

ಬೆಂಗಳೂರು: ಸಿದ್ದರಾಮಯ್ಯ ಯಾವುದೇ ಕಾರಣಕ್ಕೂ ಅಧಿಕಾರ ಹಸ್ತಾಂತರ ಮಾಡುವುದಿಲ್ಲ, ನವೆಂಬರ್ ಕ್ರಾಂತಿ ತಪ್ಪಲ್ಲ. ಒಟ್ಟಾರೆ ಕಾಂಗ್ರೆಸ್ ಸರ್ಕಾರ ಅಸ್ಥಿರವಾಗಿದೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಅಭಿಪ್ರಾಯ ವ್ಯಕ್ತಪಡಿಸಿದರು.
ರಾಜ್ಯ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಂಗಳವಾರ ಮಾತನಾಡಿದ ಅವರು, ಅಧಿಕಾರ ಬಿಟ್ಟು ಸಿದ್ದರಾಮಯ್ಯ ಒಂದು ಕ್ಷಣವೂ ಇರಲಾರರು. ಡಿ.ಕೆ.ಶಿವಕುಮಾರ್ ಅಧಿಕಾರ ಬಿಟ್ಟುಕೊಡುವ ಸಂಕಟದಿಂದ ತೊಳಲಾಡುತ್ತಿದ್ದಾರೆ. ಐದು ವರ್ಷ ನಾನೇ ಸಿಎಂ ಎಂದವರು, ಹೈಕಮಾಂಡ್ ಕಡೆಗೆ ಬೊಟ್ಟು ತೋರಿಸಿರುವುದು ನಿಗೂಢವಾಗಿದೆ ಎಂದರು.
ಸಿದ್ದರಾಮಯ್ಯ ಮಾತುಗಳು, ಹೂಡಿರುವ ತಂತ್ರಗಾರಿಕೆಗೆ ಪ್ರತಿಯಾಗಿ ಡಿ.ಕೆ.ಶಿವಕುಮಾರ್ ಮೌನಾಸ, ಪ್ರತಿ ತಂತ್ರ ಹೆಣೆದಿದ್ದಾರೆ. ಆಡಳಿತ ಪಕ್ಷದ ಅಂತಃಕಲಹಕ್ಕೆ ಜನರು ರೋಸಿ ಹೋಗಿದ್ದು, ಅಭಿವೃದ್ಧಿಯಲ್ಲಿ ರಾಜ್ಯ ಹಿನ್ನಡೆ ಅನುಭವಿಸುತ್ತಿದೆ ಎಂದು ಟೀಕಿಸಿದರು.
ಸಿಎಂ ಸಿದ್ದರಾಮಯ್ಯ ಪುತ್ರ, ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಅವರು ರಾಷ್ಟ್ರೀಯ ಚುನಾವಣಾ ಆಯೋಗದ ಮುಖ್ಯ ಆಯುಕ್ತ ಜ್ಞಾನೇಶ ಕುಮಾರ್‌ರನ್ನು ಪುಢಾರಿ ಎಂದಿರುವುದು ಸರಿಯಲ್ಲವೆಂದು ಆಕ್ಷೇಪಿಸಿದರು.
ಅಧಿಕಾರದ ಮದ, ಪ್ರಚಾರಗಿಟ್ಟಿಸಿಕೊಳ್ಳುವ ಹವಣಿಕೆ ಎದ್ದುಕಾಣುತ್ತಿದೆ. ಮೊದಲಿಗೆ ವಿವಾದಾತ್ಮಕ ಹೇಳಿಕೆ ಕೊಡುವುದು, ಕೊನೆಗೆ ಹಾಗೆಯೇ ಹೇಳಿಲ್ಲ ಎನ್ನುವುದು ಯತೀಂದ್ರಗೆ ಚಾಳಿಯಾಗಿದ್ದು, ಸಂವಿಧಾನಾತ್ಮಕ ಸ್ವಾಯತ್ತ ಸಂಸ್ಥೆಯಾದ ಚುನಾವಣಾ ಆಯೋಗದ ಮುಖ್ಯ ಆಯುಕ್ತರ ಬಗ್ಗೆ ಲಘು ಹೇಳಿಕೆ ನೀಡಿದ್ದಕ್ಕಾಗಿ ಕ್ಷಮೆಯಾಚಿಸಬೇಕು ಎಂದು ಎಂ.ಪಿ.ರೇಣುಕಾಚಾರ್ಯ ಆಗ್ರಹಿಸಿದರು.