ದ. ಕೊರಿಯಾದಲ್ಲಿ ಕರೊನಾ ಹಾವಳಿ

South Korea
Published on

ಸಿಯೋಲ್: ದಕ್ಷಿಣ ಕೊರಿಯಾದಲ್ಲಿ ಸೋಮವಾರ 161 ಕರೊನಾ ಸೋಂಕು ಪ್ರಕರಣ ದೃಢಪಟ್ಟಿದ್ದು ದೇಶದಲ್ಲಿ ಸೋಂಕಿತರ ಸಂಖ್ಯೆ 763ಕ್ಕೆ ಏರಿದೆ. ಇಲ್ಲಿ ಇದುವರೆಗೆ ಆರು ಜನರು ಮೃತಪಟ್ಟಿದ್ದಾರೆ. ಹೀಗಾಗಿ, ಸೋಂಕಿತರ ಸಂಖ್ಯೆಯಲ್ಲಿ ದಕ್ಷಿಣ ಕೊರಿಯಾ ವಿಶ್ವದಲ್ಲಿ ಎರಡನೇ ಸ್ಥಾನದಲ್ಲಿದೆ. ದೇಶದಲ್ಲಿ ಸೋಂಕು ತೀವ್ರವಾಗಿ ಹಬ್ಬುತ್ತಿದ್ದು ಒಂದೇ ವಾರದಲ್ಲಿ 700ಕ್ಕೂ ಹೆಚ್ಚು ಪ್ರಕರಣಗಳು ದೃಢಪಟ್ಟಿವೆ. ಕರೊನಾ ಸೋಂಕು ಜಾಸ್ತಿ ಯಾಗಿರುವುದ ರಿಂದ ಶಾಲೆಗಳ ರಜೆ ಯನ್ನು ಒಂದು ವಾರ ವಿಸ್ತರಿಸಲಾಗಿದೆ.

ಸೋಂಕು ಹರಡುವಿಕೆ ಅಪಾಯದ ಮಟ್ಟ ಮುಟ್ಟಿದೆ ಎಂದು ಅಧ್ಯಕ್ಷ ಮೂನ್ ಜೇ ಘೋಷಿಸಿದ್ದಾರೆ. ಸೋಂಕು ಹರಡುವುದನ್ನು ತಡೆಯಲು ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲು ಇದರಿಂದ ನೆರವಾಗುತ್ತದೆ. ದೇಶದ ಆಗ್ನೇಯ ಭಾಗದ ಡೇಗು ನಗರದಲ್ಲೇ ಸೋಂಕಿನ ಹೆಚ್ಚಿನ ಪ್ರಕರಣಗಳು ವರದಿಯಾಗಿವೆ. ಅಲ್ಲಿ ತುರ್ತು ಪರಿಸ್ಥಿತಿ ಹೇರಲಾಗಿದ್ದರೂ ಜನರು ನಗರಕ್ಕೆ ಬರುವುದು ಹಾಗೂ ಹೋಗುವುದರ ಮೇಲೆ ನಿರ್ಬಂಧ ಹೇರಿಲ್ಲ.

ಇರಾನ್​ನಲ್ಲಿ 12 ಸಾವು

ಕರೊನಾ ವೈರಸ್ ಮಾರಿಗೆ ಇರಾನ್​ನಲ್ಲಿ ಸೋಮವಾರ ಇನ್ನೂ ನಾಲ್ವರು ಮೃತಪಟ್ಟಿದ್ದು, ಈವರೆಗೆ ಬಲಿಯಾದವರ ಸಂಖ್ಯೆ 12ಕ್ಕೇರಿದೆ. 47 ಜನರು ಸೋಂಕುಪೀಡಿತರಾಗಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಚೀನಾ ಸಂಸತ್ ಅಧಿವೇಶನ ಮುಂದಕ್ಕೆ

