

ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆಯ ಪರ-ವಿರೋಧ ಬಣದಿಂದ ಈಶಾನ್ಯ ದೆಹಲಿಯಲ್ಲಿ ಉಂಟಾದ ಗಲಭೆಯು ಹಿಂಸಾಚಾರಕ್ಕೆ ತಿರುಗಿದ್ದು, ಈವರೆಗೂ 23 ಮಂದಿಯನ್ನು ಬಲಿ ಪಡೆದುಕೊಂಡಿದೆ.
ಪರಿಸ್ಥಿತಿ ಇನ್ನು ತಿಳಿಗೊಳ್ಳದೆ ಇರುವುದರಿಂದ ಶಾಂತಿ ಕಾಪಾಡಲು ಅನೇಕರು ಮನವಿ ಮಾಡುತ್ತಿದ್ದಾರೆ. ಹಿಂಸಾಚಾರವನ್ನು ಖಂಡಿಸಿ ರಾಷ್ಟ್ರಾದ್ಯಂತ ಅನೇಕರು ದನಿ ಎತ್ತಿದ್ದಾರೆ. ಇದೀಗ ಸ್ಯಾಂಡಲ್ವುಡ್ ನಟ ಡಾಲಿ ಧನಂಜಯ್ ಮಾರ್ಮಿಕವಾಗಿ ಮಾಡಿರುವ ಟ್ವೀಟ್ ಕೂಡ ಈಶಾನ್ಯ ದೆಹಲಿಯ ಹಿಂಸಾಚಾರದತ್ತ ಬೊಟ್ಟು ಮಾಡಿ ತೋರಿಸುತ್ತಿದೆ.
ಸೂರ್ಯಕಾಂತಿಯ ನೋಡಿ ಕಲಿಯಿರಿ ಎಂದೆ. ಆದರೆ ಧರ್ಮದತ್ತ ವಾಲಿದರು. ಹೊಳೆಯ ನಿಶ್ಯಬ್ಧತೆಯೆಡೆಗೆ ನಡೆಯಿರಿ ಎಂದೆ. ಆದರೆ, ಗುಂಡಿನ ಶಬ್ಧಕ್ಕೆ ಮಾರುಹೋದರು. ಸೂರ್ಯ ಮುಳುಗುತ್ತಿದ್ದಾನೆ. ಹೊಳೆಯೂ ಹೆಪ್ಪುಗಟ್ಟುತ್ತಿದೆ ಎಂದು ಧನಂಜಯ್ ಟ್ವೀಟ್ ಮಾಡಿರುವುದು ಸಾಕಷ್ಟು ಕುತೂಹಲಕ್ಕೀಡು ಮಾಡಿದೆ.
ಇತ್ತೀಚೆಗಷ್ಟೇ ನಟ ಧನಂಜಯ್ ಅವರ ಪಾಪ್ಕಾರ್ನ್ ಮಂಕಿ ಟೈಗರ್ ಚಿತ್ರ ಬಿಡುಗಡೆಗೊಂಡು ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಚಿತ್ರವನ್ನು ದುನಿಯಾ ಖ್ಯಾತಿ ಸೂರಿ ನಿರ್ದೇಶನ ಮಾಡಿದ್ದಾರೆ. (ಏಜೆನ್ಸೀಸ್)