ಪ್ರಧಾನಿ ಮೋದಿಯವರು ಕರೆ ಕೊಟ್ಟಿದ್ದ ದೀಪ ಅಭಿಯಾನದಲ್ಲಿ ಪಾಲ್ಗೊಂಡ ನಿರ್ದೇಶಕ ರಾಮ್ ಗೋಪಾಲ್​ ವರ್ಮಾ; ಆದರೆ ಹಚ್ಚಿದ್ದು ಸಿಗರೇಟ್​...!

Rm Gopal Varma
Published on

ಮುಂಬೈ: ಪ್ರಧಾನಿ ನರೇಂದ್ರ ಮೋದಿಯವರು ಏ.3ರಂದು ಒಂದು ವಿಡಿಯೋ ಸಂದೇಶ ನೀಡಿದ್ದರು. ಕರೊನಾ ವಿರುದ್ಧದ ಹೋರಾಟದಲ್ಲಿ ನಾವೆಲ್ಲ ಒಗ್ಗಟ್ಟಾಗಿದ್ದೇವೆಂದು ಸಾರಲು ಏ.5ರಂದು ರಾತ್ರಿ 9ಗಂಟೆಗೆ 9 ನಿಮಿಷಗಳ ಕಾಲ ದೀಪ ಹಚ್ಚೋಣ ಎಂದಿದ್ದರು.

ಆ ಕರೆಗೆ ಸ್ಪಂದಿಸಿದ ದೇಶದ ಅನೇಕ ಜನರು ಭಾನುವಾರ ದೀಪ, ಮೊಂಬತ್ತಿಗಳನ್ನು ಹಚ್ಚಿದ್ದಾರೆ. ಮೊಬೈಲ್​ ಫ್ಲ್ಯಾಶ್​, ಟಾರ್ಚ್​ ಲೈಟ್​ ಉರಿಸಿ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ.

ಬಾಲಿವುಡ್​ನಿಂದ ಆಯಾ ಸ್ಥಳೀಯ ಸಿನಿಮಾ ತಾರೆಗಳು, ಕ್ರಿಕೆಟ್​ ಆಟಗಾರರು, ಉದ್ಯಮಿಗಳು ಸೇರಿ ಅನೇಕಾನೇಕರು ದೀಪ ಅಭಿಯಾನದಲ್ಲಿ ಪಾಲ್ಗೊಂಡಿದ್ದಾರೆ. ಹಾಗೇ ಸಾಮಾಜಿಕ ಜಾಲತಾಣಗಳಲ್ಲಿ ತಾವು ದೀಪ ಹಚ್ಚಿದ ಫೋಟೋಗಳನ್ನು ಅಪ್ಲೋಡ್​ ಮಾಡಿಕೊಂಡಿದ್ದಾರೆ.

ಆದರೆ ಸದಾ ವಿವಾದವನ್ನೇ ಸೃಷ್ಟಿಸುವ ಬಾಲಿವುಡ್​ ಸಿನಿಮಾ ನಿರ್ದೇಶಕ ರಾಮ್​ ಗೋಪಾಲ್​ ವರ್ಮಾ ಮತ್ತೊಮ್ಮೆ ಅದನ್ನೇ ಮಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರು ದೀಪ ಹಚ್ಚಲು ನೀಡಿದ್ದ ಸಮಯದಲ್ಲಿ ತಾವು ಸಿಗರೇಟ್ ಹೊತ್ತಿಸಿದ್ದಾಗಿ ಹೇಳಿದ್ದಾರೆ. ಬಾಯಲ್ಲಿ ಸಿಗರೇಟ್​ ಇಟ್ಟುಕೊಂಡು, ಲೈಟರ್​ ಮೂಲಕ ಅದನ್ನು ಉರಿಸಿದ ವಿಡಿಯೋವನ್ನು ಟ್ವಿಟರ್​ನಲ್ಲಿ ಪೋಸ್ಟ್ ಮಾಡಿ, '9 ಗಂಟೆಗೆ' ಎಂದು ಕ್ಯಾಪ್ಷನ್​ ನೀಡಿದ್ದಾರೆ,

ಹಾಗೇ ಸಿಗರೇಟ್​ಗೆ ಬೆಂಕಿ ಹೊತ್ತಿಸಿಕೊಂಡ ಮತ್ತೊಂದು ಫೋಟೋವನ್ನು ಪೋಸ್ಟ್ ಮಾಡಿ, ಸರ್ಕಾರ ಸಿಗರೇಟ್​ ಸೇದಬೇಡಿ ಎಂದು ನೀಡಿರುವ ಎಚ್ಚರಿಕೆಯನ್ನು ಪಾಲಿಸದೆ ಇರುವುದಕ್ಕಿಂತ ಕರೊನಾ ಕುರಿತಾಗಿ ನೀಡಿರುವ ವಾರ್ನಿಂಗ್​ನ್ನು ಮೀರುವುದು ಇನ್ನೂ ಅಪಾಯಕಾರಿ' ಎಂದು ಕ್ಯಾಪ್ಷನ್​ ಬರೆದುಕೊಂಡಿದ್ದಾರೆ.

ಏ.1ರಂದು ರಾಮ್​ ಗೋಪಾಲ್​ ವರ್ಮಾ ತಮಗೆ ಕರೊನಾ ವೈರಸ್​ ಪಾಸಿಟಿವ್​ ಬಂದಿದೆ ಎಂದು ಹೇಳಿ ಟ್ವೀಟ್​ ಮಾಡಿ, ಅಭಿಮಾನಿಗಳನ್ನು ಮೂರ್ಖರನ್ನಾಗಿ ಮಾಡಲು ಪ್ರಯತ್ನಿಸಿದ್ದರು. ಆದರೆ ನೆಟ್ಟಿಗರು ಹಿಗ್ಗಾಮುಗ್ಗಾ ಬೈದು, ಟೀಕಿಸಿದ್ದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net