

ಹೈದರಾಬಾದ್: ಆನ್ಲೈನ್ ಮಾರುಕಟ್ಟೆಯಲ್ಲೀಗ ಹೊಸ ಬಗೆಯ ಸ್ಕ್ಯಾಮ್ ಸದ್ದು ಮಾಡುತ್ತಿದೆ. ಕಂಪ್ಯೂಟರ್ ಅಥವಾ ಮೊಬೈಲ್ ಫೋನ್ ಪರದೆ ಮೇಲೆ ಕಾಣುವ ‘ನಾನು ರೋಬಾಟ್ ಅಲ್ಲ’ ಎಂಬ ಬಾಕ್ಸ್ ಈ ಸ್ಕ್ಯಾಮ್ ಮೂಲ. ಇದು ನಿಮ್ಮ ಡಿವೈಸ್ನಲ್ಲಿ ವೈರಸ್ ಬಿಟ್ಟು, ಪಾಸ್ವರ್ಡ್, ಹಣ, ಡೇಟಾ ಕದಿಯಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.
ಕ್ಯಾಪ್ಚಾ ಎಂದರೆ ಆನ್ಲೈನ್ನಲ್ಲಿ ನೀವು ಮನುಷ್ಯರೇ ಎಂಬುದನ್ನು ಖಚಿತಪಡಿಸಲು ವಿನ್ಯಾಸಗೊಳಿಸಲಾದ ಸುರಕ್ಷತಾ ಪರೀಕ್ಷೆೆ. ವಿರೂಪಗೊಂಡ ಪಠ್ಯ ಟೈಪ್ ಮಾಡುವುದು, ಹೊಂದಿಕೆಯಾಗುವ ಚಿತ್ರಗಳನ್ನು ಆಯ್ಕೆ ಮಾಡುವುದು, ಆಡಿಯೊ ಸೂಚನೆಗಳನ್ನು ಆಲಿಸುವುದು, ಅಥವಾ ಕೇವಲ ಚೆಕ್ಬಾಕ್ಸ್ ಟಿಕ್ ಮಾಡುವುದು ಇದರ ವಿವಿಧ ರೂಪಗಳು. ಸೈಬರ್ ಕ್ರಿಮಿನಲ್ಗಳು ಫೇಕ್ ಕ್ಯಾಪ್ಚಾ ಪೇಜ್ ಕಳಿಸಿ, ಮಾಲ್ವೇರ್ ಡೌನ್ಲೋಡ್ ಮಾಡಿಸಿ ಮಾಹಿತಿ ಕದಿಯುತ್ತಾರೆ.
ಸೈಬರ್ ದಾಳಿಕೋರರು ಜಾಲ ಹೆಣೆಯುವ ಬಗೆಯೂ ವಿಶಿಷ್ಟವಾಗಿದೆ. ನೀವು ವೆಬ್ಸೈಟ್ ಒಂದನ್ನು ಜಾಲಾಡುತ್ತ ಇರುತ್ತೀರಿ. ಅಲ್ಲಿನ ಸಂಶಯಾಸ್ಪದ ಲಿಂಕ್ ಕ್ಲಿಕ್ ಮಾಡುತ್ತೀರಿ. ಒಂದು ಪೇಜ್ ಲೋಡ್ ಆಗುತ್ತದೆ. ಅದರಲ್ಲಿ ಕ್ಯಾಪ್ಚಾ ಬಾಕ್ಸ್ ಇರುತ್ತದೆ. ಇದು ‘ನಾನು ರೋಬಾಟ್ ಅಲ್ಲ’ ಎಂದು ಟಿಕ್ ಮಾಡಲು ಅಥವಾ ಹೆಚ್ಚಿನ ಹಂತಗಳನ್ನು ಅನುಸರಿಸಲು ಹೇಳುತ್ತದೆ. ಮೇಲ್ನೋಟಕ್ಕೆ ಇದೆಲ್ಲವೂ ಸಾಮಾನ್ಯವೆಂಬಂತೆ ತೋರುತ್ತದೆ. ಆದರೆ ಅದರ ಹಿಂದೆ ಮಾಲ್ವೇರ್ ಇರುತ್ತದೆ. ಕೆಲವು ಸ್ಕ್ಯಾಮ್ ನಿಮ್ಮನ್ನು ನಿರ್ದಿಷ್ಟ ಕೀಬೋರ್ಡ್ ಶಾರ್ಟ್ಕಟ್ಗಳನ್ನು ಒತ್ತಲು ಕೇಳುತ್ತವೆ. ಇದು ನಿಮ್ಮ ಸಿಸ್ಟಮ್ಲ್ಲಿ ರಹಸ್ಯವಾಗಿ ಮಾಲ್ವೇರ್ ಇನ್ಸ್ಟಾಲ್ ಮಾಡುತ್ತದೆ. ಅದು ಪಾಸ್ವರ್ಡ್, ಬ್ರೌಸರ್ ಕುಕೀಸ್, ಕ್ರಿಪ್ಟೋಕರೆನ್ಸಿ ವ್ಯಾಲೆಟ್ ವಿವರ, ಇತರ ವೈಯಕ್ತಿಕ ಹಾಗೂ ಹಣಕಾಸಿನ ಮಾಹಿತಿಯನ್ನು ಕದಿಯುತ್ತದೆ.
