

ಶಿವಮೊಗ್ಗ: ಪ್ರಸಕ್ತ ಸಾಲಿನ ಮುಂಗಾರು ಆರಂಭಗೊಂಡಿದ್ದು, ಜಿಲ್ಲೆಯ ನಗರ ಮತ್ತು ಪಟ್ಟಣ ಪ್ರದೇಶಗಳ ವ್ಯಾಪ್ತಿಯಲ್ಲಿ ಮಳೆಯಿಂದ ಯಾವುದೇ ಅನಾಹುತಗಳು ಆಗದಂತೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಸೂಚಿಸಿದರು.
ಡಿಸಿ ಕಚೇರಿಯಲ್ಲಿ ಶುಕ್ರವಾರ ಜಿಲ್ಲಾ ವಿಪತ್ತು ನಿರ್ವಹಣಾ ಸಮಿತಿ ಸಭೆ ನಡೆಸಿದ ಅವರು, ಹೊಳೆ, ಹಳ್ಳ, ಜಲಪಾತ ಮುಂತಾದ ಪ್ರವಾಸಿ ತಾಣಗಳಿಗೆ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದೆ. ಅಪಘಾತಗಳು, ಜೀವಹಾನಿ ಆಗುವ ಸಾಧ್ಯತೆಗಳು ಇದೆ. ಆದ್ದರಿಂದ ಅಂತಹ ಸ್ಥಳಗಳನ್ನು ಗುರುತಿಸಿ, ನಿರ್ಬಂಧಿತ ಪ್ರದೇಶ, ಪ್ರವೇಶವಿಲ್ಲ, ನಿಯಮ ಉಲ್ಲಂಘಿಸಿದಲ್ಲಿ ದಂಡನೆಗೆ ಗುರಿಪಡಿಸಲಾಗುವುದು ಎಂದು ಸೂಚನಾ ಫಲಕಗಳನ್ನು ಅಳವಡಿಸುವಂತೆ ಪಿಡಿಒಗಳಿಗೆ ಹೇಳಿದರು.
ನಗರ ಮತ್ತು ಪಟ್ಟಣ ಪ್ರದೇಶಗಳ ಮುಖ್ಯರಸ್ತೆಗಳ ಇಕ್ಕೆಲಗಳಲ್ಲಿ ಹಾಗೂ ವಸತಿ ಪ್ರದೇಶಗಳಲ್ಲಿ ಬೆಳೆದು ನಿಂತ ದೈತ್ಯ ಮರಗಳ ರೆಂಬೆ-ಕೊಂಬೆಗಳು ರಸ್ತೆಗೆ ಚಾಚಿಕೊಂಡಿದ್ದು, ಮಳೆಯಿಂದ ಬಾಗಿ ಅಥವಾ ಬಿದ್ದು ವಾಹನ ಅಥವಾ ಜೀವಹಾನಿ ಆಗಬಹುದಾದ ಸಂಭವವಿರುವುದನ್ನು ಗುರುತಿಸಬೇಕು. ಅಲ್ಲದೆ ಶಿಥಿಲವಾಗಿರುವ, ಒಣಗಿರುವ ಹಾಗೂ ದುರ್ಬಲ ಮರಗಳ ತೆರವಿಗೆ ಸಂಬಂಧಿಸಿದ ಇಲಾಖಾ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳುವಂತೆ ಹಾಗೂ ಚಾಚಿಕೊಂಡಿರುವ ಮರಗಳ ರೆಂಬೆ-ಕೊಂಬೆಗಳನ್ನು ಕತ್ತರಿಸಲು ಕ್ರಮ ಕೈಗೊಳ್ಳುವಂತೆ ಮೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು.
ಶಾಲೆ, ಅಂಗನವಾಡಿಯ ಶಿಥಿಲ ಕಟ್ಟಡಗಳಿದ್ದಲ್ಲಿ ಅಂತಹ ಕೊಠಡಿಗಳನ್ನು ಕೂರಿಸಿ, ತರಗತಿಗಳನ್ನು ನಡೆಸದಂತೆ ಹಾಗೂ ಸ್ಥಳೀಯವಾಗಿ ಲಭ್ಯವಾಗುವ ಸಮುದಾಯ ಭವನಗಳಲ್ಲಿ ತರಗತಿಗಳನ್ನು ನಡೆಸಲು ತ್ವರಿತವಾಗಿ ಪರ್ಯಾಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದ ಅವರು, ಆಯಾ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ತಹಸೀಲ್ದಾರರು ಸಮನ್ವಯ ಸಾಧಿಸಿ, ಅಂತಹ ಕಟ್ಟಡಗಳಿದ್ದಲ್ಲಿ ವರದಿ ಪಡೆದು ಕ್ರಮ ಕೈಗೊಳ್ಳಬೇಕು ಎಂದರು.
ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿನ ರಾಜಕಾಲುವೆಗಳು, ಚರಂಡಿಗಳಲ್ಲಿ ತುಂಬಿರುವ ಕಸ-ಕಡ್ಡಿಗಳನ್ನು ಕೂಡಲೇ ಸ್ವಚ್ಛಗೊಳಿಸಬೇಕು. ಚರಂಡಿಯಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು ಎಂದರು.
ಜಿಪಂ ಸಿಇಒ ಎನ್.ಹೇಮಂತ್, ಅಪರ ಜಿಲ್ಲಾಧಿಕಾರಿ ಸಿದ್ದಲಿಂಗರೆಡ್ಡಿ, ಎಎಸ್ಪಿ ಅನಿಲ್‌ಕುಮಾರ್ ಭೂಮರಡ್ಡಿ, ಎಸಿ ಸತ್ಯನಾರಾಯಣ, ತಹಸೀಲ್ದಾರರು, ತಾಪಂ ಇಒಗಳು ಇದ್ದರು.