

Heart Attack : ರಾಜ್ಯದಲ್ಲಿ ದಿನೇದಿನೆ ಯುವಜನರಲ್ಲಿ ಹೃದಯಾಘಾತ, ಹೃದಯಸ್ತಂಭನ ಪ್ರಕರಣ ಹೆಚ್ಚುತ್ತಿದ್ದು 18 ರಿಂದ 40 ವಯೋಮಾನದವರೇ ದಿಢೀರ್ ಸಾವಿಗೀಡಾಗುತ್ತಿರುವುದು ಆತಂಕ ಮೂಡಿಸಿದೆ. ಅದರಲ್ಲೂ ಹಾಸನ ಜಿಲ್ಲೆಯೊಂದರಲ್ಲೇ ಕಳೆದ ಒಂದು ತಿಂಗಳ ಅವಧಿಯಲ್ಲಿ 18 ಜನರು ಹೃದಯಾಘಾತಕ್ಕೆ ಬಲಿಯಾಗಿದ್ದು, ಶನಿವಾರವೂ ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ.
| ರಮೇಶ್ ಹಂಡ್ರಂಗಿ ಹಾಸನ
ಹಾಸನ ನಗರದ ಆಟೋ ಚಾಲಕ ಗೋವಿಂದ (35), ತಾಲೂಕಿನ ಕಟ್ಟಾಯ ಹೋಬಳಿ ಹ್ಯಾರಾನೆ ಗ್ರಾಮದ ಗಿರೀಶ್ ಶನಿವಾರ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಗೋವಿಂದ ಶನಿವಾರ ಬೆಳಗ್ಗೆ ಆಟೋ ಓಡಿಸುವಾಗ ಎದೆನೋವು ಕಾಣಿಸಿಕೊಂಡಿದೆ. ತಮ್ಮಆಟೋದಲ್ಲೇ ಜಿಲ್ಲಾಸ್ಪತ್ರೆಗೆ ಬಂದು ತಪಾಸಣೆ ಮಾಡಿಸಿಕೊಳ್ಳುವಾಗ ಕೊನೆಯುಸಿರೆಳೆದಿದ್ದಾರೆ. ಮತ್ತೊಂದೆಡೆ ರಜೆ ಮೇಲೆ ಊರಿಗೆ ಬಂದಿದ್ದ ಬಿಎಂಟಿಸಿ ಬಸ್ ಚಾಲಕ ಗಿರೀಶ್ ಬೆಳಗ್ಗೆ ಜಮೀನಿಗೆ ತೆರಳಿ ಮನೆಗೆ ಹಿಂದಿರುಗಿದಾಗ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಗ್ರಾಮಸ್ಥರು ಚಿಕಿತ್ಸೆಗಾಗಿ ಕರೆತಂದರಾದರೂ ಮಾರ್ಗಮಧ್ಯದಲ್ಲೇ ಕೊನೆಯುಸಿರೆಳೆದಿದ್ದಾರೆ.