ಕಂಡುಹಿಡಿಯುವುದು ಹೇಗೆ?: ನಿಜವಾದ ಕ್ಯಾಪ್ಚಾ ಮತ್ತು ಫೇಕ್ ಕ್ಯಾಪ್ಚಾದ ವ್ಯತ್ಯಾಸ ಗುರುತಿಸುವುದು ಹೇಗೆ ಎಂಬ ಬಗ್ಗೆ ಸೈಬರ್ ತಜ್ಞರು ಕೆಲವು ಸಲಹೆ ನೀಡಿದ್ದಾರೆ. ನಿಜವಾದ ಕ್ಯಾಪ್ಚಾ ಕೇವಲ ವಿಶ್ವಾಸಾರ್ಹ, ನಿಮಗೆ ಗೊತ್ತಿರುವ ವೆಬ್ಸೈಟ್ಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತದೆ. ಚಿತ್ರಗಳನ್ನು ಆಯ್ಕೆ ಮಾಡುವುದು, ಪಠ್ಯ ಟೈಪ್ ಮಾಡುವುದು, ಬಾಕ್ಸ್ ಟಿಕ್ ಮಾಡುವುದು ಮುಂತಾದ ಸರಳ ಕೆಲಸಗಳನ್ನು ಒಳಗೊಂಡಿರುತ್ತದೆ. ಕ್ಯಾಪ್ಚಾ ಫೇಕ್ ಆಗಿದ್ದರೆ ಫೈಲ್ ಡೌನ್ಲೋಡ್ ಮಾಡಲು, ಸೂಚನೆಗಳಿಗೆ ಅನುಮತಿ ನೀಡಲು, ಓಕೆ ಬಟನ್ ಕ್ಲಿಕ್ ಮಾಡಲು, ಕಂಪ್ಯೂಟರ್ಗೆ ಕಮಾಂಡ್ಗಳನ್ನು ಪೇಸ್ಟ್ ಮಾಡಲು ಕೇಳುತ್ತದೆ. ಇವು ಸಾಮಾನ್ಯವಾಗಿ ಕಾಗುಣಿತ ತಪ್ಪುಗಳಿರುವ ಅಥವಾ ವಿಚಿತ್ರ ಡೊಮೇನ್ ಹೆಸರುಗಳಿರುವ ವೆಬ್ಸೈಟ್ಗಳಲ್ಲಿ ಕಾಣಿಸಿಕೊಳ್ಳುತ್ತವೆ. ನಿಜವಾದ ಕ್ಯಾಪ್ಚಾ ಯಾವತ್ತೂ ಏನನ್ನೂ ಇನ್ಸ್ಟಾಲ್ ಮಾಡಲು, ಡೌನ್ಲೋಡ್ ಮಾಡಲು ಅಥವಾ ಸಿಸ್ಟೆಮ್ ಏನನ್ನೋ ಪೇಸ್ಟ್ ಮಾಡಲು ಸೂಚಿಸುವುದಿಲ್ಲ. ಆದ್ದರಿಂದ ಮುಂದಿನ ಬಾರಿ ‘ನಾನು ರೋಬಾಟ್ ಅಲ್ಲ’ ಎಂಬ ಬಾಕ್ಸ್ ಕಂಡಾಗ, ಅದನ್ನು ಎಚ್ಚರಿಕೆಯಿಂದ ಪರಿಶೀಲಿಸಿ ಎನ್ನುತ್ತಾರೆ ತಜ್ಞರು.