ಎನ್​ಆರ್​ಐ ಸಚಿವಾಲಯ ಶೀಘ್ರದಲ್ಲೇ ಸ್ಥಾಪನೆ, ಸಮಸ್ಯೆಗಳಿಗೆ ಸ್ಪಂದನೆ

NRI Day
Published on

ಬೆಂಗಳೂರು: ಅನಿವಾಸಿ ಭಾರತೀಯರ ಕಷ್ಟ ಕೋಟಲೆಗಳಿಗೆ ಸ್ಪಂದಿಸಲು ರಾಜ್ಯ ಸರ್ಕಾರ ಪ್ರತ್ಯೇಕ ಸಚಿವಾಲಯ ಸ್ಥಾಪಿಸಲಿದೆ. ಈಗಾಗಲೇ ಅನಿವಾಸಿ ಭಾರತೀಯ ಸಮಿತಿ ರಚಿಸಿ, ಪ್ರತ್ಯೇಕ ನೀತಿ ರೂಪಿಸಿ ರಚನಾತ್ಮಕ ಕಾರ್ಯಕ್ರಮಗಳ ಮೂಲಕ ಹೊರದೇಶಗಳಲ್ಲಿರುವ ಕನ್ನಡಿಗರ ಸಂಕಷ್ಟಗಳಿಗೆ ಪರಿಹಾರ ಒದಗಿಸುತ್ತಿರುವ ರಾಜ್ಯ ಸರ್ಕಾರ, ನಾಲ್ಕೈದು ತಿಂಗಳಲ್ಲಿ ಪ್ರತ್ಯೇಕ ಸಚಿವಾಲಯ ಸ್ಥಾಪಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿದೆ. ಮಂಗಳವಾರ ಪ್ರವಾಸಿ ಭಾರತೀಯ ದಿವಸ ಹಿನ್ನೆಲೆಯಲ್ಲಿ ‘ವಿಜಯವಾಣಿ’ ಆಯೋಜಿಸಿದ್ದ ಸಂವಾದದಲ್ಲಿ ಅನಿವಾಸಿ ಭಾರತೀಯರ ಕೋಶದ ಉಪಾಧ್ಯಕ್ಷೆ ಡಾ. ಆರತಿ ಕೃಷ್ಣ, ಸರ್ಕಾರದ ಯೋಜನೆಗಳ ಮುನ್ನೋಟ ಮುಂದಿಟ್ಟರು.

ವೈಬ್ರಂಟ್ ಗುಜರಾತ್ ಮಾದರಿಯಲ್ಲಿ ಕರ್ನಾಟಕದಲ್ಲಿ ಪ್ರವಾಸೋದ್ಯಮ ದಿವಸ ಆಚರಣೆ, ಡೇಟಾ ಸಂಗ್ರಹ, ಎನ್​ಆರ್​ಐಗಳ ಕಾನೂನಾತ್ಮಕ ಸಮಸ್ಯೆಗಳ ಪರಿಹಾರಕ್ಕೆ ಪ್ರತ್ಯೇಕ ಸೆಲ್, ಫಾಸ್ಟ್ ಟ್ರಾ್ಯಕ್ ಕೋರ್ಟ್ ಸ್ಥಾಪನೆ, ಜಿಲ್ಲಾ ಮಟ್ಟದಲ್ಲಿ ನೋಡಲ್ ಅಧಿಕಾರಿ ನೇಮಕ, ಸಹಾಯವಾಣಿ ಸ್ಥಾಪನೆ, ವಿದೇಶಕ್ಕೆ ಹೋಗುವವರಿಗೆ ಕೌಶಲ ತರಬೇತಿ, ಬಂಡವಾಳ ಹೂಡಿಕೆಗೆ ಏಕಗವಾಕ್ಷಿ ಅನುಮೋದನೆ, ವಂಚಕ ಕಂಪನಿಗಳಿಂದ ಮೋಸ ಹೋಗದಂತೆ ಜಾಗೃತಿ ಕಾರ್ಯಕ್ರಮ, ‘ನಮ್ಮ ಊರು ನಮ್ಮ ನಾಡು’ ಹೆಸರಿನಲ್ಲಿ ಗ್ರಾಮಗಳನ್ನು ದತ್ತು ಪಡೆಯಲು ಅನಿವಾಸಿ ಭಾರತೀಯರಿಗೆ ಉತ್ತೇಜನ.... ಇಂಥ ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸುವ ಮಹತ್ವಾಕಾಂಕ್ಷೆಯನ್ನು ಆರತಿ ಕೃಷ್ಣ ವ್ಯಕ್ತಪಡಿಸಿದರು.