ಜಿಲ್ಲೆಯಲ್ಲಿನ ಹೃದಯಾಘಾತದ ಇತಿಹಾಸ ಅವಲೋಕಿಸಿದಾಗ ಕಳೆದ ಎರಡು ವರ್ಷಗಳಲ್ಲಿ 507 ಪ್ರಕರಣಗಳು ವರದಿಯಾಗಿವೆ. ಈ ಪೈಕಿ 145 ಜನರ ಸಾವು ಸಂಭವಿಸಿವೆ. ಹೃದಯಾಘಾತ ಸಾವು ಹೆಚ್ಚಳಕ್ಕೆ ಕೋವಿಡ್ ಲಸಿಕೆ ಕಾರಣವಿರಬಹುದೇ ಎಂಬ ಸಂಶಯದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ತನಿಖೆ ನಡೆಸಿ ವರದಿ ನೀಡುವಂತೆ ಮುಖ್ಯಕಾರ್ಯದರ್ಶಿಗೆ ಸೂಚಿಸಿದ್ದರು. ಇದರಂತೆ 4 ತಿಂಗಳು ತನಿಖೆ ನಡೆಸಿದ 10 ನುರಿತ ವೈದ್ಯರ ತಂಡ ಹೃದಯಾಘಾತದ ಸರಣಿ ಸಾವಿಗೆ ಕೋವಿಡ್ ಲಸಿಕೆ ಕಾರಣವಲ್ಲ ಎಂದು ವರದಿ ಸಿದ್ಧಪಡಿಸಿರುವುದಾಗಿ ತಿಳಿದು ಬಂದಿದೆ. ತನಿಖಾ ತಂಡ 18-45 ವರ್ಷದೊಳಗೆ ಹೃದಯಾಘಾತಕ್ಕೆ ಬಲಿಯಾಗಿದ್ದ 250 ಜನರ ಸಾವಿನ ವರದಿ ಮುಂದಿಟ್ಟುಕೊಂಡು ತನಿಖೆ ನಡೆಸಿತ್ತು.
ಯುವಕರು ಆರೋಗ್ಯದ ಬಗ್ಗೆ ಕಾಳಜಿ ತೋರದಿರುವುದೇ ಹೃದಯಾಘಾತ ಹೆಚ್ಚಳಕ್ಕೆ ಪ್ರಮುಖ ಕಾರಣ ಎನ್ನುತ್ತಾರೆ ಇಂಡಿಯಾನ ಆಸ್ಪತ್ರೆ ಹಾರ್ಟ್ ಸೆಂಟರ್ನ ಹೃದ್ರೋಗ ತಜ್ಞ ಡಾ.ಎಂ.ಅನೂಪ್. ಜೀವನಶೈಲಿ, ಜಂಕ್ಫುಡ್, ನಿಯಮಿತ ವ್ಯಾಯಾಮ ಇಲ್ಲದಿರುವುದು, ಹೈ ಕ್ಯಾಲೋರಿ ಆಹಾರ ಸೇವನೆ, ಪರಿಸರ ಮಾಲಿನ್ಯ ಹೃದಯಾಘಾತ ಹೆಚ್ಚಳಕ್ಕೆ ಕಾರಣ. ಇನ್ನು ಏಕಾಏಕಿ ಬಿದ್ದು ಸಾಯುವ ಸಡನ್ ಕಾರ್ಡಿಯಾಕ್ ಅರೆಸ್ಟ್ಗೂ ಹಲವು ಕಾರಣಗಳಿವೆ. ಹಾರ್ಟ್ ಜೆನೆಟಿಕ್ ದುರ್ಬಲವಾಗಿರುವುದು, ಹೃದಯ ದಪ್ಪವಾಗಿರುವುದು, ಎಸ್ಸಿಇಡಿ ಸಿಂಡ್ರೋಮ್ ಕ್ಯೂಪಿ ಸಿಂಡ್ರೋಮ್ ಬ್ರೂಗಾಡಾ ಹಾಗೂ ಹೃದಯದಲ್ಲಿ ಇತರ ಸಮಸ್ಯೆಗಳು ಜೀವ ಬಲಿಪಡೆಯುತ್ತವೆ ಎಂದು ಡಾ.ಅನೂಪ್ ಹೇಳಿದ್ದಾರೆ. ಮಾನಸಿಕ ಕಾಯಿಲೆಗಳಿಗೆ ಮಾತ್ರೆ ತೆಗೆದುಕೊಳ್ಳುತ್ತಿದ್ದವರಲ್ಲೂ ಇಂತಹ ಸಮಸ್ಯೆ ಎದುರಾಗುವ ಸಾಧ್ಯತೆ ಇರುತ್ತದೆ. ಕೆಲವೊಮ್ಮೆ, ಭಯ, ಭಾವತೀವ್ರತೆ, ದೊಡ್ಡ ಸದ್ದು ಕೇಳಿದಾಗ, ವ್ಯಾಯಾಮ ಮಾಡುವಾಗಲೂ ಕಾರ್ಡಿಯಾಕ್ ಅರೆಸ್ಟ್ ಆಗಬಹುದು. ಅನುವಂಶೀಯವಾಗಿ ಹೃದಯ ಸಂಬಂಧಿತ ಕಾಯಿಲೆಗಳು ಬಂದಿರುತ್ತವೆ. ಇದನ್ನು ಆರಂಭದಲ್ಲಿಯೇ ಪರೀಕ್ಷಿಸಿಕೊಂಡರೆ ಹೃದಯಾಘಾತ ಹಾಗೂ ಹೃದಯಸ್ತಂಭನದಿಂದ ಪಾರಾಗಬಹುದು ಎಂದು ವೈದ್ಯರು ಸಲಹೆ ನೀಡುತ್ತಾರೆ.
