ನೀಟ್​ ಪರೀಕ್ಷಾರ್ಥಿಗಳ ಸಾವು; ಅದು ಕೇಂದ್ರ ಸರ್ಕಾರ ಮಾಡಿದ ಕೊಲೆ ಎಂದ ಸಚಿವ

udayanidhi stalin
Published on

ಚೆನೈ: ವೈದ್ಯಕೀಯ ಕೋರ್ಸ್​ ಪ್ರವೇಶಕ್ಕಾಗಿ ನಡೆಸುವ ನೀಟ್​ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ವಿಫಲರಾದ ವಿದ್ಯಾರ್ಥಿಗಳ ಸಾವಿಗೆ ಕೇಂದ್ರ ಸರ್ಕಾರವೇ ಹೊಣೆ ಎಂದು ತಮಿಳುನಾಡು ಯುವ ಹಾಗೂ ಕ್ರೀಡಾ ಸಚಿವ ಉದಯ್​ನಿಧಿ ಸ್ಟಾಲಿನ್​​ ವಾಗ್ದಾಳಿ ನಡೆಸಿದ್ದಾರೆ.

ತಮಿಳುನಾಡಿನ ರಾಜಧಾನಿ ಚೆನ್ನೈನಲ್ಲಿ ನೀಟ್​ ಪರೀಕ್ಷೆಯನ್ನು ರದ್ದುಪಡಿಸುವಂತೆ ಆಗ್ರಹಿಸಿ ಡಿಎಂಕೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಂಡ ಉದಯ್​ನಿಧಿ ಕೇಂದ್ರ ಸರ್ಕಾರದ ವಿರುದ್ಧ ಮುಗಿಬಿದ್ದಿದ್ದಾರೆ.

ಆತ್ಮಹತ್ಯೆಯಲ್ಲ ಕೊಲೆ

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಉದಯ್​ನಿಧಿ ಸ್ಟಾಲಿನ್​ ನೀಟ್​ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ವಿಫಲರಾದ ವಿದ್ಯಾರ್ಥಿಗಳ ಸಾವು ಆತ್ಮಹತ್ಯೆಯಲ್ಲ. ಅದು ಕೇಂದ್ರ ಸರ್ಕಾರ ಮಾಡಿರುವ ಕೊಲೆ ಎಂದು ಆರೋಪಿಸಿದ್ದಾರೆ.

udayanidhi stalin

ರಾಜ್ಯದಲ್ಲಿ ನೀಟ್​ ಬ್ಯಾನ್​ ಮಾಡುವ ವಿಚಾರವಾಗಿ ವಿಧಾನಸಭೆಯಲ್ಲಿ ಸರ್ಕಾರದ ವತಿಯಿಂದ ನಿರ್ಣಯವನ್ನು ಅಂಗೀಕರಿಸಲಾಗಿದ್ದು, ಅದಕ್ಕೆ ಅಂಕಿತ ಹಾಕದೇ ರಾಜ್ಯಪಾಲರು ತಮ್ಮ ದುರಹಂಕಾರವನ್ನು ಪ್ರದರ್ಶಿಸುತ್ತಿದ್ದಾರೆ. ಅವರು ಆರ್​.ಎನ್ ರವಿ ಅಲ್ಲ, ಆರ್​ಎಸ್​​ಎಸ್​ ರವಿ ಎಂದು ಟೀಕಿಸಿದ್ದಾರೆ.

ನೀವು ಈ ಕೂಡಲೇ ನಿಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸಬೇಕು. ಒಂದು ವೇಳೆ ನೀವು ಚುನಾವಣೆಯಲ್ಲಿ ಗೆದ್ದರೆ ನಾನು ನಿಮ್ಮ ಮಾತನ್ನು ಕೇಳುತ್ತೇನೆ. ನೀಟ್​ಗೆ ಸಂಪೂರ್ಣವಾಗಿ ಬೆಂಬಲ ವ್ಯಕ್ತಪಡಿಸುತ್ತೇನೆ ಎಂದು ರಾಜ್ಯಪಾಲ ಆರ್​.ಎನ್. ರವಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಈ ನಿಟ್ಟನಲ್ಲಿ ಕೇಂದ್ರ ಸರ್ಕಾರ ವಿದ್ಯಾರ್ಥಿಗಳ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ನೀಟ್​ ಪರೀಕ್ಷೆಯನ್ನು ರದ್ದು ಮಾಡುವ ಮೂಲಕ ಮುಂದಾಗುವ ಅನಾಹುತಗಳನ್ನು ತಪ್ಪಿಸಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಸಚಿವ ಉದಯ್​ನಿಧಿ ಸ್ಟಾಲಿನ್​ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net