ಈ ನೆಲ ಮಾತ್ರವಲ್ಲ, ಮೂರು ಲೋಕಗಳೂ ನಮ್ಮ ದೇಶವೇ...

earth
Published on
ಬ್ರಿಟಿಷರ ದಬ್ಬಾಳಿಕೆಯಿಂದ ಬೇಸತ್ತಿದ್ದ ಭಾರತವು ಸ್ವಾತಂತ್ರ್ಯ ಪೂರ್ವಕಾಲದಲ್ಲಿ ಎರಡು ಬಾರಿ ಸ್ವದೇಶಿ ಚಳುವಳಿಯನ್ನು ಕಂಡಿತು - ಎನ್ನುತ್ತಾರೆ ಇತಿಹಾಸಜ್ಞರು: 1850ರ ಆಸುಪಾಸಿನಲ್ಲಿ ಹಾಗೂ 1905ರ ಆಸುಪಾಸಿನಲ್ಲಿ ಇವುಗಳಾರಂಭವಾಯಿತು. ಮೊದಲನೆಯದರಲ್ಲಿ ನೌರೋಜಿ- ಗೋಖಲೆ- ರಾನಡೆ- ಟಿಳಕರ ಮುಂದಾಳುತ್ವವಿತ್ತು. ಎರಡನೆಯದರಲ್ಲಿ ಗಾಂಧೀಜಿಯವರದು. ಭಾರತದ ಸಂಪತ್ತನ್ನು ವ್ಯವಸ್ಥಿತವಾಗಿ ಬ್ರಿಟಿಷರು ಕೊಳ್ಳೆಹೊಡೆಯುತ್ತಿದ್ದುದನ್ನು ದಾದಾಭಾಯಿ ನೌರೋಜಿ ಎಲ್ಲರ ಮುಂದೆ ತೆರೆದಿಟ್ಟರು. ಬಂಗಾಳವನ್ನೊಡೆದು ಮುಸ್ಲಿಮರಿಗೆ ಪೂರ್ವಬಂಗಾಳ ವನ್ನು ಅವರಿತ್ತದ್ದು ಎರಡನೆಯದಕ್ಕೆ ನಾಂದಿಯಾಯಿತು. ಆಂಗ್ಲ-ವಸ್ತ್ರಗಳನ್ನು ಲಕ್ಷಾಧಿಕವಾಗಿ ಸುಡುತ್ತಾ ಖಾದಿ ಚಳವಳಿ ಆರಂಭವಾಯಿತು. ವಿದೇಶೀಮಾಲುಗಳನ್ನು ಬಹಿಷ್ಕರಿಸಿ ಸ್ವದೇಶೋತ್ಪಾದನಗಳಿಗೇ ಪೋ›ತ್ಸಾಹವೀಯಬೇಕೆಂಬ ತತ್ತ್ವವು ಆರ್ಥಿಕಸ್ವಾತಂತ್ರ್ಯ ವೆಂಬ ತನ್ನ ಮೊದಲ ಹೆಜ್ಜೆಯನ್ನು ಕಂಡಿತು. ಸ್ವರಾಜ್ಯವೆಂಬುದು ಜನ್ಮಸಿದ್ಧ ಹಕ್ಕೆಂದುಟಿಳಕರು ಘೊಷಿಸಿದರು. ಭಗತ್ ಸಿಂಗ್ ಮೊದಲಾದ ಧೀರರು ಬ್ರಿಟಿಷರು ತತ್ತರಿಸುವಂತೆ ಸಿಡಿದೆದ್ದರು. ಬ್ರಿಟಿಷರ ಉಚ್ಚಾಟನೆ ಯಾಯಿತು. ಆದರೆ ಮತ್ತೆ ಮೋಹವಾವರಿಸಿತು, ನಮ್ಮ ಜನತೆಗೆ. ವಿದೇಶೀ- ವಸ್ತು- ವ್ಯಾಮೋಹ ಮರುಕಳಿಸಿತು. ಈಗಿನ ಪ್ರಧಾನ ಮಂತ್ರಿಗಳ ನೇತೃತ್ವದಲ್ಲಿ ಸ್ವದೇಶೀ ಆಂದೋಳನಕ್ಕೆ ನವರೂಪವೇ ಬಂದಿದೆ. ಸ್ವದೇಶೀ-ತಾಂತ್ರಿಕತೆಯೂ ರೂಪುಗೊಳ್ಳುತ್ತಿದೆ. ಈಚೆಗೆ ಅಮೇರಿ ಕಾಧ್ಯಕ್ಷರು ತಾಳಿದ ನಿಲುವುಗಳಿಗೆ ಪ್ರತಿಯಾಗಿ, ಉತ್ಕಟವಾದ ಆತ್ಮನಿರ್ಭರತೆಗೆ ಕರೆನೀಡಲಾಗಿದೆಯಷ್ಟೆ. ರಾಜಕೀಯ ಸ್ವಾತಂತ್ರ್ಯವೊಂದು ಯಜ್ಞವೆಂದೂ ಸ್ವದೇಶೀ ಆಂದೋಳನವು ಯಜ್ಞಕಲ್ಪ ವೆಂದೂ ಯೋಗಿ ಅರವಿಂದರು ನಿರೂಪಿಸಿದರು. ಹಾಗೆ ನೋಡಿದರೆ ರವೀಂದ್ರನಾಥಠಾಕೂರರೇ ಸ್ವದೇಶೀ ಚಳವಳಿಯ ವಿಷಯವಾಗಿ ಲಘುವಾಗಿ ಮಾತನಾಡಿದವರು.

ಕೇವಲ ಆರ್ಥಿಕವಾಗಿ ಹಾಗೂ ರಾಜಕೀಯವಾಗಿ ನಮಗೆ ಸ್ವಾತಂತ್ರ್ಯ ಸಿಕ್ಕರೆ ಸಾಲದೆಂಬುದನ್ನು ಚಿಕ್ಕಂದಿನಲ್ಲೇ ಮನಗಂಡು, ಸಾಂಸ್ಕೃತಿಕವಾದ ನಮ್ಮತನವು ದೃಢವಾಗಬೇಕೆಂದು ಪ್ರತಿಪಾದಿಸಿ ಆ ದಿಶೆಯಲ್ಲಿ ಶ್ರಮಿಸಿದವರೆಂದರೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಂಸ್ಥಾಪಕ ಡಾ. ಹೆಡಗೇವಾರರೇ ಸರಿ. ಇತ್ತ ಕಲೆಗೂ ಸ್ವದೇಶೀ ಸಿದ್ಧಾಂತಕ್ಕೂ ಇರುವ ನಂಟನ್ನು ಡಾ. ಆನಂದಕುಮಾರ ಸ್ವಾಮಿಗಿಂತಲೂ ಮಿಗಿಲಾಗಿ ಪ್ರತಿಪಾದಿಸಿದವ ರುಂಟೆ? ಬಹಳ ಮುಖ್ಯವಾಗಿ ಭಾರತವು ದಿವಾಳಿಯೆದ್ದಿರುವುದು ಬೌದ್ಧಿಕವಾಗಿ ಹಾಗೂ ಆಧ್ಯಾತ್ಮಿಕವಾಗಿ ಎಂಬುದನ್ನು ದಿಟ್ಟವಾಗಿ ಪ್ರತಿಪಾದಿಸಿದವರು, ಗುರೂಜಿ ಎಂದು ಪ್ರಸಿದ್ಧರಾದ ಗೋಳವಲಕರರೇ ಸರಿ. ಹಾಗಾದರೆ ಸ್ವದೇಶವೆಂದರೇನೆಂಬುದರ ಬಗ್ಗೆ ಭಾರತೀಯ ಚಿಂತನೆಯೇನಾದರೂ ಉಂಟೆ? ಸಾಧಾರಣವಾಗಿ ಎಲ್ಲರಿಗೂ ತಾನು, ತನ್ನ ಕುಟುಂಬ, ತನ್ನ ಮನೆ, ತನ್ನ ಮನೆತನ - ಇವುಗಳು