

ನವದೆಹಲಿ: ಬಿಜೆಪಿ ಮತಗಳ್ಳತನದ ಬಳಿಕ ಬಂಧನವನ್ನು ಅಸ್ತ್ರವಾಗಿಸಿಕೊಂಡು 30 ದಿನಗಳಲ್ಲಿ ವಿರೋಧ ಪಕ್ಷಗಳ ಸರ್ಕಾರಗಳನ್ನು ಉರುಳಿಸಲು ಪ್ರಜಾಪ್ರಭುತ್ವವನ್ನು ಅಸ್ಥಿರಗೊಳಿಸುವ ಮಸೂದೆಯನ್ನು ತರಲು ಹೊರಟಿದೆ. ಆ ಮೂಲಕ ಅಧಿಕಾರವನ್ನೂ ಕಳ್ಳತನ ಮಾಡಲು ಮುಂದಾಗಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.
ದೆಹಲಿಯ ಇಂದಿರಾ ಭವನದಲ್ಲಿ ಹರಿಯಾಣ ಮತ್ತು ಮಧ್ಯಪ್ರದೇಶದ ಜಿಲ್ಲಾ ಕಾಂಗ್ರೆಸ್ ಸಮಿತಿಗಳಿಗೆ ಹೊಸದಾಗಿ ನೇಮಕವಾದ ಅಧ್ಯಕ್ಷರೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಖರ್ಗೆ ‘ಈ ಮಸೂದೆಗಳು ಚುನಾಯಿತ ಸರ್ಕಾರವನ್ನು ರಚಿಸುವ ಮತ್ತು ತೆಗೆದುಹಾಕುವ ಜನರ ಹಕ್ಕನ್ನು ಕಸಿದುಕೊಳ್ಳುತ್ತವೆ ಮತ್ತು ಆ ಅಧಿಕಾರವನ್ನು ಜಾರಿ ನಿರ್ದೇಶನಾಲಯ ಮತ್ತು ಸಿಬಿಐನಂತಹ ಸಂಸ್ಥೆಗಳಿಗೆ ನೀಡುತ್ತದೆ. ಇದು ಪ್ರಜಾಪ್ರಭುತ್ವದ ಮೇಲೆ ಬುಲ್ದೋಜರ್ ಚಲಾಯಿಸಿದಂತೆ’ ಎಂದು ತಿಳಿಸಿದ್ದಾರೆ. ಬೆಂಗಳೂರಿನ ಮಹದೇವಪುರದಲ್ಲಿ ಮತಗಳನ್ನು ಹೇಗೆ ಕದಿಯಲಾಯಿತು ಎಂದು ರಾಹುಲ್ ಗಾಂಧಿ ಇತ್ತೀಚೆಗೆ ವಿವರವಾಗಿ ತಿಳಿಸಿದ್ದರು. ಆರು ತಿಂಗಳ ಸಂಶೋಧನೆಯ ಬಳಿಕ ನಮಗೆ ಇದೆಲ್ಲವೂ ತಿಳಿದು ಬಂದಿತ್ತು. ಚುನಾವಣಾ ಆಯೋಗ ಮೊದಲಿಗೆ ಯಾವುದೇ ಉತ್ತರ ನೀಡಲಿಲ್ಲ. ಈಗ ಇಡೀ ದೇಶ ಇದನ್ನು ಅರ್ಥ ಮಾಡಿಕೊಂಡಿದೆ. ಬಿಹಾರದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಸಂಬಂಧ ಬಿಜೆಪಿ ಸರ್ಕಾರ ಮತ್ತು ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ನಲ್ಲಿ ಹಿನ್ನಡೆ ಉಂಟಾಗಿದೆ ಎಂದು ಖರ್ಗೆ ತಿಳಿಸಿದರು.