1. ಹಾಸನ ಸತ್ಯಮಂಗಲ ಬಡಾವಣೆಯ ಚೇತನ್ (35)
2. ಹಾಸನ ತಾಲೂಕಿನ ಕಟ್ಟಾಯ ಹೋಬಳಿಯ ಹ್ಯಾರಾನೆ ಗ್ರಾಮದ ಗಿರೀಶ್ (41)
3. ಬೇಲೂರು ಪಟ್ಟಣದ ನಿಶಾದ್ ಅಹ್ಮದ್ (35)
4. ಹೊಳೆನರಸೀಪುರ ಪಟ್ಟಣದ ಸಂಧ್ಯಾ (20)
5. ಅರಕಲಗೂಡು ತಾಲೂಕಿನ ಕೊಣನೂರು ಗ್ರಾಮದ ಅಭಿಷೇಕ್ (19)
6. ಹಾಸನ ತಾಲೂಕಿನ ಕೆಲವತ್ತಿ ಗ್ರಾಮದ ಕವನಾ(20)
7. ಹೊಳೆನರಸೀಪುರ ಪಟ್ಟಣದ ನಿಶಾಂತ್ (20)
8. ಆಲೂರು ತಾಲೂಕಿನ ಮಗ್ಗೆ ಗ್ರಾಮದ ನಾಗಪ್ಪ (55)
9. ಹಾಸನ ನಗರಸಭೆ ಮಾಜಿ ಸದಸ್ಯ ನೀಲಕಂಠಪ್ಪ (58)
10. ಚನ್ನರಾಯಪಟ್ಟಣದ ಗ್ರಾಮ ಲೆಕ್ಕಿಗ ದೇವರಾಜ್ (35)
11. ಹಾಸನ ಹೊರವಲಯದ ರಾಜಘಟ್ಟದ ದೇವರಾಜ್ (43)
12. ಹಾಸನ ನಗರದ ಸತೀಶ್ (57)
13. ಹಾಸನ ತಾಲೂಕಿನ ದೊಡ್ಡಪುರ ಗ್ರಾಮದ ಕಾಂತರಾಜು (51)
14. ಚನ್ನರಾಯಪಟ್ಟಣ ಹೊನ್ನೇನಹಳ್ಳಿಯ ಕೆ.ಎಂ. ಚೇತನ್ (32)
15. ಹೊಳೆನರಸೀಪುರ ತಾಲೂಕಿನ ಕಟ್ಟಳ್ಳಿ ಗ್ರಾಮದ ಸುಪ್ರಿಯಾ (22)
16. ಆಲೂರು ತಾಲೂಕಿನ ಬಾವಿಕೊಪ್ಪಲುವಿನ ಮಂಜುನಾಥ್(51)
17. ಹಾಸನದ ಗೋವಿಂದ (37)
18. ಅರಸೀಕೆರೆಯ ನವೀನ್ ಕುಮಾರ್ (31)
ನಾವು ನಿತ್ಯ ಸೇವಿಸುವ ಆರೋಗ್ಯವೂ ಹೃದಯಘಾತಕ್ಕೆ ಕಾರಣವಾಗಬಹುದು ಎಂಬುದು ಯೋಗ ತರಬೇತುದಾರ ಚೇತನ್ ಗುರೂಜಿ ಅಭಿಪ್ರಾಯ. ಹಿಂದೆ ಗಾಣದಿಂದ ತೆಗೆದ ಎಣ್ಣೆಯನ್ನು ಅಡುಗೆಯಲ್ಲಿ ಬಳಸುತ್ತಿದ್ದೆವು, ಮನೆಯಲ್ಲಿಯೇ ಅಗತ್ಯಕ್ಕೆ ತಕ್ಕಂತೆ ಮಸಾಲೆ ಪದಾರ್ಥ ಸಿದ್ಧ ಮಾಡಿಕೊಳ್ಳಲಾಗುತ್ತಿತ್ತು. ಆದರೆ, ಇಂದು ಆಹಾರದಲ್ಲಿ ಪ್ಯಾಕೆಟ್ ಎಣ್ಣೆ ಬಳಸುತ್ತಿದ್ದೇವೆ. ಇದು ಮನುಷ್ಯರ ಆರೋಗ್ಯದ ಮೇಲೆ ಎಷ್ಟು ಮಾರಣಾಂತಿಕ ಪರಿಣಾಮ ಬೀರುತ್ತಿದೆ ಎಂಬುದರ ಬಗ್ಗೆ ತನಿಖೆಯಾಗಬೇಕು. ದೇಸಿ ತಳಿಯ ಹಸುವಿನ ಹಾಲಿನ ಬದಲಿಗೆ ವಿದೇಶಿ ತಳಿಯ ಹಸುಗಳು ಹಾಲನ್ನು ಸೇವಿಸುತ್ತಿದ್ದೇವೆ. ಈ ಬಗ್ಗೆ ಆಹಾರ ಇಲಾಖೆ, ಆಹಾರ ಗುಣಮಟ್ಟ ಸಂಶೋಧನಾ ಇಲಾಖೆಗಳು ಅಗತ್ಯ ಕ್ರಮಗಳನ್ನು ತೆಗೆದುಕೊಂಡು ಸಮಗ್ರ ತನಿಖೆಯಾಗಬೇಕು ಎಂದು ಒತ್ತಾಯಿಸುತ್ತಾರೆ.
ಕೋವಿಡ್ ಲಸಿಕೆ ನೀಡಿ ಎರಡು ವರ್ಷಗಳಾಗಿವೆ. ಸದ್ಯಕ್ಕೆ ಇದರ ಬಗ್ಗೆ ಅಧಿಕೃತ ಮಾಹಿತಿಯಿಲ್ಲ. ರೋಗನಿರೋಧಕ ಕ್ರಮಗಳ ಬಗ್ಗೆ ನಮ್ಮ ಸಮುದಾಯಗಳಿಗೆ ಶಿಕ್ಷಣ ನೀಡಬೇಕು. ಜನರು ಆರೋಗ್ಯಕರ ಜೀವನಶೈಲಿ ಅಳವಡಿಸಿಕೊಳ್ಳಬೇಕು. | ಶ್ರೇಯಸ್ ಪಟೇಲ್, ಸಂಸದ
* ಆರೋಗ್ಯದ ಬಗ್ಗೆ ಕಾಳಜಿ ಇಲ್ಲದಿರುವುದು
* ಜೀವನಶೈಲಿ, ಜಂಕ್ಫುಡ್ ಸೇವನೆ ಚಟ
* ಹೈ ಕ್ಯಾಲೋರಿ ಆಹಾರಗಳ ಸೇವನೆ
* ನಿಯಮಿತ ವ್ಯಾಯಾಮ ಇಲ್ಲದಿರುವುದು
* ದಿನೇ ದಿನೆ ಹೆಚ್ಚುತ್ತಿರುವ ಪರಿಸರ ಮಾಲಿನ್ಯ
* ಕುಟುಂಬದಲ್ಲಿ ಹೃದ್ರೋಗದ ಇತಿಹಾಸ
* ವಿಪರೀತ ಮೊಬೈಲ್ ಗೀಳಿನಿಂದ ನಿದ್ರಾಹೀನತೆ
1. ನಟ ಚಿರಂಜೀವಿ ಸರ್ಜಾ-2020
2. ನಟ ಸಿದ್ಧಾರ್ಥ ಶುಕ್ಲಾ-2021
3. ನಟ ಪುನೀತ್ ರಾಜ್ಕುಮಾರ್-2021
