ಟ್ಯಾಕ್ಸಿ ಸಹಾಯಧನ ಹಿಂದಿರುಗಿಸಲು ಸೂಚನೆ

WhatsApp Image 2024-07-18 at 9.21.28 PM
Published on

ಕೋಲಾರ: ಜಿಲ್ಲಾ ಪ್ರವಾಸೋದ್ಯಮ ಇಲಾಖೆಯಿಂದ ಟ್ಯಾಕ್ಸಿ ಖರೀದಿಗೆ ಅನರ್ಹರು ಸಹಾಯಧನ ಪಡೆದುಕೊಂಡಿರುವುದು ಸಾಬೀತಾಗಿದ್ದು, ಆಯ್ಕೆಯಾದ ನಾಲ್ವರನ್ನು ರದ್ದುಗೊಳಿಸಿ, ಸಹಾಯಧವನ್ನು ಹಿಂದಿರುಗಿಸುವಂತೆ ಜಿಲ್ಲಾಧಿಕಾರಿ ಅಕ್ರಂಪಾಷಾ ಆದೇಶಿಸಿದ್ದಾರೆ.

ಇಲಾಖೆಯಿಂದ ಟ್ಯಾಕ್ಸಿ ಹಂಚಿಕೆಯಲ್ಲಿ ಅಕ್ರಮ ನಡೆದಿರುವ ಕುರಿತು ಸೌಲಭ್ಯ ವಂಚಿತ ಅರ್ಜಿದಾರರ ಚರ್ಚೆಗೆ ಗ್ರಾಸವಾಗಿತ್ತು, ಈ ಬಗ್ಗೆ ವಿಜಯವಾಣಿಯಲ್ಲಿ ಜು.3ರಂದು `ಟ್ಯಾಕ್ಸಿ ಹಂಚಿಕೆಯಲ್ಲಿ ಅಕ್ರಮ?' ಶೀರ್ಷಿಕೆಯಡಿ ವರದಿ ಪ್ರಕಟಿಸಲಾಗಿತ್ತು.
ಆಗಿದ್ದೇನು?
ನಿರುದ್ಯೋಗಿಗಳು ಟ್ಯಾಕ್ಸಿ ಖರೀದಿ ಮಾಡಲು ಸಹಾಯಧನ ವಿತರಿಸಿಲು ಇಲಾಖೆಯಿಂದ ಅರ್ಜಿ ಆಹ್ವಾನಿಸಲಾಗಿತ್ತು. ಸಲ್ಲಿಕೆಯಾಗಿದ್ದ ಅರ್ಜಿಗಳನ್ನು ಪರಿಶೀಲಿಸಿ ಎಸಿ ಅಧ್ಯಕ್ಷತೆಯಲ್ಲಿ ತಹಸೀಲ್ದಾರ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ, ಗಿರಿಜನ ಅಭಿವೃದ್ಧಿ ಅಧಿಕಾರಿ, ಅಂಬೇಡ್ಕರ್ ಅಭಿವೃದ್ಧಿ ನಿಗಮ ಅಧಿಕಾರಿ, ಲೀಡ್ ಬ್ಯಾಂಕ್ ವ್ಯವಸ್ಥಾಪಕರನ್ನು ಒಳಗೊಂಡ ಸಮಿತಿ ಮೂಲಕ ಅರ್ಹತಾ ಪಟ್ಟಿ ಪ್ರಕಟ ಮಾಡಲಾಗಿತ್ತು. ಈಗಾಗಲೇ ಸರ್ಕಾರಿ ಸೌಲಭ್ಯ ಪಡೆದುಕೊಳ್ಳುತ್ತಿರುವವರ ಹೆಸರನ್ನು ಶಿಫಾರಸ್ಸು ಮಾಡಿತ್ತು, ಇದಕ್ಕೆ ಜಿಲ್ಲಾಧಿಕಾರಿ ಸಹ ಅನುಮೋದನೆ ನೀಡಿದ್ದು, ಅನರ್ಹರಿಗೆ ಸೌಲಭ್ಯ ಒದಗಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿತ್ತು.
ಅರ್ಜಿದಾರರಿಂದ ದೂರು ಹಾಗೂ ಸುದ್ದಿ ಪ್ರಕಟಗೊಳ್ಳುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಜಿಲ್ಲಾಧಿಕಾರಿ ಅಕ್ರಂಪಾಷಾ ಅವರು, 2017-18 ಹಾಗೂ 2019-20೦ನೇ ಸಾಲಿನಲ್ಲಿ ಬಾಕಿ ಇರುವ ಪ್ರವಾಸಿ ಟ್ಯಾಕ್ಸಿ ಫಲಾನುಭವಿಗಳನ್ನು ರದ್ದುಪಡಿಸಿ, ಟ್ಯಾಕ್ಸಿ ಯೋಜನೆಯ ಸಹಾಯಧನ ಹಿಂಪಡೆಯುವಂತೆ ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕರಿಗೆ ಸೂಚಿಸಿದ್ದಾರೆ.
2024ರ ಫೆ. 29ರಂದು ಫಲಾನುಭವಿಗಳನ್ನು ಆಯ್ಕೆ ಮಾಡಿ, 2024ರ ಮಾ.23ರಂದು 3 ಲಕ್ಷ ರೂ. ಸಹಾಯಧನ ಬಿಡುಗಡೆ ಮಾಡಲಾಗಿತ್ತು. ಇದಕ್ಕೆ ವಿವಾದಗಳು ಬಂದಿರುವ ಹಿನ್ನೆಲೆಯಲ್ಲಿ ಆಯ್ಕೆ ರದ್ದುಪಡಿಸಲಾಗಿದೆ. ಸಹಾಯಧನದ ಮೊತ್ತವನ್ನು 15 ದಿನಗಳೊಳಗೆ ಇಲಾಖೆಯ ಬ್ಯಾಂಕ್ ಖಾತೆಗೆ ಜಮಾ ಮಾಡಲು ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕಿ ಮಂಗಳಗೌರಿ ನಾಲ್ವರಿಗೆ ಜ್ಞಾಪನಾ ಪತ್ರ ನೀಡಿದ್ದಾರೆ.

