

ಎನ್.ಆರ್.ಪುರ: ಪಟ್ಟಣದ ಅಭಿವೃದ್ಧಿಗಾಗಿ 10 ಕೋಟಿ ರೂ. ಅನುದಾನ ಮಂಜೂರು ಮಾಡಿಸಿಕೊಂಡು ಬಂದಿರುವೆ ಎಂದು ಮಾಜಿ ಎಂಎಲ್ಸಿ ಎಂ.ಶ್ರೀನಿವಾಸ್ ಹೇಳಿದರು.
ಪ್ರವಾಸಿ ಮಂದಿರ ಇನ್ನಷ್ಟು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ನಿರ್ವಹಣೆ, ಅಭಿವೃದ್ಧಿಗಾಗಿ 50 ಲಕ್ಷ ರೂ. ಅನುದಾನವನ್ನು ಪಿಡಬ್ಲುೃಡಿ ಸಚಿವರು ಮಂಜೂರು ಮಾಡಿಕೊಟ್ಟಿದ್ದಾರೆ. ಸಚಿವ ಜಮೀರ್ ಅಹಮ್ಮದ್ ಅವರು ಅಲ್ಪಸಂಖ್ಯಾತರ ಕಾಲನಿ ಅಭಿವೃದ್ಧಿಯಡಿ 5.20 ಕೋಟಿ ರೂ. ಅನುದಾನ ಮಂಜೂರು ಮಾಡಿದ್ದಾರೆ. ಹೊನ್ನೇಕುಡಿಗೆ ಸಂಪರ್ಕ ರಸ್ತೆಗಾಗಿ 2 ಕೋಟಿ ರೂ. ಅನುದಾನ ನೀಡಿದ್ದಾರೆೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬಡವರಿಗೆ ಸೂರೊದಗಿಸಬೇಕೆಂಬ ಆಸೆ ಇದೆ. ಕಳೆದ ವರ್ಷ ಆಶ್ರಯ ನಿವೇಶನ ಅಭಿವೃದ್ಧಿಗೆ 3.36 ಕೋಟಿ ರೂ. ಮಂಜೂರಾಗಿತ್ತು. ಟೆಂಡರ್ ಪ್ರಕ್ರಿಯೆ ನಡೆದು ಕೇವಲ 62 ಲಕ್ಷ ರೂ. ಅನುದಾನದ ಕೊರತೆಯಿಂದ ನಿಂತು ಹೋಗಿತ್ತು. ಈಗ 62 ಲಕ್ಷ ರೂ. ಅನುದಾನ ನೀಡಲಾಗುತ್ತಿದೆ. ಇವೆಲ್ಲವನ್ನೂ ನಾನು ಯಾವುದೇ ಪ್ರತಿಲಾಪೇಕ್ಷೆ ಇಲ್ಲದೆ ಯಾವುದೇ ಅಧಿಕಾರವಿಲ್ಲದೆ ಹುಟ್ಟೂರಿನ ಅಭಿಮಾನಕ್ಕೋಸ್ಕರ ಮಾಡುತ್ತಿದ್ದೇನೆ ಎಂದರು.
ಈಗಾಗಲೇ ಇರುವ ತಾಲೂಕು ಆಡಳಿತದ ಮಿನಿ ವಿಧಾನಸೌಧ ಅರಣ್ಯ ಜಾಗದಲ್ಲಿದೆ. ಈ ಜಾಗನ್ನು ಲೀಜ್‌ಗೆ ಪಡೆಯಲಾಗಿದ್ದು ಲೀಜ್‌ನ ಅವಧಿ ಮುಕ್ತಾಯವಾಗುವ ಸಮಯ ಬಂದಿದೆ. ಪಟ್ಟಣದಲ್ಲಿ ಈಗಿರುವ ಅರಣ್ಯ ಇಲಾಖೆ ಕಚೇರಿ ಜಾಗಕ್ಕೆ ಮಿನಿವಿಧಾನಸೌಧವನ್ನು ಸ್ಥಳಾಂತರ ಮಾಡಬೇಕು. ಬಹಳ ವರ್ಷಗಳ ಕನಸಾಗಿರುವ ಮುಖ್ಯ ರಸ್ತೆ ವಿಸ್ತರಣೆ ಮಾಡಿಸಬೇಕೆಂಬುವುದು ನನ್ನ ಕನಸಾಗಿದೆ. ಈ ನಿಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯನವರ ಬಳಿ 60 ಕೋಟಿ ರೂ. ಅನುದಾನದ ಬೇಡಿಕೆ ಇಟ್ಟಿದ್ದೇನೆ. ಅನುದಾನ ಕೊಡುವ ಭರವಸೆ ನೀಡಿದ್ದಾರೆ ಎಂದರು.