ಮದುವೆಯಾದ ಐದು ದಿನಕ್ಕೆ ದಂಪತಿ ನದಿಗೆ ಹಾರಿದ್ರು; ಪ್ರಾಣ ಭಯದಲ್ಲಿ ಈಜಿಕೊಂಡು ದಡ ಸೇರಿದ ಪತಿ, ಪತ್ನಿ ಸಾವು

Not even a week of marriage
Published on

ನವದೆಹಲಿ:  ನವದಂಪತಿ ಇಬ್ಬರೂ ಒಟ್ಟಿಗೆ ನದಿಗೆ ಹಾರಿದ್ದಾರೆ. ವಧು ಪ್ರಾಣ ಕಳೆದುಕೊಂಡಿದ್ದು, ವರ ಪ್ರಾಣ ಭಯದಲ್ಲಿ ಈಜಿಕೊಂಡು ದಡ ಸೇರಿದ್ದಾನೆ. ಈ  ಘಟನೆ ಪಶ್ಚಿಮ ಗೋದಾವರಿ ಜಿಲ್ಲೆಯ ಪೆನುಗೊಂಡದಲ್ಲಿ ನಡೆದಿದೆ.

ವಧುವಿನ ಕುಟುಂಬಸ್ಥರು ಹಾಗೂ ಪೊಲೀಸರ ಪ್ರಕಾರ, ವಡಲಿಯ ಕೊರಡ ಸತ್ಯವಾಣಿ ಡಿಸೆಂಬರ್ 15ರಂದು ಉಂದ್ರಜಾವರಂ ಮಂಡಲದ ಮೋರ್ಟಾದ ವರ ಕೆ.ಶಿವರಾಮಕೃಷ್ಣ ಅವರನ್ನು ವಿವಾಹವಾಗಿದ್ದರು. ಮಂಗಳವಾರ ರಾತ್ರಿ ಇಬ್ಬರೂ ಸಿನಿಮಾಕ್ಕೆ ಹೋಗುವುದಾಗಿ ಹೇಳಿ ಮನೆಯಿಂದ ಹೊರಟಿದ್ದರು. ಹಾಗೆ ಹೋದವರು ರಾತ್ರಿಯಾದರೂ ಮನೆಗೆ ಹಿಂತಿರುಗಿರಲಿಲ್ಲ. ಇದರಿಂದ ಆತಂಕಗೊಂಡ ಕುಟುಂಬಸ್ಥರು ಪೊಲೀಸರ ಮೊರೆ ಹೋಗಿದ್ದಾರೆ.

ದಂಪತಿಯ ಬೈಕ್ ಸಿದ್ದಣ್ಣನ ಸೇತುವೆ ಬಳಿ ಪತ್ತೆಯಾಗಿದೆ. ದಂಪತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಭಾವಿಸಿದ್ದರು. ಆದರೆ ಅಷ್ಟರಲ್ಲಿ ಆಘಾತಕಾರಿ ವಿಷಯವೊಂದು ಹೊರಬಿದ್ದಿದೆ. ರಾಮಕೃಷ್ಣ ಬದುಕಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದು ಪತ್ತೆಯಾಗಿದೆ. ಆತನನ್ನು ವಿಚಾರಣೆಗೆ ಒಳಪಡಿಸಿದಾಗ ನಿಜವಾಗಿ ನಡೆದಿದ್ದನ್ನು ಬಹಿರಂಗಪಡಿಸಿದ್ದಾನೆ.

ಪತಿ-ಪತ್ನಿ ಇಬ್ಬರೂ ಆತ್ಮಹತ್ಯೆ ಮಾಡಿಕೊಳ್ಳಲು ಯೋಚಿಸಿದ್ದರಿಂದ ಇಬ್ಬರೂ ಸೇರಿ ಗೋದಾವರಿ ನದಿಗೆ ಹಾರಿದ್ದಾರೆ ಎಂದು ರಾಮಕೃಷ್ಣ ತಿಳಿಸಿದ್ದಾರೆ. ಪ್ರಾಣಭಯದಿಂದ ಈಜಿದ್ದು, ಪತ್ನಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ.

ವರದಕ್ಷಿಣೆಯಾಗಿ 1 ಲಕ್ಷದ 60 ಸಾವಿರ ಹಾಗೂ ಚಿನ್ನಾಭರಣ ಹಾಕಿದ್ದೇವೆ. ರಾಮಕೃಷ್ಣ ಏನೋ ನಾಟಕವಾಡುತ್ತಿದ್ದಾರೆ ಎಂದು ವಧುವಿನ ಸಂಬಂಧಿಕರು ಆರೋಪಿಸುತ್ತಿದ್ದಾರೆ. ನಾಪತ್ತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೆನುಗೊಂಡ ಪೊಲೀಸರು ತಿಳಿಸಿದ್ದಾರೆ.  ಈ ಪ್ರಕರಣದ ತನಿಖೆ ನಡೆಯುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net