4. ಗಾಯಕ ಕೃಷ್ಣಕುಮಾರ್ ಕುನ್ನತ್-2022
5. ಹಾಸ್ಯನಟ ರಾಜು ಶ್ರೀವಾತ್ಸವ್-2022
2020-23ರ ನಡುವೆ ದೇಶಾದ್ಯಂತ ಹೃದಯಾ ಘಾತಕ್ಕೀಡಾದವರಲ್ಲಿ ಶೇ.50 ಮಂದಿ 40 ವರ್ಷಕ್ಕಿಂತ ಕಡಿಮೆ ವಯಸ್ಸಿನವರು
ಬಾಲಿವುಡ್ ನಟಿ ಶೆಫಾಲಿ ಜರಿವಾಲಾ (42) ಶುಕ್ರವಾರ ತಡರಾತ್ರಿ ಸಾವನ್ನಪ್ಪಿದ್ದು, ಅವರ ಸಾವಿಗೆ ಹೃದಯಾಘಾತ ಕಾರಣ ಎಂದು ಹೇಳಲಾಗುತ್ತಿದೆ. ತೀವ್ರ ಎದೆನೋವಿನಿಂದ ಬಳಲುತ್ತಿದ್ದ ಅವರನ್ನು ಮುಂಬೈನ ಆಸ್ಪತ್ರೆಗೆ ಕರೆದೊಯ್ಯುವಾಗಲೇ ಸಾವನ್ನಪ್ಪಿದ್ದಾರೆ.
ಗುಣಮಟ್ಟದ ಆಹಾರ ಸೇವನೆ, ವ್ಯಾಯಾಮ, ಪ್ರತಿ ವರ್ಷ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು, ಎದೆನೋವು ಕಾಣಿಸಿಕೊಂಡ ತಕ್ಷಣವೇ ತಪಾಸಣೆ ಮಾಡಿಸಿ ಕೊಳ್ಳುವುದು ಅಗತ್ಯ. ಆರೋಗ್ಯ ಇಲಾಖೆಯಿಂದ ಹೃದಯಾಘಾತದ ಬಗ್ಗೆ ಕಾಲೇಜು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲಾಗುತ್ತಿದೆ. ಯಾವುದೇ ದುಶ್ಚಟ ಬೆಳೆಸಿಕೊಳ್ಳದಂತೆ, ಉತ್ತಮ ಜೀವನಶೈಲಿ ರೂಪಿಸಿಕೊಳ್ಳುವಂತೆ ಕಿವಿಮಾತು ಹೇಳಲಾಗುತ್ತಿದೆ. | ಡಾ.ಅನಿಲ್ಕುಮಾರ್ ಡಿಎಚ್ಒ, ಹಾಸನ ಆರೋಗ್ಯ ಇಲಾಖೆಯಿಂದ ಶಾಲೆ-ಕಾಲೇಜು ವಿದ್ಯಾರ್ಥಿಗಳನ್ನು ತಪಾಸಣೆ ಮಾಡುವುದು ಸೇರಿದಂತೆ ಎಲ್ಲ ಸರ್ಕಾರಿ, ಸರ್ಕಾರೇತರ ಕಚೇರಿಗಳಲ್ಲಿ ಎಲ್ಲರಿಗೂ ಸಿಪಿಆರ್ ತರಬೇತಿ ನೀಡಬೇಕು. | ಡಾ.ಎಂ.ಅನೂಪ್ ಹೃದ್ರೋಗ ತಜ್ಞ