VIDEO| ಕರೊನಾ ಪಾಸಿಟಿವ್​ ಬೆನ್ನಲ್ಲೇ ಜನರನ್ನು ತರಾಟೆಗೆ ತೆಗೆದುಕೊಂಡ ನಟಿ ನವ್ಯಾ ಸ್ವಾಮಿ!

Navya
Published on

ಹೈದರಾಬಾದ್​: ಮೈಸೂರು ಮೂಲದ ತೆಲುಗು ಸೀರಿಯಲ್​ ನಟಿ ನವ್ಯಾ ಸ್ವಾಮಿಗೆ ಕರೊನಾ ಪಾಸಿಟಿವ್​ ಇರುವುದು ನಿನ್ನೆಯಷ್ಟೇ ವರದಿಯಾಗಿತ್ತು. ಅದರ ಬೆನ್ನಲ್ಲೇ ನವ್ಯಾ ಅವರು ಬುಧವಾರ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಸಂದೇಶವೊಂದನ್ನು ಹಂಚಿಕೊಳ್ಳುವ ಮೂಲಕ, ಸೋಂಕಿತರನ್ನು ಕಟುವಾಗಿ ನೋಡುವ ಜನರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಇತ್ತೀಚೆಗೆ ತಮ್ಮೊಂದಿಗೆ ಸಂಪರ್ಕದಲ್ಲಿದ್ದವರನ್ನು ಮುನ್ನೆಚ್ಛರಿಕೆ ವಹಿಸುವಂತೆ ನವ್ಯಾ ಮನವಿ ಮಾಡಿಕೊಂಡಿದ್ದಾರೆ. ಭಯ ಹಾಗೂ ನಾಚಿಕೆ ಪಡುವಂತದ್ದು ಏನಿಲ್ಲ. ಜನರು ಏನೆಲ್ಲ ಅಸಂಬದ್ಧ ಮಾತುಗಳನ್ನಾಡುತ್ತಾರೆ ಎಂಬುದು ನನಗೆ ತಿಳಿದಿದೆ. ಎಲ್ಲ ವದಂತಿಗಳಿಗೆ ನೀವು ಕಿವಿಗೊಡಬೇಡಿ. ನೆಗಿಟಿವಿಟಿಯಿಂದ ದೂರವಿರಿ ಎನ್ನುವ ಮೂಲಕ ಸೋಂಕಿತರನ್ನು ಬೇರೆ ದೃಷ್ಟಿಯಲ್ಲಿ ನೋಡುವ ಜನರಿಗೆ ಟಾಂಗ್​ ನೀಡಿದ್ದಾರೆ.

ಒಂದು ವೇಳೆ ಕರೊನಾ ಪಾಸಿಟಿವ್​ ಬಂದರೂ ಚಿಂತಿಸಬೇಕಿಲ್ಲ. ಧೈರ್ಯವಾಗಿರಿ, ಕರೊನಾವನ್ನು ಸುಲಭವಾಗಿ ತೆಗೆದುಕೊಳ್ಳಿ. ಏಕಾಂಗಿಯಾಗಿ ಉಳಿದುಕೊಳ್ಳುವ ಮೂಲಕ ನಿಮ್ಮಲ್ಲಿಯೇ ವೈರಸ್​ ಸಾಯುವವರೆಗೂ ಜನರಿಂದ ದೂರವಿರಿ. ವೈರಸ್​ ಬ್ರೇಕ್​ ಮಾಡಲು ಸಾಮಾಜಿಕ ಅಂತರವೊಂದರಿಂದಲೇ ಸಾಧ್ಯ ಎಂದಿದ್ದಾರೆ.

ನನ್ನ ವೈದ್ಯರೊಂದಿಗೆ ಸಮಾಲೋಚನೆ ನಡೆಸಿದ್ದೇನೆ. ತಕ್ಷಣವೇ ನಾನು ಎಲ್ಲರಿಂದ ದೂರ ಉಳಿದು ಪ್ರತ್ಯೇಕವಾಗಿದ್ದೇನೆ. ಸರಿಯಾದ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದೇನೆ. ಅಗತ್ಯವಾದ ಹಾಗೂ ಇಮ್ಯುನಿಟಿ ಹೆಚ್ಚಿಸುವ ಸತ್ವಭರಿತವಾದ ಆಹಾರವನ್ನು ಸೇವಿಸುತ್ತಿದ್ದೇನೆ. ದಯವಿಟ್ಟು ನನ್ನೊಂದಿಗೆ ಸಂಪರ್ಕದಲ್ಲಿದ್ದವರು ನಿಮ್ಮಷ್ಟಕ್ಕೆ ನೀವೇ ದೂರವಿರಿ ಎಂದು ನವ್ಯ ಮನವಿ ಮಾಡಿಕೊಂಡಿದ್ದಾರೆ.

ಮೂರು ತಿಂಗಳ ಬ್ರೇಕ್​ ನಂತರ ಇತ್ತೀಚೆಗಷ್ಟೇ ತೆಲಂಗಾಣ ಸರ್ಕಾರ, ಸಿನಿಮಾ ಮತ್ತು ಕಿರುತೆರೆ ಕಲಾವಿದರಿಗೆ ವಿನಾಯಿತಿ ನೀಡಿ, ಶೂಟಿಂಗ್​ಗೆ ಅನುಮತಿ ಕೊಟ್ಟಿತ್ತು. ಅದರಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ಶೂಟಿಂಗ್​ ಸಹ ಶುರು ಮಾಡಲಾಗಿತ್ತು. ಅದೆಲ್ಲದರ ನಡುವೆಯೂ ನವ್ಯಾಗೆ ಕರೊನಾ ಪಾಸಿಟಿವ್​ ಇರುವುದು ಖಚಿತವಾಗಿದೆ.

ನವ್ಯಾ ಅವರು "ನಾ ಪೇರು ಮೀನಾಕ್ಷಿ" ಮತ್ತು "ಆಮೆ ಕಥಾ" ಎಂಬ ಪ್ರಖ್ಯಾತ ಧಾರವಾಹಿಗಳಲ್ಲಿ ನಟಿಸುತ್ತಿದ್ದಾರೆ. ನಾ ಪೇರು ಮೀನಾಕ್ಷಿ ಧಾರಾವಾಹಿಯ ಚಿತ್ರೀಕರಣದ ವೇಳೆ ಕರೊನಾ ಸೋಂಕು ತಗುಲಿದೆ ಎಂದು ಹೇಳಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net