

ಬೆಂಗಳೂರು: ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದಲ್ಲಿ 900 ಕೋಟಿ ರೂ., ಭೋವಿ ಅಭಿವೃದ್ಧಿ ನಿಗಮದಲ್ಲಿ 107 ಕೋಟಿ ರೂ. ಸೇರಿ ವಿವಿಧ ಅಭಿವೃದ್ಧಿ ನಿಗಮಗಳಲ್ಲಿ ಬಹು ಕೋಟಿ ರೂ. ಖರ್ಚಾಗದೆ ಉಳಿದಿದೆ. ಅರ್ಹ ಲಾನುಭವಿಗಳಿಗೆ ನೀಡಬೇಕಾದ ಹಣವನ್ನು ಕೂಡಿಟ್ಟುಕೊಂಡಿದ್ದರ ಔಚಿತ್ಯವೇನು ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗರಂ ಆಗಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸಮಾಜ ಇಲಾಖೆ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು,
ನಿಗಮದಲ್ಲಿ ಹಣವಿದ್ದರೂ ಖರ್ಚು ಮಾಡದ ವ್ಯವಸ್ಥಾಪಕ ನಿರ್ದೇಶಕರಿಗೆ ನೋಟಿಸ್ ನೀಡಬೇಕು. ಉತ್ತರ ಸಮರ್ಪವಾಗಿಲ್ಲದಿದ್ದರೆ ಸೇವೆಯಿಂದ ಅಮಾನತು ಮಾಡಿ ಎಂದು ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್‌ಗೆ ಸೂಚಿಸಿದರು.
ಪ್ರಸಕ್ತ ಹಣಕಾಸು ವರ್ಷದ ಬಜೆಟ್‌ನಲ್ಲಿ ಇಲಾಖೆಗೆ 5,377 ಕೋಟಿ ರೂ. ಅನುದಾನ ಒದಗಿಸಲಾಗಿದೆ. ಈವರೆಗೆ 3,681 ಕೋಟಿ ರೂ. ಬಿಡುಗಡೆ ಮಾಡಿದ್ದರಲ್ಲಿ 2,892 ಕೋಟಿ ರೂ. ವೆಚ್ಚವಾಗಿದೆ. ಮಾರ್ಚ್ ಅಂತ್ಯದವರೆಗೆ ಕಾಯದೆ ಒದಗಿಸಿದ ಅನುದಾನ ಸಮರ್ಪಕವಾಗಿ ವೆಚ್ಚ ಮಾಡಲು ಕ್ರಮವಹಿಸಬೇಕು ಎಂದು ತಿಳಿಸಿದರು.
ವಿವಿಧ ಅಭಿವೃದ್ಧಿ ನಿಗಮಗಳಡಿ ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆಬಾವಿಗಳ ಕೊರೆಯುವ ಸಂಖ್ಯೆ ಹೆಚ್ಚಿಸಲು ಕ್ರಮವಹಿಸಬೇಕು. ವಿವಿಧ ಯೋಜನೆಗಳಡಿ ಲಾನುಭವಿಗಳ ಸಂಖ್ಯೆಯನ್ನು ಹೆಚ್ಚಿಸಿ ಆರ್ಥಿಕ, ಭೌತಿಕ ಪ್ರಗತಿ ಸಾಧಿಸಬೇಕು ಎಂದು ತಿಳಿ ಹೇಳಿದರು.
ನಿರ್ಲಕ್ಷಿತ ಸಮುದಾಯಗಳ ಮಕ್ಕಳಲ್ಲಿ ಕೀಳರಿಮೆ ತೊಡೆದು ಹಾಕಲು, ಸ್ವಾಭಿಮಾನ ಬೆಳೆಸಲು ಉತ್ತಮಗುಣಮಟ್ಟದ ಶಿಕ್ಷಣ ಮುಖ್ಯವಾಗಿದೆ. ತಾಲೂಕುಮಟ್ಟದಲ್ಲಿ ಕನಿಷ್ಠ ಒಂದು ಪಿಯು ವಸತಿ ಶಾಲೆ ಆರಂಭಿಸಬೇಕು. ರಾಜ್ಯದಲ್ಲಿ 70 ಪಿಯು ವಸತಿ ಶಾಲೆಗಳಿವೆ. ಗುಣಮಟ್ಟದ ಶಿಕ್ಷಣದ ಜತೆಗೆ ವಸತಿ ಶಾಲೆ ವಿದ್ಯಾರ್ಥಿಗಳ ಕೌಶಲ್ಯಾಭಿವೃದ್ಧಿಗೆ ಆದ್ಯತೆ ನೀಡಬೇಕು ಎಂದರು.