ದೇಶದಲ್ಲಿ ಮಾರಕ ಕರೊನಾ ವೈರಸ್​ನಿಂದ 2,500ಕ್ಕೂ ಹೆಚ್ಚು ಜನರು ಮೃತಪಟ್ಟು 75,000ಕ್ಕೂ ಹೆಚ್ಚು ಮಂದಿ ಪೀಡಿತರಾಗಿರುವುದರಿಂದ ಸಂಸತ್​ನ ವಾರ್ಷಿಕ ಅಧಿವೇಶನ ಮುಂದೂಡಲು ಚೀನಾ ಸೋಮವಾರ ನಿರ್ಧರಿಸಿದೆ. ರಾಷ್ಟ್ರೀಯ ಜನತಾ ಕಾಂಗ್ರೆಸ್​ನ (ಸಂಸತ್) ಸ್ಥಾಯಿ ಸಮಿತಿ ಈ ಬಗ್ಗೆ ನಿರ್ಣಯಿಸಿದೆ. ಸಂಸತ್ತಿನ 13ನೇ ವಾರ್ಷಿಕ ಅಧಿವೇಶನ ಮಾರ್ಚ್ 5ರಿಂದ ನಡೆಯಬೇಕಿತ್ತು.

ಭಾರತದಿಂದ ಸಾಮಗ್ರಿ ರಫ್ತು ನಿಷೇಧ

ಚೀನಾಕ್ಕೆ ನಿರ್ದಿಷ್ಟ ವೈದ್ಯಕೀಯ ಉಪಕರಣಗಳ ರಫ್ತಿನ ಮೇಲೆ ಭಾರತ ಕೆಲವು ನಿರ್ಬಂಧಗಳನ್ನು ವಿಧಿಸಿದೆ. ದೇಶದಲ್ಲಿ ಅವುಗಳ ಕೊರತೆ ಹಾಗೂ ಕರೊನಾ ವ್ಯಾಪಕತೆಯ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯೂಎಚ್​ಒ ) ಸಲಹೆ ಮೇರೆಗೆ ಮುನ್ನೆಚ್ಚರಿಕೆಯಾಗಿ ಈ ಕ್ರಮ ಕೈಗೊಳ್ಳಲಾಗಿದೆ. ರಫ್ತಿನ ಮೇಲೆ ನಿಯಂತ್ರಣ ವಿಧಿಸಿರುವುದನ್ನು ಚೀನಾ ಪ್ರಸ್ತಾಪಿಸಿರುವ ಹಿನ್ನೆಲೆಯಲ್ಲಿ ವಿದೇಶಾಂಗ ಖಾತೆ ವಕ್ತಾರ ರವೀಶ್ ಕುಮಾರ್ ಈ ಸ್ಪಷ್ಟನೆ ನೀಡಿದ್ದಾರೆ. ವೈರಸ್ ಹಾವಳಿಯ ಪರಿಸ್ಥಿತಿಯನ್ನು ಭಾರತ ವಸ್ತುನಿಷ್ಠವಾಗಿ ಪರಿಶೀಲಿಸಿ ಚೀನಾಕ್ಕೆ ಅಗತ್ಯವಾದ ವೈದ್ಯಕೀಯ ಉಪಕರಣಗಳನ್ನು ಒದಗಿಸಲು ಸೂಕ್ತ ಕ್ರಮಕೈಗೊಳ್ಳುವ ಆಶಯವಿದೆ ಎಂದು ಚೀನಾ ರಾಯಭಾರ ಕಚೇರಿಯ ವಕ್ತಾರೆ ಜೀ ರಾಂಗ್ ಈ ಮುನ್ನ ಹೇಳಿದ್ದಾರೆ. ಚೀನಾದ ಮೇಲೆ ಯಾವುದೇ ಪ್ರಯಾಣ ಅಥವಾ ವಾಣಿಜ್ಯ ನಿರ್ಬಂಧ ವಿಧಿಸುವುದನ್ನು ಡಬ್ಲ್ಯೂಎಚ್​ಒ ವಿರೋಧಿಸಿದೆ. ಅದನ್ನು ಎಲ್ಲ ದೇಶಗಳು ಪಾಲಿಸಬೇಕು ಎಂದೂ ರಾಂಗ್ ಹೇಳಿದ್ದರು. ಆದರೆ, ಡಬ್ಲ್ಯೂಎಚ್​ಒ ಸೂಚನೆ ಮೇರೆಗೆ ನಿರ್ಬಂಧ ವಿಧಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net