ವರ್ಷಕ್ಕೊಮ್ಮೆ ಕರ್ನಾಟಕ ಪ್ರವಾಸಿ ದಿವಸ: ಕೇಂದ್ರ ಸರ್ಕಾರ ಎರಡು ವರ್ಷಕ್ಕೊಮ್ಮೆ ಪ್ರವಾಸಿ ಭಾರತೀಯ ದಿವಸ ಆಚರಿಸುತ್ತದೆ. ನಾವು ಪ್ರತಿವರ್ಷ ರಾಜ್ಯಮಟ್ಟದಲ್ಲಿ ಕರ್ನಾಟಕ ಪ್ರವಾಸಿ ದಿವಸ ಆಚರಿಸಲು ಯೋಚಿಸಿದ್ದೇವೆ. ಈ ಸಂದರ್ಭದಲ್ಲಿ ಅನಿವಾಸಿ ಭಾರತೀಯರು ಒಟ್ಟುಗೂಡಿ ತಮ್ಮ ಸಮಸ್ಯೆಗಳನ್ನು ರ್ಚಚಿಸಲು ವೇದಿಕೆ ಕಲ್ಪಿಸಿಕೊಡುತ್ತೇವೆ ಎಂದರು.

ಅನುದಾನಕ್ಕೆ ಮನವಿ

ಅನಿವಾಸಿ ಭಾರತೀಯರಿಗೆ ಪ್ರತ್ಯೇಕ ಸಚಿವಾಲಯ ಸ್ಥಾಪಿಸುವ ಹಿನ್ನೆಲೆಯಲ್ಲಿ ಈ ವರ್ಷದ ಬಜೆಟ್​ನಲ್ಲಿ ಹೆಚ್ಚಿನ ಅನುದಾನಕ್ಕೆ ಮುಖ್ಯಮಂತ್ರಿಗೆ ಬೇಡಿಕೆ ಇಡುತ್ತೇವೆ. ಪ್ರಸ್ತುತ 2 ಕೋಟಿ ಅನುದಾನ ನೀಡಿದ್ದು, 20-30 ಕೋಟಿ ಅನುದಾನ ನೀಡುವಂತೆ ಕೇಳುತ್ತೇವೆ ಎಂದರು.

ಕೈಗಾರಿಕೆಗೂ ಪ್ರಯತ್ನ

ವಿದೇಶಗಳಿಂದ ಕರ್ನಾಟಕಕ್ಕೆ ವಾಪಸಾಗá-ವವರಿಗೆ ಉದ್ಯೋಗ ದೊರಕಿಸಿಕೊಡಲು ಕೈಗಾರಿಕೆ ಸ್ಥಾಪನೆಗೂ ಸರ್ಕಾರ ಚಿಂತನೆ ನಡೆಸಲಿದೆ. ಬೇರೆ ದೇಶದಲ್ಲಿ ಸಂಕಷ್ಟದಲ್ಲಿ ಸಿಲುಕಿದವರಿಗೆ ಆರ್ಥಿಕ ನೆರವು, ವಿದೇಶಗಳಲ್ಲಿ ಮೃತಪಟ್ಟ ವೇಳೆ ಶವ ಸಾಗಣೆಗೆ ಸಹಾಯಹಸ್ತ, ಉದ್ಯೋಗದಾತ ಕಂಪನಿಗಳಿಂದ ಉದ್ಯೋಗಿಗಳಿಗೆ ಬರುವ ಪಿಎಫ್ ಸೇರಿದಂತೆ ಬೇರೆ ಬೇರೆ ಆರ್ಥಿಕ ನೆರವು ಕೊಡಿಸುವುದು, ವಿಮಾ ಸೌಲಭ್ಯ, ಎನ್​ಆರ್​ಐಗಳಿಗೆ ಗುರುತಿನ ಚೀಟಿ, ಪ್ರತಿದೇಶದಲ್ಲೂ ಜಾತಿ, ಉಪಜಾತಿ, ಧರ್ಮ ಹೊರತುಪಡಿಸಿ ಎನ್​ಆರ್​ಐಗಳದ್ದೇ ಒಂದು ವೇದಿಕೆ ರಚನೆಗೆ ಆದ್ಯತೆ ನೀಡಲಾಗುವುದು ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net