ಪ್ರಕಟವಾಗದ ಪಿಎಸ್​ಐ ಫಲಿತಾಂಶ! 4 ವರ್ಷ ಕಳೆದರೂ ಪೂರ್ಣವಾಗದ 545 ಎಸ್​ಐ ನೇಮಕಾತಿ

ವಿಜಯವಾಣಿ-6-1
Published on

ಬೆಂಗಳೂರು: ಪೊಲೀಸ್ ಇಲಾಖೆಗೆ ಸೇರಲು ಕನಸುಕಟ್ಟಿ 545 ಸಬ್​ಇನ್​ಸ್ಪೆಕ್ಟರ್ ಹುದ್ದೆಗಳ ನೇಮಕಾತಿಗೆ ಪರೀಕ್ಷೆ ಬರೆದಿರುವ ಸಾವಿರಾರು ಅಭ್ಯರ್ಥಿಗಳು ಫಲಿತಾಂಶಕ್ಕಾಗಿ ಜಪಿಸುತ್ತಿದ್ದಾರೆ. ಮತ್ತೊಂದೆಡೆ 402 ಎಸ್​ಐ ಹುದ್ದೆಗಳ ನೇಮಕಾತಿಗೆ ಲಿಖಿತ ಪರೀಕ್ಷೆ ಬರೆಯಲು ಸಿದ್ಧತೆ ನಡೆಸುತ್ತಿರುವ ಅಭ್ಯರ್ಥಿಗಳಲ್ಲೂ ಆತಂಕ ಮೂಡಿದೆ.

545 ಎಸ್​ಐ ನೇಮಕಾತಿ ಬಯಸಿರುವ ಕೆಲ ಅಭ್ಯರ್ಥಿಗಳು ಮದುವೆ, ಖಾಸಗಿ ನೌಕರಿ ಮುಂದೂಡಿ ಕಾಯುತ್ತಿದ್ದಾರೆ. ಪಾಲಕರು ಪುತ್ರ/ಪುತ್ರಿ ಖಾಕಿ ಧರಿಸುವುದನ್ನು ಕಣ್ಣಾರೆ ನೋಡಬೇಕೆಂಬ ಕನಸುಕಟ್ಟಿ ಕೊಂಡಿದ್ದಾರೆ. ಆದರೆ, ರಾಜ್ಯ ಸರ್ಕಾರ ನೇಮಕಾತಿಗೆ ಅರ್ಜಿ ಕರೆದು 3 ವರ್ಷ ತುಂಬಿದ್ದು, ಮರು ಪರೀಕ್ಷೆ ಮುಗಿದು ನಾಲ್ಕೈದು ತಿಂಗಳೇ ಕಳೆದಿದೆ. ಸರ್ಕಾರ ಕಲ್ಯಾಣ ಕರ್ನಾಟಕ ಮೀಸಲಾತಿ ಸ್ಪಷ್ಟತೆ ಕಂಡುಕೊಳ್ಳುವಲ್ಲಿ ವಿಫಲವಾಗಿ ತಾತ್ಕಾಲಿಕ ಆಯ್ಕೆಪಟ್ಟಿ ಪ್ರಕಟಿಸಲು ವಿಳಂಬ ಮಾಡುತ್ತಿದೆ.

ಎಸ್​ಐ ನೇಮಕಾತಿಗೆ 2020ರಲ್ಲಿ ಅರ್ಜಿ ಕರೆದು ಕೊನೆಗೆ ಹಗರಣದಲ್ಲಿ ಸಿಲುಕಿ ಹೈಕೋರ್ಟ್ ತೀರ್ಪಿನಂತೆ ಜನವರಿಯಲ್ಲಿ ಮರು ಪರೀಕ್ಷೆ ನಡೆಸಿದೆ. ಇನ್ನೇನು ತಾತ್ಕಾಲಿಕ ಆಯ್ಕೆಪಟ್ಟಿ ಪ್ರಕಟಿಸ ಬೇಕೆಂದುಕೋಳ್ಳುವಷ್ಟರಲ್ಲಿ ಕಲ್ಯಾಣ ಕರ್ನಾಟಕ ಮೀಸಲಾತಿ ಕುರಿತು 2023ರ ಫೆ.1ರಂದು ಹೊರಡಿಸಿರುವ ಸುತ್ತೋಲೆಯಿಂದ ಗೊಂದಲ ಉಂಟಾಗಿ ಆಯ್ಕೆ ಪಟ್ಟಿ ಪ್ರಕಟಿಸಲು ಗೃಹ ಇಲಾಖೆ ತಿಣುಕಾಡುತ್ತಿದೆ. 545 ಮತ್ತು 402 ಎಸ್​ಐ ನೇಮಕಾತಿಗೆ ಪ್ರತ್ಯೇಕ ಅಧಿಸೂಚನೆ ಹೊರಡಿಸಿದರೂ ಒಮ್ಮೆಯೇ ದೇಹದಾರ್ಢ್ಯ ಪರೀಕ್ಷೆ ನಡೆಸಿ ಅರ್ಹತ ಪ್ರಮಾಣಪತ್ರ ನೀಡಲಾಗಿದೆ. ಆದರಿಂದ 545 ಎಸ್​ಐ ನೇಮಕಾತಿ ಪೂರ್ಣವಾದ ಮೇಲೆಯೇ 402 ಪ್ರಕಟಿಸಬೇಕಾಗಿದೆ.

ಆದರಿಂದ 3-4 ವರ್ಷದಿಂದ ಎಸ್​ಐ ನೇಮಕಾತಿ ನಡೆಯದೆ ಸಹಾಯಕ ಸಬ್​ಇನ್​ಸ್ಪೆಕ್ಟರ್​ಗಳಿಗೆ ತಾತ್ಕಾಲಿಕವಾಗಿ ಪಿಎಸ್​ಐಗೆ ಬಡ್ತಿ ಕೊಡಲಾಯಿತು. ಆದರೂ ನಿವೃತ್ತಿ ಹಂಚಿನಲ್ಲಿದ್ದ ಕಾರಣ ಪ್ರತಿ ತಿಂಗಳು ನಿವೃತ್ತಿ ಪಡೆಯುತ್ತಿದ್ದು, ಪೊಲೀಸ್ ಇಲಾಖೆಗೆ ಪಿಎಸ್​ಐ ಕೊರತೆ ದೊಡ್ಡ ತಲೆನೋವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net