬುಧವಾರ ಸಂಜೆ ಹಿಂಸಾಚಾರದ ಪ್ರದೇಶಗಳಿಗೆ ಭೇಟಿ ನೀಡಿದ ದೋವಲ್ ರಕ್ಷಣೆಯನ್ನು ಪರಿಶೀಲಿಸಿ, ಸ್ಥಳೀಯರೊಂದಿಗೆ ಮಾತುಕತೆ ನಡೆಸಿದರು.

ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಪರಿಸ್ಥಿತಿ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದಿದೆ. ಜನರು ಆರಾಮವಾಗಿದ್ದಾರೆ. ಕಾನೂನು ಜಾರಿ ಸಂಸ್ಥೆಗಳ ಮೇಲೆ ನನಗೆ ಬಲವಾದ ನಂಬಿಕೆ ಇದೆ. ಪೊಲೀಸರು ತಮ್ಮ ಕರ್ತವ್ಯವನ್ನು ನಿಭಾಯಿಸುತ್ತಿದ್ದಾರೆ ಎಂದು ಹೇಳಿದರು.

ದೋವಲ್​ ಅವರು ಪೊಲೀಸ್​ ಅಧಿಕಾರಿಗಳ ಬೆಂಗಾವಲಿನೊಂದಿಗೆ ಭಾನುವಾರದಿಂದ ಅತ್ಯಂತ ಕೆಟ್ಟ ಪರಿಸ್ಥಿತಿಯನ್ನು ಎದುರಿಸುತ್ತಿರುವ ಜಾಫರಾಬಾದ್​ಗೆ ಆಗಮಿಸಿದರು. ಈಗಾಗಲೇ ಹಿಂಸಾಚಾರದಲ್ಲಿ 23 ಮಂದಿ ಸಾವಿಗೀಡಾಗಿದ್ದು, 200ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಈ ಹಿನ್ನೆಲೆಯಲ್ಲಿ ಭೇಟಿ ನೀಡಿದ ದೋವಲ್​ ಅವರಿಗೆ ಮೊದಲು ಯುವತಿಯೊಬ್ಬಳು ಎದುರಾದಳು. ಈ ವೇಳೆ ಮಾತನಾಡಿದ ಆಕೆ, ನಾನೋರ್ವ ವಿದ್ಯಾರ್ಥಿನಿ, ನಾನು ರಾತ್ರಿಯಿಡಿ ನಿದ್ದೆಯನ್ನೇ ಮಾಡಿಲ್ಲ. ನಾವ್ಯಾರು ಹೋರಾಟವನ್ನು ಮಾಡುತ್ತಿಲ್ಲ. ಓದಲು ಹೊರಗೆ ಹೋಗಲು ಆಗುತ್ತಿಲ್ಲ ಎಂದು ನೋವು ತೋಡಿಕೊಂಡಳು. ಇದಕ್ಕೆ ಪ್ರತಿಕ್ರಿಯಿಸಿದ ದೋವಲ್​, ನೀನು ಚಿಂತಿಸಬೇಡ. ಇದು ಸರ್ಕಾರ ಮತ್ತು ಪೊಲೀಸರ ಜವಾಬ್ದಾರಿ ಎಂದರು.

ಈ ವೇಳೆ ಧೈರ್ಯವಾಗಿಯೇ ದೋವಲ್​ ಮಾತಿನ ಮಧ್ಯ ಪ್ರವೇಶಿಸಿದ ವಿದ್ಯಾರ್ಥಿನಿ ಪೊಲೀಸರು ಅವರ ಕರ್ತವ್ಯವನ್ನು ಸರಿಯಾಗಿ ನಿಭಾಯಿಸುತ್ತಿಲ್ಲ ಎಂದು ಆರೋಪಿಸಿದಳು. ಇದಕ್ಕೆ ಪ್ರತಿಕ್ರಿಯಿಸಿದ ದೋವಲ್​, ಎಲ್ಲವೂ ಸರಿಯಾಗುತ್ತದೆ ಎಂದು ಭರವಸೆ ನೀಡಿದರು.

ಗೃಹ ಸಚಿವ ಅಮಿತ್​ ಷಾ ಸಲಹೆಯಂತೆ ರಾಷ್ಟ್ರೀಯ ಭದ್ರತೆ ಸಲಹೆಗಾರರಾಗಿರುವ ಅಜಿತ್​ ದೋವಲ್​ ಹಿಂಸಾಚಾರ ನಡೆದ ಪ್ರದೇಶಗಳಿಗೆ ಭೇಟಿ ನೀಡಿದ್ದಾರೆ. ಭೇಟಿಗೂ ಮುನ್ನ ದೋವಲ್​ ಅವರು ನಿನ್ನೆ ಸಂಜೆಯಷ್ಟೇ ನೇಮಕವಾದ ದೆಹಲಿ ಪೊಲೀಸ್​ ವಿಶೇಷ ಆಯುಕ್ತ(ಕಾನೂನು ಸುವ್ಯವಸ್ಥೆ) ಎಸ್​.ಎಸ್​.ಶ್ರೀವಾಸ್ತವ, ವಿಶೇಷ ಪೊಲೀಸ್​ ಆಯುಕ್ತ (ಅಪರಾಧ) ಸತೀಶ್​ ಗೊಲ್ಚ ಮತ್ತು ಈಶಾನ್ಯ ದೆಹಲಿಯ ಡೆಪ್ಯುಟಿ ಪೊಲೀಸ್​ ಆಯುಕ್ತ ವೇದ್​ ಪ್ರಕಾಶ್​ ಸೂರ್ಯ ಅವರೊಂದಿಗೆ ಸಭೆ ನಡೆಸಿದರು.

ಸಭೆಯಲ್ಲಿ ಭದ್ರತಾ ವ್ಯವಸ್ಥೆಗಳನ್ನು ಪರಿಶೀಲಿಸಿದರು. ಅಲ್ಲದೆ, ಬೆಳಗ್ಗೆಯಿಂದ ನಡೆದಿರುವ ಹೊಸ ಬೆಳವಣಿಗೆಯನ್ನು ಅವಲೋಕಿಸಿದರು. ಕಳೆದ ರಾತ್ರಿ ದೋವಲ್​ ಅವರು ಸೀಲಾಂಪುರ್​, ಜಾಫರಾಬಾದ್​, ಮೌಜ್​ಪುರ್​ ಮತ್ತು ಗೋಕುಲ್​ಪುರಿ ಚೌಕ್​ಗೆ ಭೇಟಿ ನೀಡಿದ್ದರು. ಈ ವೇಳೆ ಮಾತನಾಡಿದ ಅವರು ಜನರು ದೆಹಲಿ ಪೊಲೀಸರ ಉದ್ದೇಶಗಳು ಮತ್ತು ಸಾಮರ್ಥ್ಯದ ಮೇಲೆ ಅನುಮಾನವಿದೆ. ಈ ಬಗ್ಗೆ ಜನರಿಗೆ ಅರಿವು ಮೂಡಿಸಬೇಕು. ಸಮವಸ್ತ್ರದಲ್ಲಿರುವ ಪೊಲೀಸರನ್ನು ಜನರು ನಂಬಬೇಕಿದೆ ಎಂದು ಹೇಳಿದ್ದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net