ತಾಲೂಕು ಯೋಜನಾ ಮತ್ತು ಅಭಿವೃದ್ಧಿ ಸಮಿತಿ ರಚಿಸಲು ಸೂಚನೆ

vidhanasoudha
Published on

ಬೆಂಗಳೂರು: ಪುರಸಭೆ, ನಗರಸಭೆ, ಪಟ್ಟಣ ಪಂಚಾಯಿತಿ ಯೋಜನೆಗಳನ್ನು ಕ್ರೋಢೀಕರಿಸಲು ಮತ್ತು ತಾಲೂಕಿನ ಅಭಿವೃದ್ಧಿಗಾಗಿ ತಾಲೂಕು ಯೋಜನಾ ಮತ್ತು ಅಭಿವೃದ್ಧಿ ಸಮಿತಿ ರಚಿಸಲು ಸರ್ಕಾರ ಸೂಚನೆ ನೀಡಿದೆ.

15 ದಿನಗಳ ಒಳಗಾಗಿ ಸಮಿತಿ ರಚಿಸಿ, ಕಾಲ ಕಾಲಕ್ಕೆ ಸಮಿತಿ ಸಭೆ ನಡೆಸಲು ಅಭಿವೃದ್ಧಿ ಆಯುಕ್ತರ ಜಿಲ್ಲಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳೀಗೆ ಸೂಚನೆ ನೀಡಿದ್ದಾರೆ. ತಾಲೂಕು ಯೋಜನೆಗಳನ್ನು ಜಿಲ್ಲಾ ಮಟ್ಟದಲ್ಲಿ ಕ್ರೋಢೀಕರಿಸಿ ಅವುಗಳ ಸಹಕಾರದಿಂದ ಜಿಲ್ಲಾ ಯೋಜನೆ ತಯಾರಿಸಲು ಸಾಧ್ಯವಾಗುತ್ತದೆ. ಆದ್ದರಿಂದ 15 ದಿನದ ಒಳಗಾಗಿ ಸಮಿತಿ ರಚಿಸಿ ವರದಿ ಸಲ್ಲಿಸುವಂತೆ ನಿರ್ದೇಶನ ನೀಡಲಾಗಿದೆ.

ಸಮಿತಿಯ ಅಧ್ಯಕ್ಷರು, ಪದಾಧಿಕಾರಿಗಳು

ತಾಲೂಕು ಯೋಜನೆ ಮತ್ತು ಅಭಿವೃದ್ಧಿ ಸಮಿತಿಯಲ್ಲಿ ತಾಲೂಕಿನ ದೊಡ್ಡ ಭಾಗ ಪ್ರತಿನಿಧಿಸುವ ಶಾಸಕರು ಅಧ್ಯಕ್ಷರಾಗಿರುತ್ತಾರೆ. ಸಂಬಂಧಪಟ್ಟ ತಾಲೂಕು ಪಂಚಾಯಿತಿ ಅಧ್ಯಕ್ಷರು ಕೋ-ಚೇರ್ಮನ್ ಗಳಾಗಿರುತ್ತಾರೆ. ತಾಲೂಕಿನ ಕೇಂದ್ರ ಸ್ಥಾನದಲ್ಲಿರುವ ದೊಡ್ಡ ನಗರ ಸ್ಥಳೀಯ ಸ್ವಯಂ ಆಡಳಿತದ ಅಧ್ಯಕ್ಷ ಕೋ ಚೇರ್ ಪರ್ಸನ್ ಆಗಿರುತಾರೆ. ತಾಲೂಕಿನ ಎಲ್ಲ ಗ್ರಾಮ ಪಂಚಾಯಿತಿಗಳ ಅಧ್ಯಕ್ಷರ ಪೈಕಿ ಲಾಟರಿ ಮೂಲಕ ಆಯ್ಕೆ ಮಾಡಲಾದ ಗ್ರಾಪಂ ಅಧ್ಯಕಷರು ವೈಸ್ ಚೇರ್ ಪರ್ಸನ್ ಆಗಿರುತ್ತಾರೆ. ಲೋಕಸಭೆ, ರಾಜ್ಯ ವಿಧಾನಸಭೆ ಸದಸ್ಯರು ತಾಲೂಕಿನ ಭಾಗ ಹಾಗೂ ಪೂರ್ಣ ತಾಲೂಕು ಪ್ರತಿನಿಧಿಸುವ ತಾಲೂಕಿನೊಳಗೆ ಮತದಾನ ಕ್ಷೇತ್ರ ಹೊಂದಿರುವ ತಾಊಕುಗಳಿಗೆ ಮತದಾರನೆಂದು ನೋಂದಾಯಿತವಾಗಿರುವ ರಾಜ್ಯಸಭೆ ಮತ್ತು ರಾಜ್ಯ ವಿಧಾನ ಪರಿಷತ್ ಸದಸ್ಯರು ಸದಸ್ಯರಾಗಿರುತ್ತಾರೆ. ತಾಲೂಕು ಪಂಚಾಯಿತಿ ಉಪಾಧ್ಯಕ್ಷರು ಹಾಗೂ ಸಾಮಾಜಿಕ ನ್ಯಾಯ ಸಮಿತಿ ಚೇರ್ಮನ್ ಸದಸ್ಯರಾಗಿರುತ್ತಾರೆ.