  • ಲೋಕಾಯುಕ್ತ ಪೊಲೀಸರಿಗೂ ದೂರು
    ಪ್ರವಾಸೋದ್ಯಮ ಇಲಾಖೆಯಡಿಯಲ್ಲಿ ವಿವಿಧ ಯೋಜನೆಗಳನ್ನು ಜಾರಿಗೊಳಿಸುವಲ್ಲಿ ಅಕ್ರಮ ನಡೆದಿದ್ದು, ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುವಂತೆ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಕೆ.ಎಂ.ರಾಘವೇಂದ್ರ ಲೋಕಾಯುಕ್ತ ಪೊಲಿಸರಿಗೆ ದೂರು ನೀಡಿದ್ದಾರೆ.
    ಎಸ್‌ಎಸ್‌ಪಿ ಮತ್ತು ಟಿಎಸ್ಪಿ ಯೋಜನೆಯಡಿ ಪ.ಜಾತಿ, ಪಂಗಡ ಹಾಗೂ ಹಿಂದುಳಿದ ವರ್ಗಗಳ ನಿರುದ್ಯೋಗಿಗಳಿಗೆ ಟ್ಯಾಕ್ಸಿ ಖರೀದಿ ಮಾಡಲು ಸಹಾಯಧನ ಹಂಚಿಕೆಯಲ್ಲಿ ಅವ್ಯವಹಾರ ನಡೆದಿದ್ದು, ಸೌಲಭ್ಯ ಪಡೆದುಕೊಂಡಿರುವ ಅನರ್ಹ ಫಲಾನುವಿಗಳಿಂದ ಹಣ ವಾಪಸ್ ಪಡೆದು, ಕೆಲಸದಿಂದ ಅಮಾನತು ಮಾಡಲು ದೂರಿನಲ್ಲಿ ಕೋರಿದ್ದಾರೆ.
    ಜಿಲ್ಲೆಯ ಮುಳಬಾಗಿಲು ತಾಲೂಕಿನ ಅವಣಿ ಬೆಟ್ಟ ಪ್ರದೇಶವನ್ನು ಪ್ರವಾಸಿ ಸ್ಥಳವನ್ನಾಗಿ ಅಭಿವೃದ್ಧಿಪಡಿಸಲು ಎಎನ್‌ಟಿಎಸ್ ಇಂಜನಿರ‍್ರ್ಸ್ ಸರ್ವೀಸ್ ಕಂಪನಿಗೆ 5,77,542 ರೂ. ಪಾವತಿ ಮಾಡಲಾಗಿದೆ. ಪಾವತಿ ಮಾಡಿರುವ ಮೊತ್ತಕ್ಕೆ ತಕ್ಕಂತೆ ಅಭಿವೃದ್ಧಿಯಾಗಿಲ್ಲ. ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಽಕಾರಿ ತಮಗೆ ಬೇಕಾದ ಗುತ್ತಿಗೆದಾರಿಗೆ ಟೆಂಡರ್ ನೀಡಿ ಹಣ ಮಂಜೂರು ಮಾಡಿ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ದೂರಿನಲ್ಲಿ ವಿವರಿಸಿದ್ದಾರೆ. ಇಲಾಖೆಯ ಠೇವಣಿ ಖಾತೆಗಳಲ್ಲಿ 2023 ನವೆಂಬರ್‌ನಿಂದ ವಿವಿಧ ಖಾತೆಗಳಿಗೆ ಅಕ್ರಮವಾಗಿ ಸುಮಾರು ಲಕ್ಷಾಂತರ ರೂ. ವರ್ಗಾವಣೆ ಆಗಿರುವ ಶಂಕೆಯಿದ್ದು ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಕೋರಿದ್ದಾರೆ.

ಕೋಟ್…
ಅರ್ಹ ಫಲಾನುಭವಿಗಳನ್ನು ಗುರುತಿಸಿ ಸೌಲಭ್ಯ ನೀಡಿದ್ದರೆ ಅವರ ಬದುಕು ಹಸನಾಗುತ್ತಿತ್ತು. ಆದರೆ ಇಲಾಖೆಯ ಅಧಿಕಾರಿಗಳ ಎಡವಟ್ಟಿನಿಂದ ಅರ್ಹರು ಸೌಲಭ್ಯದಿಂದ ವಂಚನೆಗೆ ಒಳಗಾಗಿದ್ದಾರೆ. ಇದರ ವಿರುದ್ಧ ಅಽಕಾರಿಗಳು ಸೂಕ್ತ ಕ್ರಮಕೈಗೊಳ್ಳಬೇಕು.
| ಮೇಡಿಹಾಳ ರಾಘವೇಂದ್ರ, ಕರವೇ, ಜಿಲ್ಲಾಧ್ಯಕ್ಷ, ಕೋಲಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net