ಅಂಬಾನಿ or ಅದಾನಿ ಅಲ್ಲ... ಜೆಫ್ ಬೆಜೋಸ್ ಅದ್ಧೂರಿ ಮದ್ವೆಗೆ ಭಾರತದಿಂದ ಹಾಜರಾಗಿದ್ದು ಈ ಒಬ್ಬ ವ್ಯಕ್ತಿ ಮಾತ್ರ! Jeff Bezos

Jeff Bezos
Published on

Jeff Bezos : ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದ್ದಾರೆ. ಹೀಗಾಗಿ, ಅವರ ಮದುವೆ ಹೇಗಿರುತ್ತದೆ ಎಂಬುದರ ಕುರಿತು ವಿಶೇಷವಾಗಿ ಹೇಳಬೇಕಾಗಿಲ್ಲ. ಬೆಜೋಸ್ ಮತ್ತು ಪತ್ರಕರ್ತೆ ಲಾರೆನ್ ಸ್ಯಾಂಚೆಜ್ ನಿನ್ನೆ (ಜೂನ್​ 28) ವಿವಾಹವಾದರು. ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ವೆನಿಸ್‌ನಲ್ಲಿ ವಿವಾಹ ಸಮಾರಂಭ ಬಹಳ ಅದ್ಧೂರಿಯಾಗಿ ನಡೆಯಿತು. ಪ್ರಪಂಚದಾದ್ಯಂತದ ಸೆಲೆಬ್ರಿಟಿಗಳು ಮದುವೆ ಸಮಾರಂಭದಲ್ಲಿ ಭಾಗವಹಿಸಿದ್ದರು. ಇದಕ್ಕೆ ಸಂಬಂಧಿಸಿದ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.

ಜೆಫ್​ ಬೆಜೋಸ್ ಮತ್ತು ಲಾರೆನ್​ ಸ್ಯಾಂಚೆಜ್ ಅವರ​ ಆಪ್ತ ಸ್ನೇಹಿತರು ಮತ್ತು ಸಂಬಂಧಿಕರು ಮಾತ್ರ ಈ ಸಮಾರಂಭದಲ್ಲಿ ಭಾಗವಹಿಸಿದ್ದರು. ಹಾಗಾದರೆ, ಭಾರತದಿಂದ ಯಾರು ಭಾಗವಹಿಸಿದ್ದರು ಎಂಬ ಅನುಮಾನ ಮೂಡದೇ ಇರದು. ಕುತೂಹಲಕಾರಿ ಸಂಗತಿಯೆಂದರೆ ಭಾರತದಿಂದ ಒಬ್ಬ ವ್ಯಕ್ತಿಗೆ ಮಾತ್ರ ಈ ವಿವಾಹ ಔತಣಕೂಟದಲ್ಲಿ ಭಾಗವಹಿಸಲು ಅವಕಾಶ ಸಿಕ್ಕಿತು.

ಆ ಒಬ್ಬ ವ್ಯಕ್ತಿ ಮುಕೇಶ್ ಅಂಬಾನಿ ಆಗಲಿ ಅಥವಾ ಗೌತಮ್​ ಅದಾನಿ ಆಗಲಿ ಅಲ್ಲ. ಮಹಿಳಾ ಕೈಗಾರಿಕೋದ್ಯಮಿ ನತಾಶಾ ಪೂನಾವಲ್ಲ ಅವರನ್ನು ಮಾತ್ರ ಈ ಸಮಾರಂಭಕ್ಕೆ ಆಹ್ವಾನಿಸಲಾಗಿತ್ತು. ವಿವಾಹ ಸಮಾರಂಭದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪುತ್ರಿ ಇವಾಂಕಾ ಟ್ರಂಪ್, ಅಮೆರಿಕನ್ ಗಾಯಕಿ ಬೆಯೋನ್ಸ್, ಟೈಟಾನಿಕ್ ತಾರೆ ಲಿಯೊನಾರ್ಡೊ ಡಿಕಾಪ್ರಿಯೊ, ಬಿಲಿಯನೇರ್ ಮತ್ತು ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್, ಕೇಟಿ ಪೆರ್ರಿ, ಕಿಮ್ ಕಾರ್ಡಶಿಯಾನ್ ಮುಂತಾದವರು ಸೇರಿದಂತೆ ಪ್ರಮುಖ ತಾರಾಬಳಗವೇ ಈ ಸಮಾರಂಭದಲ್ಲಿ ನೆರೆದಿತ್ತು.