ಜನಸಂಪರ್ಕ ಸಭೆ ಮೂಲಕ ಆದ್ಯತಾ ಪಟ್ಟಿ

ಪ್ರತಿ ಗ್ರಾಮಗಳ ಅಭಿವೃದ್ಧಿಗಾಗಿ ಪ್ರತಿ ವಾರ್ಡ್‌ನಲ್ಲಿ ಸ್ಥಳೀಯ ಅವಶ್ಯಕತೆಗಳು ಹಾಗೂ ಅಭಿವೃದ್ಧಿ ಕಾಮಗಾರಿ ಗುರಿತಿಸಲು ಜನಸಂಪರ್ಕ ಸಭೆ ಮುಖಾಂತರ ಆದ್ಯತಾ ಪಟ್ಟಿ ಸಿದ್ಧಪಡಿಸಬೇಕು. ಇವುಗಳನ್ನು ವಾರ್ಡ್ ಸಭೆ, ಗ್ರಾಮ ಸಭೆಗಳಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಬೇಕು. ಈ ಪ್ರಕ್ರಿಯೆಯಲ್ಲಿ ನಮ್ಮ ಗ್ರಾಮ, ನಮ್ಮ ಯೋಜನೆ ಪ್ರಕ್ರಿಯೆಯನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ತಿಳಿಸಲಾಗಿದೆ.

ಸಂಪನ್ಮೂಲ ಆಧರಿಸಿ ಯೋಜನೆ

ಸ್ಥಳೀಯ ಸಂಪನ್ಮೂಲ ಗಮನದಲ್ಲಿಟ್ಟುಕೊಂಡು ಪ್ರತಿ ವರ್ಷ ಅಭಿವೃಧ್ಧಿ ಯೋಜನೆಯೊಂದನ್ನು ಸಿದ್ಧಪಡಿಸಬೇಕು. ಅವುಗಳನ್ನು ತಾಲೂಕು ಪಂಚಾಯಿತಿಗೆ ಕಳುಹಿಸಬೇಕು ಎಂದು ತಿಳಿಸಲಾಗಿದೆ.

ಪ್ರತಿ ತಾಲೂಕು ಪಂಚಾಯಿತಿಯು ಪ್ರತಿ ವರ್ಷವೂ ಗ್ರಾಮ ಪಂಚಾಯಿತಿಗಳ ಯೋಜನೆಗಳನ್ನು ಸ್ವೀಕರಿಸಿದ ನಂತರ ತಾಲೂಕಿನ ಎಲ್ಲ ಗ್ರಾಮ ಪಂಚಾಯಿತಿಗಳ ಯೋಜನೆಗಳನ್ನು ಮತ್ತು ತಾಲೂಕಿನ ವ್ಯಾಪತಿಯ ಇತರೆ ಇಲಾಖೆಗಳ ಜಿಲ್ಲಾ ವಲಯದ ಅನುದಾನವನ್ನು ಸೇರಿದಂತೆ ಯೋಜನೆಯನ್ನು ಸಿದ್ಧಪಡಿಸಿ ಕ್ರೋಢೀಕರಿಸಬೇಕು. ಈ ಯೋಜನೆಯನ್ನು ತಾಲೂಕು ಪಂಚಾಯಿತಿ ಸಭೆಯಲ್ಲಿ ಮಂಡಿಸಿ ತಾಲೂಕು ಪಂಚಾಯಿತಿ ಯೋಜನೆಗಳನ್ನು ಅಮತಿಮಗೊಳಿಸಿ ಜಿಲ್ಲಾ ಪಂಚಾಯಿತಿಗೆ ಕಳುಹಿಸಬೇಕು ಎಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ.

3 ತಿಂಗಳಿಗೊಮ್ಮೆ ಸಭೆ ಕಡ್ಡಾಯ

ತಾಲೂಕು ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಪ್ರತಿ ಮೂರು ತಿಂಗಳಿಗೊಮ್ಮೆ ಸಭೆ ಸೇರಬೇಕು. ವಿಷಯ ತಜ್ಞರು, ಸಂಶೋಧನಾ ಸಂಸ್ಥೆಗಳು ಹಾಗೂ ಶೈಕ್ಷಣಿಕ ಸಂಸ್ಥೆಗಳ ಪರಿಣಿತರ ಸೇವೆ ಪಡೆದುಕೊಳ್ಳಬಹುದು ಸೂಚನೆ ನೀಡಲಾಗಿದೆ.

ಜನರ ಸಹಭಾಗಿತ್ವಕ್ಕೆ ಹೆಚ್ಚು ಆದ್ಯತೆ

ಜನತೆಯ ಅವಶ್ಯಕತೆಗಳಿಗೆ ಮತ್ತು ಆಕಾಂಕ್ಷೆಗಳಿಗೆ ಹೆಚ್ಚು ಸ್ಪಂದನೆ, ಸ್ಥಳೀಯ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳುವುದು, ಸಂಪನ್ಮೂಲವನ್ನಾಧರಿಸಿ ಸ್ಥಳೀಯ ಅವಶ್ಯಕತೆ ಗುರುತಿಸುವಿಕೆ, ಸ್ಥಳೀಯ ಪ್ರಾಕೃತಿಕ ಹಾಗೂ ಮಾನವ ಸಂಪನ್ಮೂಲಗಳ ಪರಿಣಾಮಕಾರಿ ಬಳಕೆ, ಯೋಜನೆಗಳ ನಿರೂಪಣೆ, ಅನುಷ್ಠಾನ ಹಾಗೂ ಮೇಲ್ವಿಚಾರಣೆಯಲ್ಲಿ ಸ್ಥಳೀಯ ಜನತೆಯನ್ನು ತೊಡಗಿಸಿಕೊಳ್ಳಬೇಕು. ಸ್ಥಳೀಯ ಸ್ವಯಂ ಸೇವಾ ಸಂಸ್ಥೆಗಳು , ಸ್ವ ಸಹಾಯ ಸಂಘಗಳ ಭಾಗವಹಿಸುವಿಕೆ ಖಾತ್ರಿಪಡಿಸಿಕೊಳ್ಳಬೇಕು ಎಂದು ನಿರ್ದೇಶನ ನೀಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net