

ಉತ್ತರ ಭಾರತದ ಭಾಗದಲ್ಲಿ ಧನ್ತೇರಸ್ ದಿನ ಮನೆ ಹೊರಭಾಗವನ್ನು ವಿದ್ಯುದ್ದೀಪಗಳಿಂದ ಅಲಂಕಾರ ಮಾಡಲಾಗುತ್ತದೆ. ಧನ್ತೇರಸ್ ಬಂತೆಂದರೆ ನಮ್ಮ ಮನೆ ಪೂರ್ಣ ಬೆಳಕಿನಿಂದಲೇ ಕೂಡಿರುತ್ತದೆ. ದೀಪಾವಳಿಗೂ ಎರಡು ದಿನದ ಮುಂಚೆ ಈ ಹಬ್ಬದ ಸಡಗರ ಜೋರು. ಚಿನ್ನ ಖರೀದಿಗೆ ಪ್ರಶಸ್ತವಾದ ದಿನವೆಂದೂ ಇದಕ್ಕೆ ಕರೆಯುತ್ತಾರೆ. ಬಾಲ್ಯದಲ್ಲಿ ಧನ್ತೇರಸ್ ದಿನದಂದು ಓರಗೆಯವರ ಜತೆಗೆ ಗಲ್ಲಿಗಲ್ಲಿ ಸುತ್ತಾಡಿ ಎಲ್ಲರ ಮನೆಗೆ ಹೋಗಿ ಬರುತ್ತಿದ್ದೆವು. ಕೈಯಲ್ಲೊಂದು ಬ್ಯಾಗ್ ತೆಗೆದುಕೊಂಡು ಹೋದರೆ, ಮರಳಿ ಮನೆಗೆ ಬರುವಷ್ಟರಲ್ಲಿ ಸಿಹಿ ತಿನಿಸು ಮತ್ತು ಚಾಕಲೇಟ್ಗಳಿಂದಲೇ ಬ್ಯಾಗ್ ತುಂಬಿರುತ್ತಿತ್ತು. ಹಾಗಾಗಿ, ಈ ಹಬ್ಬ ನನ್ನ ಪಾಲಿಗೆ ಸ್ಪೆಷಲ್. ಇದೀಗ ಮನೆಯಲ್ಲಿ ಸಂಭ್ರಮ ಜೋರಾಗಿದೆ. ಪ್ರತಿ ಸಲ ಅಮ್ಮ ನನಗೋಸ್ಕರ ಈ ಹಬ್ಬದಂದು ಚಿನ್ನ ಖರೀದಿ ಮಾಡುತ್ತಾರೆ. ಚಿನ್ನದ ಬಳೆ, ಚಿನ್ನದ ನೆಕ್ಲೆಸ್ ಅಥವಾ ಬೆಳ್ಳಿಯನ್ನೂ ಈ ಹಬ್ಬದಂದು ಖರೀದಿಸಲಾಗುತ್ತದೆ. ಈ ಸಲ ಅಮ್ಮನಿಗೆ ನಾನೇ ಚಿನ್ನ ಕೊಡಿಸುತ್ತಿದ್ದೇನೆ. ಸೂಕ್ತ ಸಮಯ, ಮುಹೂರ್ತ, ನಕ್ಷತ್ರವನ್ನು ನೋಡಿಕೊಂಡೇ ಖರೀದಿಸಲಿದ್ದೇನೆ. ಮನೆಯಲ್ಲಿ ಏನಿಲ್ಲ ಅಂದರೂ 150ರಿಂದ 200 ದೀಪಗಳನ್ನು ಈ ಹಬ್ಬದಂದು ಬೆಳಗಿಸಲಾಗುತ್ತದೆ. ವಿಶೇಷ ತಿನಿಸು ಸಹ ನಾನೇ ಮಾಡುತ್ತೇನೆ. ಕಾಡ್ ಎಂಬ ವಿಶೇಷ ಸಂಪ್ರದಾಯವೂ ಈ ಹಬ್ಬದಲ್ಲಿದೆ. ಕಾಡ್ ಎಂದರೆ ಗುಜರಾತಿ ಭಾಷೆಯಲ್ಲಿ ಗುಡ್ಲಕ್ ಎಂದರ್ಥ.
