

ಶಿವಮೊಗ್ಗ: ಸಂಸದ ಬಿ.ವೈ.ರಾಘವೇಂದ್ರ ಅವರಿನ್ನೂ ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಅಧಿಕಾರದಲ್ಲಿದೆ ಎಂದುಕೊಂಡಿದ್ದಾರೆ. ಸಂಸದರೇ ಸರ್ಕಾರ ಬದಲಾಗಿದೆ. ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರವಿದೆ. ಜಿಲ್ಲಾ ಮಂತ್ರಿಯಾಗಿ ನಾನಿದ್ದೇನೆ ಎಂಬುದನ್ನು ಮರೆಯಬೇಡಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಎಚ್ಚರಿಕೆ ನೀಡಿದರು.
ರಾಜ್ಯ ಸರ್ಕಾರದ ಅನುದಾನದಲ್ಲಿ ನಿರ್ಮಾಣಗೊಂಡ ಯೋಜನೆಗಳಿಗೆ ನಮ್ಮ ಗಮನಕ್ಕೆ ತಾರದೆ ಸಂಸದರು ರಿಬ್ಬನ್ ಕತ್ತರಿಸುತ್ತಿದ್ದಾರೆ. ಬಿಜೆಪಿಯವರಿಗೆ ರಿಬ್ಬನ್ ಕಟ್ ಮಾಡುವುದು ಒಂದು ರೋಗ. ಇಂತಹ ಕೆಟ್ಟ ಸಂಸ್ಕೃತಿಗೆ ಇನ್ಮುಂದೆ ಉಸ್ತುವಾರಿ ಸಚಿವನಾಗಿ ಕಡಿವಾಣ ಹಾಕುತ್ತೇನೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಅಬ್ಬರಿಸಿದರು.
ಯುವನಿಧಿ ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರದ ಕೆಲಸವನ್ನು ಶ್ಲಾಘಿಸಿದ್ದ ಸಂಸದರು ಮರುದಿನವೇ ಯೋಜನೆ ಸರಿ ಇಲ್ಲ ಎಂದಿದ್ದಾರೆ. ಇದು ಎಂಪಿ ಅವರ ದ್ವಂದ್ವ ಹೇಳಿಕೆ. ವೇದಿಕೆಯಲ್ಲೇ ಸರಿ ಇಲ್ಲ ಎಂಬುದನ್ನು ಸರ್ಕಾರದ ಗಮನಕ್ಕೆ ತರಬೇಕಿತ್ತು. ಅದನ್ನು ಬಿಟ್ಟು ಮರುದಿನ ಚುನಾವಣೆ ತಂತ್ರವೆಂದು ಆರೋಪಿಸಿದ್ದಾರೆ. ಸಿಎಂ ಸಿದ್ದರಾಮಯ್ಯ, ರಾಜ್ಯ ಸರ್ಕಾರ ಮತ್ತು ಅಂದು ನೆರದಿದ್ದ ಜನಸ್ತೋಮಕ್ಕೆ ಹೆದರಿ ಹಾಗೆ ಹೇಳಿದ್ದಾರೆ. ಬೇಕಿದ್ದರೆ ಕೇಂದ್ರ-ರಾಜ್ಯ ಸರ್ಕಾರದ ಸಾಧನೆಗಳ ಬಹಿರಂಗ ಚರ್ಚೆಗೆ ನಾನು ಸಿದ್ಧ ಎಂದು ಸವಾಲೆಸೆದರು.
ಅಭಿವೃದ್ಧಿ ವಿಷಯಾಧಾರಿತವಾಗಿ ನಾವು ಚುನಾವಣೆಗಳನ್ನು ನಡೆಸುತ್ತೇವೆ. ಆದರೆ ಬಿಜೆಪಿಯವರು ವೈಯಕ್ತಿಕ ವಿಷಯಗಳನ್ನು, ರಾಮ, ಧರ್ಮವನ್ನು ತರುತ್ತಾರೆ. ನಾವು ರಾಮನ ಹೆಸರೇಳಿ ಚುನಾವಣೆ ನಡೆಸುವುದಿಲ್ಲ. ಅಭಿವೃದ್ಧಿ ಹೆಸರಲ್ಲಿ ಚುನಾವಣೆಗೆ ಹೋಗುತ್ತೇವೆ ಎಂದು ಹೇಳಿದರು.
ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ, ಜಿಲ್ಲಾಧ್ಯಕ್ಷ ಎಚ್.ಎಸ್.ಸುಂದರೇಶ್, ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಎನ್.ರಮೇಶ್, ಮುಖಂಡರಾದ ಎಂ.ಶ್ರೀಕಾಂತ್, ಎಸ್.ಕೆ.ಮರಿಯಪ್ಪ, ಕಲಗೋಡು ರತ್ನಾಕರ್, ವೈ.ಎಚ್.ನಾಗರಾಜ್, ಜಿ.ಡಿ.ಮಂಜುನಾಥ, ನಾಗರಾಜ್ ಕಂಕಾರಿ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.