

ಬೆಂಗಳೂರು: ನಾನು ಮನೆಯಲ್ಲಿ ಇನ್ನು ಸುಮ್ಮನೆ ಮಲಗುವುದಿಲ್ಲ. ಪಕ್ಷ ಸಂಘಟನೆ ಹಾಗೂ ಜನಪರ ಹೋರಾಟವನ್ನು ಮುಂದುವರಿಸುತ್ತೇನೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಗುಡುಗಿದರು.
ಜೆಡಿಎಸ್ ರಾಜ್ಯ ಕಚೇರಿಯಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ಎಲ್ಲ ಕಡೆಗಳಲ್ಲಿ ಪ್ರವಾಸ ಮಾಡುತ್ತೇನೆ. ಪಕ್ಷದ ಕಚೇರಿಗೂ ಬರುತ್ತೇನೆ. ಎನ್‌ಡಿಎ ಮೈತ್ರಿ ಕೂಟದಲ್ಲಿ ನಾವು ಸೇರಿದ್ದು, ಜೆಡಿಎಸ್ ಪಕ್ಷ ಮೈತ್ರಿಗೆ ಯಾವುದೇ ಧಕ್ಕೆ ತರುವುದಿಲ್ಲ ಎಂದರು.
ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಚಿಕ್ಕಬಳ್ಳಾಪುರ ಹಾಗೂ ಮೈಸೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಜತೆ ಕೂತು ಯಾವ ದೇವೇಗೌಡರು ಹೋರಾಟ ಮಾಡಿದ್ದರೋ ಅದೇ ದೇವೇಗೌಡರು ಈಗ ಮತ್ತೆ ಹೋರಾಟಕ್ಕೆ ಅಣಿಯಾಗಿ ನಿಂತಿದ್ದಾರೆ ಎಂದು ಹೇಳಿದರು.
62 ವರ್ಷ ಶಾಸಕ, ವಿರೋಧ ಪಕ್ಷದ ನಾಯಕ, ಮಂತ್ರಿ, ಮುಖ್ಯಮಂತ್ರಿ, ಪ್ರಧಾನಿಯಾಗಿ ಕೆಲಸ ಮಾಡಿದ್ದೇನೆ. ಮೂರು ತಿಂಗಳ ಕಾಲ ಮನೆಯಲ್ಲಿಯೇ ಮಲಗಿಸಿಬಟ್ಟರು. ನಾನು ಈ ದೇಶದಲ್ಲಿ ತಲೆಮರೆಸಿಕೊಳ್ಳುವ ರಾಜಕಾರಣಿನಾ? ಎಂದು ಖಾರವಾಗಿ ಪ್ರಶ್ನಿಸಿದರು.
ನನ್ನನ್ನು ಮುಗಿಸಲು ಸಾಧ್ಯವಿಲ್ಲ. ಎಲ್ಲವನ್ನೂ ಎದುರಿಸಿ ಹೋರಾಟ ಮಾಡುತ್ತೇನೆ. ಕಾರ್ಯಕರ್ತರ ಜತೆ ಓಡಾಡಿಕೊಂಡೆ ಪಕ್ಷ ಕಟ್ಟುತ್ತೇನೆ ಎಂದು ದೇವೇಗೌಡ ತಿಳಿಸಿದರು.