ಬಿಜೆಪಿ ಅಧ್ಯಕ್ಷರಿಗೆ ನೋಟಿಸ್

BJP ROUND
Published on

ಬೆಂಗಳೂರು: ಲೋಕಸಭಾ ಚುನಾವಣೆ ವೇಳೆ ಕಾಂಗ್ರೆಸ್ ವಿರುದ್ಧ ಸಮುದಾಯಾಧಾರಿತವಾಗಿ ಟೀಕೆ ಮಾಡಲು ಎಕ್ಸ್ ಖಾತೆಯಲ್ಲಿ ಮೊಟ್ಟೆ ವಿಡಿಯೋ ಅಪ್‌ಲೋಡ್ ಮಾಡಿದ್ದ ಪ್ರಕರಣ ಸಂಬಂಧ ಬಿಜೆಪಿಗೆ ಮುಖಂಡರಿಗೆ ಪೊಲೀಸ್ ನೋಟಿಸ್ ಜಾರಿ ಮಾಡಿದ್ದಾರೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಐಟಿ ಘಟಕ ಮುಖ್ಯಸ್ಥ ಅಮಿತ್ ಮಾಳವೀಯಾ ಮತ್ತು ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರಗೆ ಹೈಗ್ರೌಂಡ್ಸ್ ಪೊಲೀಸರು ನೋಟಿಸ್ ಜಾರಿ ಮಾಡಿದ್ದು, 7 ದಿನಗಳ ಒಳಗಾಗಿ ಉತ್ತರಿಸುವಂತೆ ಸೂಚಿಸಿದ್ದಾರೆ.

ಎಸ್‌ಸಿ, ಎಸ್‌ಟಿ ಮತ್ತು ಇತರ ಹಿಂದುಳಿದ ವರ್ಗಗಳನ್ನು(ಒಬಿಸಿ) ಮೀಸಲಾತಿಯ ಬುಟ್ಟಿಯಲ್ಲಿ ಇರುವ ಮೊಟ್ಟೆಗಳು ಎಂಬಂತೆ ಚಿತ್ರಿಸಲಾಗಿದೆ. ಮೀಸಲಾತಿ ಬುಟ್ಟಿಯಲ್ಲಿ ಅನಿಮೇಟೆಡ್ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಚಿತ್ರವೂ ಮುಸ್ಲಿಂ ಸಮುದಾಯದ ಮತ್ತೊಂದು ಮೊಟ್ಟೆಯನ್ನು ಇಡುವಂತೆ ತೋರಿಸಲಾಗಿದೆ. ಬಳಿಕ ಮೊಟ್ಟೆಯಿಂದ ಪಕ್ಷಿಗಳು ಜೀವ ತಳೆಯುತ್ತವೆ.

ರಾಹುಲ್ ಗಾಂಧಿ, ಸಿದ್ದರಾಮಯ್ಯ ಅವರನ್ನು ಹೋಲುವ ಪಾತ್ರಗಳು ಎಸ್‌ಸಿ, ಎಸ್‌ಟಿ ಮತ್ತು ಒಬಿಸಿಗಳಿಗಿಂತ ಮುಸ್ಲಿಂ ಸಮುದಾಯಕ್ಕೆ ಹೆಚ್ಚಿನ ಅನುದಾನ ನೀಡುತ್ತವೆ. ಬಲಿಷ್ಠವಾದ ಮುಸ್ಲಿಮರನ್ನು ಹೋಲುವ ಹಕ್ಕಿ ಎಸ್‌ಸಿ, ಎಸ್‌ಟಿ ಮತ್ತು ಒಬಿಸಿಗಳನ್ನು ಬುಟ್ಟಿಯಿಂದ ಹೊರದಬ್ಬುವುದು ವಿಡಿಯೊದಲ್ಲಿ ಕಂಡು ಬಂದಿತ್ತು. ಈ ಬಗ್ಗೆ ಕಾಂಗ್ರೆಸ್ ಮುಖಂಡ ರಮೇಶ್ ಬಾಬು, ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು. ತನಿಖೆ ಕೈಗೊಂಡಿರುವ ಪೊಲೀಸರು, ಬಿಜೆಪಿ ಮುಖಂಡರಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆಗೆ ಕರೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net