ಜೈಲಿಗೆ ಕಳುಹಿಸುವುದು ಮಾತ್ರವಲ್ಲ, ನಟ ದರ್ಶನ್‌ ಗೆ ಗಲ್ಲು ಶಿಕ್ಷೆಯಾಗಬೇಕು

0012
Published on

ಚಿಕ್ಕಬಳ್ಳಾಪುರ: ಬಡಪಾಯಿ ಅಮಾಯಕ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ನನ್ನು ಜೈಲಿಗೆ ಕಳುಹಿಸುವುದು ಮಾತ್ರವಲ್ಲ, ಗಲ್ಲು ಶಿಕ್ಷೆಯಾಗಬೇಕು ಎಂದು ವಿಧಾನಪರಿಷತ್ ಮಾಜಿ ಸದಸ್ಯ ವೈ.ಎ.ನಾರಾಯಣಸ್ವಾಮಿ ಒತ್ತಾಯಿಸಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನಟ ದರ್ಶನ್‌ಗೆ ಮನೋವಿಕಲ ಸಮಸ್ಯೆ ಏನೋ ಇದೆ. ಈತನ ವಿರುದ್ಧ ಕೊಲೆ ಪ್ರಕರಣ ಒಂದೇ ಅಲ್ಲ, ಹಲವು ದೂರುಗಳು ದಾಖಲಾಗಿವೆ ಎಂದು ಕಿಡಿಕಾರಿದರು.

ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ಸಂದೇಶ ಕಳುಹಿಸಿದ ಆರೋಪದಲ್ಲಿ ಬಡಪಾಯಿ ಅಮಾಯಕನನ್ನು ಕರೆಸಿಕೊಂಡು ಅಮಾನುಷವಾಗಿ ಕೊಲ್ಲಲಾಗಿದೆ. ಚಿತ್ರಹಿಂಸೆ ನೀಡಿ ಕೊಂದಿರುವುದನ್ನು ಯಾರೂ ಸಹ ಒಪ್ಪಲು ಸಾಧ್ಯವಿಲ್ಲ. ತಪ್ಪಿತಸ್ಥರೆಲ್ಲರನ್ನೂ ಯಾವುದೇ ಮುಲಾಜಿಲ್ಲದೇ ಜೈಲಿಗೆ ಹಾಕಬೇಕು ಎಂದರು.

*ಟೀಕಿಸುವ ಮೊದಲು ಯೋಚಿಸಿ

ಕೇಂದ್ರ ಸಚಿವ ಸಂಪುಟದಲ್ಲಿ ಜಾತಿವಾರು ಅಸಮತೋಲನ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿರುವುದಕ್ಕೆ ವೈ.ಎ.ನಾರಾಯಣಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.

ಕೇಂದ್ರ ಸಚಿವ ಸಂಪುಟದಲ್ಲಿ ಯಾವುದೇ ರೀತಿಯ ಅನ್ಯಾಯವಾಗಿಲ್ಲ. ಉತ್ತಮ ಆಡಳಿತ ಮತ್ತು ಮೈತ್ರಿ ಪಕ್ಷಗಳ ಸಲಹೆಗಳನ್ನು ಗಮನದಲ್ಲಿಟ್ಟುಕೊಂಡು ಸಚಿವ ಸ್ಥಾನದ ಜವಾಬ್ದಾರಿಯನ್ನು ವಹಿಸಲಾಗಿದೆ. ಮುಂಬರುವ ದಿನಗಳಲ್ಲಾದರೂ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸರ್ಕಾರವನ್ನು ಟೀಕಿಸುವ ಮೊದಲು ಮುಖ್ಯಮಂತ್ರಿ ಸಿದ್ದರಾಮಯ್ಯ ಯೋಚಿಸಬೇಕು. ಅನವಶ್ಯಕ ವಿವಾದಗಳು ರಾಜ್ಯ ಅಭಿವೃದ್ಧಿ ಕೆಲಸಗಳಿಗೆ ಮತ್ತು ಅಗತ್ಯ ನೆರವು ಪಡೆಯುವಲ್ಲಿ ಹಿನ್ನಡೆಗೆ ಕಾರಣವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net