ಭಾರತೀಯ ಮಹಿಳೆ ನತಾಶಾ ಪೂನಾವಲ್ಲರನ್ನು ಮಾತ್ರ ಈ ಸಮಾರಂಭಕ್ಕೆ ಆಹ್ವಾನಿಸಲಾಗಿತ್ತು. ಅಂದಹಾಗೆ, ನತಾಶಾ ಪೂನಾವಲ್ಲ ವಿಶ್ವಪ್ರಸಿದ್ಧ ಉದ್ಯಮಿ ಮತ್ತು ಸಾಮಾಜಿಕ ಕಾರ್ಯಕರ್ತೆ. ನತಾಶಾ ವಿಲ್ಲು ಪೂನಾವಲ್ಲ ಫೌಂಡೇಶನ್‌ನ ಅಧ್ಯಕ್ಷೆ ಮತ್ತು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕಿ.

ನತಾಶಾ ಅವರು ತನ್ನ ವ್ಯವಹಾರಿಕ ಕೌಶಲ್ಯ, ಫ್ಯಾಷನ್ ಸೆನ್ಸ್ ಮತ್ತು ಲೋಕೋಪಕಾರಕ್ಕಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾಗಿದ್ದಾರೆ. ನತಾಶಾ ಅವರು ಜೆಫ್ ಬೆಜೋಸ್​ ಮತ್ತು ಲಾರೆನ್ ಸ್ಯಾಂಚೆಜ್ ಅವರ ಆಪ್ತ ಸ್ನೇಹಿತೆ. ಲಾರೆನ್ ಸ್ಯಾಂಚೆಜ್ ಆಯೋಜಿಸಿದ್ದ ವಿಐಪಿ ಬ್ಯಾಚುಲರ್ ಪಾರ್ಟಿಯಲ್ಲಿಯೂ ನತಾಶಾ ಭಾಗವಹಿಸಿದ್ದರು. 'ಸೆಲೆಬ್ರೇಟಿಂಗ್ ಲವ್ ವೆನಿಸ್' ಎಂಬ ಶೀರ್ಷಿಕೆಯೊಂದಿಗೆ ನತಾಶಾ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ ಚಿತ್ರಗಳು ವೈರಲ್ ಆಗಿವೆ. ಕೆಂಪು ಮಿನಿ ಗೌನ್, ವಜ್ರದ ಹಾರ ಮತ್ತು ಹೊಳೆಯುವ ಕೂದಲಿನ ಪರಿಕರಗಳನ್ನು ಧರಿಸಿದ್ದ 55 ವರ್ಷದ ನತಾಶಾ ಈ ಕಾರ್ಯಕ್ರಮದಲ್ಲಿ ಆಕರ್ಷಣೆಯ ಕೇಂದ್ರಬಿಂದುವಾಗಿದ್ದರು. ಅಂದಹಾಗೆ, ನತಾಶಾ ತನ್ನ ಕುಟುಂಬದೊಂದಿಗೆ ಮುಂಬೈನಲ್ಲಿ ವಾಸಿಸುತ್ತಿದ್ದಾರೆ.

ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ (61) ವಿವಾಹ ಪತ್ರಕರ್ತೆ ಲಾರೆನ್ ಸ್ಯಾಂಚೆಜ್ (55) ಜತೆ ಇಟಲಿಯ ವೆನಿಸ್​ನಲ್ಲಿರುವ ಐತಿಹಾಸಿಕ ಸ್ಯಾನ್ ಜಾರ್ಜಿಯೋ ದ್ವೀಪದಲ್ಲಿ ನೆರವೇರಿತು. ಜೂ. 26ರಿಂದ 28ರವರೆಗೆ 3 ದಿನಗಳ ಕಾಲ ನಡೆದ ಈ ‘ಶತಮಾನದ ಅದ್ದೂರಿ ಮದುವೆ’ಗೆ ಜಗತ್ತಿನ ವಿವಿಧ ದೇಶಗಳ 250ಕ್ಕೂ ಹೆಚ್ಚು ‘ಅತಿಗಣ್ಯ ವ್ಯಕ್ತಿ’ಗಳು ಸಾಕ್ಷಿಯಾದರು. ಈ ವಿವಾಹಕ್ಕೆ ಒಟ್ಟು 480 ಕೋಟಿ ರೂ. ವೆಚ್ಚ ಮಾಡಲಾಗಿದೆ. ಬೆಜೋಸ್ ಕಪ್ಪು ಬಣ್ಣದ ಕ್ಲಾಸಿಕ್ ಟಕ್ಸೆಡೊ (ಸೂಟ್​ನಂತಹ ದಿರಿಸು) ಧರಿಸಿದ್ದರೆ, ವಧು ಸ್ಯಾಂಚೆಜ್ ಬಿಳಿ ಬಣ್ಣದ ವಿಶಿಷ್ಟ ವಿನ್ಯಾಸದ ಸಾಂಪ್ರದಾಯಿಕ ಗೌನ್ ತೊಟ್ಟಿದ್ದರು. ಈ ಗೌನ್ ತಯಾರಿಸಲು 18 ತಿಂಗಳಿಗಿಂತ ಹೆಚ್ಚು ಸಮಯ ಹಿಡಿದಿದೆ ಎನ್ನಲಾಗಿದೆ. ಸ್ಯಾಂಚೆಜ್ ಈ ಮದುವೆಯ ಫೋಟೋಗಳನ್ನು ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದು, ಅವು ಭಾರಿ ವೈರಲ್ ಆಗಿವೆ.