ದೊಡ್ಡದಾಗಿ ಕಾಣುತ್ತವೆ, ಸರಿಯೇ. ಇವಕ್ಕಿಂತಲೂ ಗ್ರಾಮ- ಜನಪದಗಳನ್ನು ದೊಡ್ಡದಾಗಿ ಕಾಣುವು ದಿದೆ. ತನ್ನ ದೇಶವೆಂದರೆ ಭೂಪಟದಲ್ಲಿ ಗೆರೆಯೆಳೆದು ಇಲ್ಲಿಂದ ಇಲ್ಲಿಯವರೆಗೆ -ಎಂದು ಅವಧಿಗಳನ್ನು ಸೂಚಿಸುವ ಕ್ರಮವಿದೆ: ಕರಾರುವಾಕ್ಕಾಗಿ ಹೇಳಲು ಅಕ್ಷಾಂಶ-ರೇಖಾಂಶಗಳ ಉಲ್ಲೇಖವಾಗುತ್ತದೆ. ಸ್ವದೇಶದ ಭೂವಲಯವೆಂದು ಹೇಳುವಲ್ಲಿ ಕಲ್ಲು-ಮಣ್ಣು, ಬೆಟ್ಟ-ಗುಡ್ಡ, ನದಿ-ಝುರಿ ಗಳಿಂದ ಗುರುತಿಸಲಾಗುವ ಸೀಮೆಯಾಗಿ ತೋರಿಸುವುದಿದೆ. ಆದರೆ ಇದನ್ನು ಮೀರಿ ಭೂಮಿಯೆಲ್ಲವೂ ಒಂದೇ ಕುಟುಂಬದಂತೆ ಎಂದುಕೊಳ್ಳುವುದು ವಿಶಾಲಮನೋಭಾವವಲ್ಲವೇ?

ಮನೋವೈಶಾಲ್ಯವೆಂದು ಕಣ್ಣುಮುಚ್ಚಿ ಕುಳಿತುಕೊಳ್ಳುವುದೂ ಸರಿಯಲ್ಲ: ನಾಡಿಗೋ, ಮನುಕುಲಕ್ಕೋ ಕಂಟಕಪ್ರಾಯರಾದವರ ಮೇಲೆ ಒಂದು ಕಣ್ಣಿಟ್ಟೇ ಇರಬೇಕಾಗುತ್ತದೆ. ನಮ್ಮ ದೇಶದ ಜ್ಞಾನಿಗಳಂತೂ ಭೂಮಿಯನ್ನೇ ತಾಯಿಯನ್ನಾಗಿಯೂ, ಸ್ವರ್ಗವನ್ನೇ ತಂದೆಯನ್ನಾಗಿಯೂ ಕಂಡಿರುವರು. ಈ ತಾತ್ತಿ್ವಕನೋಟವನ್ನೇ ಸ್ಪಷ್ಟತರವಾಗಿ ಕಂಡುಕೊಂಡು ಪರಮಪುರುಷ- ಪರಾಪ್ರಕೃತಿಗಳನ್ನೇ ತಂದೆ ತಾಯಿಗಳನ್ನಾಗಿ ತೋರಿಸುವುದು: ಇದರ ಅಭಿವ್ಯಕ್ತಿಯಾಗಿಯೇ, ಪಾರ್ವತೀ-ಮಹೇಶ್ವರರನ್ನೇ ತಾಯಿ-ತಂದೆಗಳೆಂದೂ ಶಿವಭಕ್ತರನ್ನೇ ಬಂಧುಗಳೆಂದೂ ಹೇಳಿ, ಸ್ವದೇಶವೆಂದರೆ ಮೂರೂ ಲೋಕಗಳು ಎಂದಿದೆ (ಸ್ವದೇಶೋ ಭುವನತ್ರಯಂ), ಅನ್ನಪೂರ್ಣಾಷ್ಟಕದ ಕೊನೆ ಯಲ್ಲಿ . ಹೀಗೆಯೇ ಕಮಲಾ-ಜನಾರ್ದನರನ್ನೂ ವಿಷ್ಣುಭಕ್ತರನ್ನೂ ಮಾತಾ-ಪಿತೃಗಳೆಂದೂ ಬಂಧುಗಳೆಂದೂ ಹೇಳುವುದಿದೆ.

