ಮೈಕ್ರೋ ಫೈನಾನ್ಸ್ ಪ್ರತಿನಿಧಿಗಳ ಸಭೆ ನಡೆಸಲು ಡಿಸಿಗಳಿಗೆ ಸೂಚನೆ: ಸಚಿವ ಕೃಷ್ಣಬೈರೇಗೌಡ | RBI rules be followed

Krishnabairegowda
Published on

ಬೆಂಗಳೂರು: ಜಿಲ್ಲಾಮಟ್ಟದಲ್ಲಿ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಸಮಕ್ಷಮ ವಾರದೊಳಗೆ ಮೈಕ್ರೋ ಫೈನಾನ್ಸ್ ಕಂಪನಿ ಪ್ರತಿನಿಧಿಗಳ ಸಭೆ ಕರೆದು, ಸಿಎಂ ನೀಡಿದ ಸೂಚನೆಗಳನ್ನು ಪಾಲಿಸಲು ತಿಳಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಸಚಿವ ಕೃಷ್ಣಬೈರೇಗೌಡ ಹೇಳಿದರು.

ವಿಕಾಸಸೌಧದಲ್ಲಿ ಸೋಮವಾರ ಕರೆದ ಜಿಲ್ಲಾಧಿಕಾರಿಗಳ ಸಭೆಯ ಮಧ್ಯೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರಕ್ಕೆ ಕೇಂದ್ರ, ಆರ್‌ಬಿಐ ಅಧಿಕಾರವೇನೂ ನೀಡಿಲ್ಲ. ಆದರೆ ಸಾಲ ಪಡೆದವರ ಸಂಕಷ್ಟ, ಪರಿಸ್ಥಿತಿ ಗಂಭೀರತೆಗೆ ಸ್ಪಂದಿಸಿ ಮುನ್ನೆಚ್ಚರಿಕೆ ಕ್ರಮವಹಿಸಿದೆ ಎಂದರು.

ಮೈಕ್ರೋ ಫೈನಾನ್ಸ್ ಕಂಪನಿಗಳು ಅತಿಯಾದ ಲಾಭ, ಹೆಚ್ಚಿನ ಬಡ್ಡಿ ಆಸೆಗೆ ಯದ್ವಾ ತದ್ವಾ ಸಾಲ ನೀಡಿರುವುದು ಈ ಸಮಸ್ಯೆಯ ಮೂಲ. ಆರ್‌ಬಿಐ ನಿಯಮದ ಪ್ರಕಾರ ಒಬ್ಬ ವ್ಯಕ್ತಿಗೆ ಗರಿಷ್ಠ ಎರಡು ಲಕ್ಷ ರೂ.ಗಿಂತ ಹೆಚ್ಚಿಗೆ ಸಾಲ ನೀಡಲು ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದರು.

ಸಾಲ ವಸೂಲಿ, ಬಡ್ಡಿ ದರ ಹೀಗೆ ಪ್ರತಿಯೊಂದಕ್ಕೂ ಆರ್‌ಬಿಐ ನಿಯಮಗಳಿವೆ. ಮೈಕ್ರೋ ಫೈನಾನ್ಸ್ ಕಂಪನಿಗಳು ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಉಲ್ಲಂಸಿದರೆ ಕ್ರಿಮಿನಲ್ ದಾವೆ ಹೂಡಬೇಕಾಗುತ್ತದೆ ಎಂಬ ಎಚ್ಚರಿಕೆ ನೀಡಲು ಡಿಸಿಗಳಿಗೆ ಸೂಚಿಸಲಾಗಿದೆ ಎಂದು ಕೃಷ್ಣಬೈರೇಗೌಡ ತಿಳಿಸಿದರು.

ನಾಡ ಕಚೇರಿಗಳಿಗೆ ಹೈಟೆಕ್ ಸ್ಪರ್ಶ

ಎಲ್ಲ ನಾಡ ಕಚೇರಿಗಳಿಗೆ ಹೈಟೆಕ್ ಸ್ಪರ್ಶ ನೀಡಲು ನಿರ್ಧರಿಸಲಾಗಿದೆ. ಇದಕ್ಕಾಗಿ ನಾಡಕಚೇರಿ ಕಟ್ಟಡಗಳ ನಿರ್ಮಾಣ ವೆಚ್ಚವನ್ನು 18 ಲಕ್ಷ ರೂ.ಗಳಿಂದ 45 ಲಕ್ಷ ರೂ.ಗಳಿಗೆ ಪರಿಷ್ಕರಿಸಲಾಗಿದೆ.

ಆಧುನಿಕ ತಂತ್ರಜ್ಞಾನದ ಸೌಲಭ್ಯವನ್ನು ಕಲ್ಪಿಸಲಾಗುತ್ತದೆ. ಗ್ರಾಮ ಆಡಳಿತಾಧಿಕಾರಿಗಳು, ಕಂದಾಯ ನಿರೀಕ್ಷಕರು ತಮ್ಮ ಲ್ಯಾಪ್‌ಟಾಪ್ ಮೂಲಕ ತಹಸೀಲ್ದಾರ್ ಜತೆಗೆ ಕಡತ, ಪತ್ರ ವ್ಯವಹಾರ, ಒಪ್ಪಿಗೆ ಪಡೆಯಲು ಸಾಧ್ಯವಾಗಲಿದ್ದು, ಕೆಲಸದ ಸ್ಥಳದಿಂದ ಪದೇ ಪದೆ ತಹಸೀಲ್ ಕಚೇರಿಗೆ ಅಲೆಯುವುದು ತಪ್ಪಲಿದೆ ಎಂದು ಸಚಿವ ಕೃಷ್ಣಬೈರೇಗೌಡ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net