ಗಿಫ್ಟ್ ಬದಲು ದೇಣಿಗೆ: ಉಡುಗೊರೆ ನೀಡುವ ಬದಲು ಅದೇ ಹಣವನ್ನು ವೆನಿಸ್​ನ ಸಂಸ್ಥೆಗಳಿಗೆ ದೇಣಿಗೆ ನೀಡುವಂತೆ ಆಮಂತ್ರಿತರಿಗೆ ಆಹ್ವಾನ ಪತ್ರಿಕೆಯಲ್ಲೇ ಮನವಿ ಮಾಡಲಾಗಿತ್ತು. ಇದಲ್ಲದೆ ವಧು-ವರ ಕೂಡ ವೆನಿಸ್​ನ ಐತಿಹಾಸಿಕ ಸ್ಥಳಗಳ ರಕ್ಷಣೆಗಾಗಿ 9.5 ಕೋಟಿ ರೂ. ದೇಣಿಗೆ ನೀಡಿದರು.

ಮದುವೆಗೆ ಮೊದಲೇ ಒಪ್ಪಂದ: ಬೆಜೋಸ್ 244 ಶತಕೋಟಿ ಡಾಲರ್ ಸಂಪತ್ತಿನ ಒಡೆಯ. ಮುಂದಿನ ದಿನಗಳಲ್ಲಿ ವಿಚ್ಛೇದನವಾಗಿ, ಸಂಪತ್ತಿನ ಹಂಚಿಕೆ ವಿಷಯದಲ್ಲಿ ಸಮಸ್ಯೆ ಆಗಬಾರದೆಂಬ ಕಾರಣಕ್ಕೆ ಮದುವೆಗೆ ಮೊದಲೇ ವಧು-ವರನ ನಡುವೆ ಸ್ಪಷ್ಟ ಲಿಖಿತ ಒಪ್ಪಂದವಾಗಿದೆ ಎನ್ನಲಾಗಿದೆ. ಈ ಮದುವೆಯು ನಗರದ ಹಾಲ್​ನಲ್ಲಿ ನಡೆಯದ ಕಾರಣ, ಇಟಲಿಯ ಕಾನೂನಿನ ಪ್ರಕಾರ ಇದು ವೈವಾಹಿಕ ಕಟ್ಟುಪಾಡುಗಳಿಗೆ ಒಳಪಡುವುದಿಲ್ಲ ಎಂದೂ ಹೇಳಲಾಗುತ್ತಿದೆ. ಸಾಕಷ್ಟು ಹಿಂದೆಯೇ ಇವರಿಬ್ಬರೂ ಅಮೆರಿಕದಲ್ಲಿ ಕಾನೂನಾತ್ಮಕವಾಗಿ ಮದುವೆ ಮಾಡಿಕೊಂಡಿದ್ದಾರೆ ಎಂದೂ ಕೆಲವರು ಹೇಳುತ್ತಿದ್ದಾರೆ.

ಇಬ್ಬರಿಗೂ 2ನೇ ಮದುವೆ: ಬೆಜೋಸ್ 1993ರಲ್ಲಿ ಮೆಕೆಂಜಿ ಸ್ಕಾಟ್ ಅವರನ್ನು ಮದುವೆ ಆಗಿದ್ದರು. 2019ರಲ್ಲಿ ವಿಚ್ಛೇದನವಾಗಿತ್ತು. ಅವರಿಗೆ 4 ಮಕ್ಕಳಿದ್ದಾರೆ. ಬಳಿಕ ಸ್ಯಾಂಚೆಜ್ ಜತೆಗಿನ ಬೆಜೋಸ್ ಸಂಬಂಧ ಬಹಿರಂಗವಾಗಿತ್ತು. ಟಿವಿ ನ್ಯೂಸ್ ರಿಪೋರ್ಟರ್ ಮತ್ತು ಆಂಕರ್ ಆಗಿದ್ದ ಸ್ಯಾಂಚೆಜ್​ಗೂ 2005 ರಲ್ಲಿ ಪ್ಯಾಟ್ರಿಕ್ ವೈಟ್​ಸೆಲ್ ಜತೆ ವಿವಾಹವಾಗಿತ್ತು. 2023ರಲ್ಲಿ ವಿಚ್ಛೇದನವಾಗಿತ್ತು. ಅವರಿಗೆ ಮೂವರು ಮಕ್ಕಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net