ಆರ್ಥಿಕ ಪ್ರಗತಿ ತೋರಿಸಲು ಮಾರ್ಚ್‌ಗೆ ಖರ್ಚು ಮಾಡುವ ಕೆಟ್ಟ ಅಭ್ಯಾಸವನ್ನು ಬೆಳೆಸಿಕೊಂಡಿದ್ದೀರಿ ಎಂದು ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು. ಹಣ ಕೈಯ್ಯಲ್ಲಿದ್ದರೂ ವಿದ್ಯಾರ್ಥಿಗಳಿಗೆ ಶಿಷ್ಯ ವೇತನ ವಿಳಂಬ ಮಾಡಿರುವುದು ಸರಿಯಲ್ಲವೆಂದು ಸಿಡಿಮಿಡಿಗೊಂಡರು.
ಪ್ರತಿ ವರ್ಷ ಸೆಪ್ಟೆಂಬರ್ ಒಳಗೆ ಮೆಟ್ರಿಕ್ ಪೂರ್ವ, ನವೆಂಬರ್ ಅಂತ್ಯದೊಳಗೆ ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನ ಪಾವತಿಸಲೇಬೇಕು. ಆಧಾರ್ ಜೋಡಣೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿ ಆಧಾರ್ ಸಂಖ್ಯೆ ಜೋಡಿಸಲು ಕ್ರಮವಹಿಸಬೇಕು ಎಂದರು.
ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನಕ್ಕೆ ರೂ.164 ಕೋಟಿ ಬಿಡುಗಡೆ ಮಾಡಿದ್ದರಲ್ಲಿ 105 ಕೋಟಿ ರೂ., ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನಕ್ಕೆ ಬಿಡುಗಡೆಯಾದ 230 ಕೋಟಿ ರೂ. ಪೂರ್ತಿ ವೆಚ್ಚವಾಗಿದೆ ಎಂದು ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.
ಮಕ್ಕಳ ಆರೋಗ್ಯ ತಪಾಸಣೆ
ಎ್ಲ ವಸತಿ ಶಾಲೆಗಳಲ್ಲಿ ಊಟದ ಗುಣಮಟ್ಟವನ್ನು ಕಾಯ್ದುಕೊಳ್ಳಬೇಕು. ಹಾಸಿಗೆ ಸೇರಿ ಮೂಲ ಸೌಕರ್ಯಗಳನ್ನು ಒದಗಿಸಬೇಕು. ಮಕ್ಕಳ ಆರೋಗ್ಯ, ಪೌಷ್ಟಿಕಾಂಶಗಳ ತಪಾಸಣೆ ನಿಯಮಿತವಾಗಿ ನಡೆಸಬೇಕು ಎಂದು ಸಿಎಂ ಸಿದ್ದರಾಮಯ್ಯ ಸೂಚಿಸಿದರು.