ಬಹುಪ್ರಾಚೀನ ವಿಷ್ಣುಪುರಾಣದಲ್ಲಿ ಭಾರತದೇಶವನ್ನು ಸ್ವರ್ಗ-ಅಪವರ್ಗಗಳ ಸಾಧನೆಗೆ ಎಡೆಯಾದುದೆಂದೇ ಸ್ತುತಿಸಿದೆ (ಅಪವರ್ಗ ವೆಂದರೆ ಮೋಕ್ಷ). ನಮ್ಮ ದೃಷ್ಟಿಯು ಭೌತಿಕಕ್ಕೆ ಸೀಮಿತವಾದಾಗ ದೇಶವೆಂಬುದು ಕಲ್ಲು-ಮಣ್ಣುಗಳ ಸೀಮೆಯಾಗುತ್ತದೆ. ಆದರೆ ಶ್ರೀರಂಗಮಹಾ ಗುರುಗಳು ಹೇಳಿರುವಂತೆ, ನಮ್ಮ ನೋಟವು ಆಧಿಭೌತಿಕದೊಂದಿಗೆ ಅದನ್ನೂ ಮೀರಿದ ಆಧಿದೈವಿಕ-ಆಧ್ಯಾತ್ಮಿಕ ಕ್ಷೇತ್ರಗಳ ನೋಟಗಳನ್ನೂ ಒಳಗೊಳ್ಳುವುದಾಗಿರಬೇಕು. ಬೇರೆ ದೇಶದವರ ದೃಷ್ಟಿಯು ಭೌತಿಕಕ್ಕೆ ಸೀಮಿತವೆಂದರೆ ನಮ್ಮದೂ ಹಾಗೆಯೇ ಇರಬೇಕೆಂದೇ? ಋಷಿ ದೃಷ್ಟಿ ಪರಿಮಿತವಲ್ಲ, ತ್ರಿಕ್ಷೇತ್ರ-ಸಾಮರಸ್ಯವನ್ನು ಕಂಡುಕೊಳ್ಳುವಂತಹುದು. ಸ್ವದೇಶವೆನ್ನುವಾಗ ಸ್ವದೇಶದ ಹೆಸರನ್ನೂ ಒಮ್ಮೆ ಜ್ಞಾಪಿಸಿಕೊಳ್ಳಬೇಕಷ್ಟೆ. ಭಾರತವೆನ್ನುವಾಗ ಭಾ ಎಂದರೆ ಬೆಳಕು, ಜ್ಞಾನ: ಎಲ್ಲ ಬೆಳಕುಗಳಿಗೂ ಮೂಲವಾದ ಪರಮಾತ್ಮಪ್ರಕಾಶ, ಅರ್ಥಾತ್ ಪರಂಜ್ಯೋತಿ. ಭಾರತದ ಸಾಂಸ್ಕೃತಿಕ ರಾಜಧಾನಿಯಾಗಿದ್ದು ವಿದ್ಯೆಗೆ ಹೆಸರಾಗಿದ್ದ ಕಾಶಿಯೆಂಬು ದರ ಅರ್ಥವೂ ಅದೇ ಆತ್ಮಜ್ಯೋತಿಯೇ ತಾನೆ? ಹೀಗಾಗಿ, ಶ್ರೀರಂಗ ಮಹಾಗುರುಗಳು ಹೇಳುವಂತೆ, ‘ನಮ್ಮ ಜೀವನದ ನೆಲೆಯು ಪರ ಮವ್ಯೋ ಮವೇ ಆಗಿದೆ’.ಸ್ವದೇಶವೆಂಬುದನ್ನು ಭೌತಿಕಕ್ಕೆ (ಸೀ)ಮಿತ ಗೊಳಿಸದೆ, ಮಹಾಮೇಧಾವಿಗಳಾದ ಋಷಿಗಳು ಕಂಡುಕೊಂಡಿದ್ದ ತ್ರಿಕ್ಷೇತ್ರಗಳಿಗೂ ಅನ್ವಯಮಾಡಿಕೊಂಡರಲ್ಲವೆ ಭಾರತರಾದವರ ಜೀವಿತದ ಸಾರ್ಥಕ್ಯ?

(ಲೇಖಕರು ಆಧ್ಯಾತ್ಮ ಚಿಂತಕರು ಮತ್ತು ಪ್ರವಚನಕಾರರು ಅಷ್ಟಾಂಗಯೋಗ ವಿಜ್ಞಾನ ಮಂದಿರ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net