ರಾಜ್ಯದ 1,937 ಹಾಸ್ಟೆಲ್‌ಗಳ ಪೈಕಿ 270 ಬಾಡಿಗೆ ಕಟ್ಟಡಗಳಲ್ಲಿವೆ. 130 ಕಟ್ಟಡಗಳು ನಿರ್ಮಾಣ ಹಂತದಲ್ಲಿದ್ದು, 63 ಕಡೆ ನಿವೇಶನಗಳು ಲಭ್ಯವಿರುವ ಕಾರಣ ಸ್ವಂತ ಕಟ್ಡಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ವಸತಿ ನಿರ್ಮಾಣಕ್ಕೆ ಲಭ್ಯವಿರುವ ಅನುದಾನದಲ್ಲಿ ಈಗಾಗಲೇ ನಿರ್ಮಾಣ ಕಾರ್ಯ ಆರಂಭಿಸಿರುವ ಮನೆಗಳನ್ನು ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕು. ಇದಕ್ಕಾಗಿ ಮನೆ ನಿರ್ಮಾಣದ ಯೂನಿಟ್ ವೆಚ್ಚವನ್ನು ಪರಿಷ್ಕರಿಸುವ ಕುರಿತು ಪರಿಶೀಲಿಸಲಾಗುವುದು ಎಂದರು.
ಕಳೆದ ಆಯವ್ಯದಲ್ಲಿ ಘೋಷಿಸಲಾಗಿರುವ ಬೆಂಗಳೂರಿನಲ್ಲಿ 500 ಮಂದಿ ಸಾಮರ್ಥ್ಯದ ನಿರಾಶ್ರಿತರ ಶಿಬಿರ ಆರಂಭಿಸಲು ತಕ್ಷಣ ಜಮೀನು ಗುರುತಿಸಿ, ಕಾರ್ಯಾರಂಭಿಸಬೇಕು ಎಂದು ಸಿಎಂ ಸಲಹೆ ನೀಡಿದರು.
ರಾಜ್ಯದಲ್ಲಿ 841 ವಸತಿ ಶಾಲೆಗಳಿವೆ. ಈ ಪೈಕಿ 640 ವಸತಿ ಶಾಲೆಗಳಿಗೆ ಸ್ವಂತ ಕಟ್ಟಡಗಳಿವೆ. ಇನ್ನೂ 90 ವಸತಿ ಶಾಲೆಗಳಿಗೆ ಕಟ್ಟಡ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಈ ವರ್ಷ ಹೊಸದಾಗಿ 20 ವಸತಿ ಶಾಲೆಗಳನ್ನು ಪ್ರಾರಂಭಿಸಲಾಗಿದೆ.
ಹೋಬಳಿಗೊಂದರಂತೆ ಎಲ್ಲ ಹೋಬಳಿಗಳಲ್ಲಿ ವಸತಿ ಶಾಲೆಗಳನ್ನು ಸ್ಥಾಪಿಸುವುದು ಸರ್ಕಾರದ ಗುರಿಯಾಗಿದೆ. ಇನ್ನೂ 92 ಹೋಬಳಿಗಳಲ್ಲಿ ವಸತಿ ಶಾಲೆಗಳನ್ನು ತೆರೆಯಬೇಕಾಗಿದ್ದು, ಮುಂದಿನ ಎರಡು ವರ್ಷಗಳಲ್ಲಿ ಪೂರ್ಣಗೊಳಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ತಾಕೀಉ ಮಾಡಿದರು.
ಹೊಸದಾಗಿ ಆರಂಭಿಸಿರುವ 20 ವಸತಿ ಶಾಲೆಗಳಲ್ಲಿ ಶಿಕ್ಷಕರು ಸೇರಿ ಅಗತ್ಯ ಸವಲತ್ತು ಒದಗಿಸಬೇಕು. ಮಂಜೂರಾದ ಹುದ್ದೆಗಳ ಭರ್ತಿ, ಶಿಕ್ಷಕರಿಗೆ ನಿರಂತರ ತರಬೇತಿ ನೀಡಬೇಕು. ಅತಿಥಿ ಶಿಕ್ಷಕರಿಗೆ ಗೌರವ ಧನ ಹೆಚ್ಚಿಸಲು ಕ್ರಮವಹಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಈ ಸಭೆಯಲ್ಲಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್, ಹಿರಿಯ ಅಧಿಕಾರಿಗಳಾದ ಕ್ಯಾಪ್ಟನ್ ಮಣಿವಣ್ಣನ್, ಎಲ್.ಕೆ.ಅತೀಕ್ ಇನ್ನಿತರ ಅಧಿಕಾರಿಗಳು ಇದ್ದರು.