| ಪಾರುಲ್ ಯಾದವ್
ಉತ್ತರ ಭಾರತದ ಕಡೆಗೆ ಧನ್ತೇರಸ್ ಅಥವಾ ಧನತ್ರಯೋದಶಿ ಆಚರಣೆ ಯಾವ ಹಬ್ಬಕ್ಕೂ ಕಡಿಮೆ ಇಲ್ಲದಂತೆ ಆಚರಿಸಲಾಗುತ್ತದೆ. ದೀಪಾವಳಿಗೂ ಎರಡ್ಮೂರು ದಿನಕ್ಕೂ ಮುನ್ನ ನಡೆಯುವ ಹಬ್ಬವಿದು. ಕರ್ನಾಟಕದಲ್ಲಿ ಅಕ್ಷಯ ತೃತೀಯದ ಸಂಭ್ರಮ ಹೇಗಿರುತ್ತದೋ, ಉತ್ತರ ಭಾರತದಲ್ಲಿ ಇದರ ಆಚರಣೆ ಮಾಡುತ್ತಾರೆ. ನಾನು ಸಹ ಉತ್ತರ ಭಾರತದವಳಾದ್ದರಿಂದ ಆ ಆಚರಣೆ ಗೊತ್ತು. ಚಿಕ್ಕಂದಿನಿಂದಲೂ ನಾನು ಧನ್ತೇರಸ್ ಆಚರಿಸುತ್ತ ಬಂದಿದ್ದೇನೆ. ಈ ಹಬ್ಬದ ವಿಶೇಷತೆ ಏನೆಂದರೆ, ಚಿನ್ನ ಖರೀದಿ ಮತ್ತು ಲಕ್ಷ್ಮೀ ಪೂಜೆ. ಚಿನ್ನ ಖರೀದಿಗೆ ಒಳ್ಳೇ ಕಾಲ ಎಂದು ಈ ದಿನವನ್ನು ಕರೆಯುತ್ತಾರೆ. ಖರೀದಿಸಿದ ಚಿನ್ನವನ್ನು ದೇವರ ಮುಂದಿಟ್ಟು ಪೂಜಿಸುವುದು ನಡೆದು ಬಂದ ಸಂಪ್ರದಾಯ. ನಮ್ಮ ಮನೆಯಲ್ಲಿಯೂ ಚಿನ್ನ ಖರೀದಿ ಮಾಡಿ, ಧನ್ತೇರಸ್ ದಿನದಂದು ದೇವರ ಮುಂದಿಟ್ಟು ಆಚರಣೆ ಮಾಡುತ್ತೇವೆ. ಹೂ, ಹಣ್ಣು ಬಗೆಬಗೆ ಅಲಂಕಾರಿಕ ವಸ್ತುಗಳನ್ನು ತಂದು ದೇವಿಯನ್ನು ಅಲಂಕರಿಸಿ ಆರಾಧನೆ ಮಾಡಲಾಗುತ್ತದೆ. ದೇವರಿಗೆ ನೈವೇದ್ಯದ ರೂಪದಲ್ಲಿಯೂ ವಿಶೇಷ ಖಾದ್ಯಗಳನ್ನು ಮಾಡುವ ಪರಿಪಾಠವಿದೆ. ಮನೆಮಂದಿಯೆಲ್ಲ ಒಟ್ಟಾಗಿ ಸೇರುತ್ತಾರೆ. ಸದ್ಯ ನಮ್ಮ ಕುಟುಂಬವೆಲ್ಲ ಬೆಂಗಳೂರಿನಲ್ಲಿರುವುದರಿಂದ ಈ ಸಲದ ಆಚರಣೆ ಸರಳವಾಗಿರಲಿದೆ. ಮನೆಯಲ್ಲಿನ ಚಿನ್ನವನ್ನೇ ಲಕ್ಷ್ಮೀಯ ಮುಂದಿಟ್ಟು ಪೂಜೆ ಮಾಡುತ್ತೇವೆ.
| ರಾಗಿಣಿ
ದಕ್ಷಿಣ ಭಾರತದಲ್ಲಿ ದೀಪಾವಳಿಯನ್ನಷ್ಟೇ ಆಚರಿಸಲಾಗುತ್ತದೆ. ನಮ್ಮ ಕಡೆಗೆ ದೀಪಾವಳಿಯ ಸಂದರ್ಭದಲ್ಲಿ ಧನ್ತೇರಸ್ ಆಚರಣೆ ಜೋರಾಗಿಯೇ ಇರುತ್ತದೆ. ಚಿನ್ನ, ಬೆಳ್ಳಿ ಖರೀದಿಗೆ ಹೇಳಿ ಮಾಡಿಸಿದ ದಿನವೆಂದು ಈ ಹಬ್ಬಕ್ಕೆ ಕರೆಯುತ್ತಾರೆ. ಇದೆಲ್ಲದರ ಜತೆಗೆ ಮನೆಯಲ್ಲಿನ ಹಣದ ಲಾಕರ್ಗಳನ್ನು, ಚೆಕ್ಬುಕ್, ಪಠ್ಯಪುಸ್ತಕ, ಚಿನ್ನ ಬೆಳ್ಳಿಯನ್ನು ಲಕ್ಷ್ಮೀ ದೇವಿಯ ಮುಂದಿಟ್ಟು ಪೂಜೆ ಮಾಡಲಾಗುತ್ತದೆ. ದೀಪಾವಳಿಯ ಜತೆಗೆ ಈ ಹಬ್ಬ ಬರುವುದರಿಂದ ಉತ್ತರ ಭಾರತದಲ್ಲಿ ಡಬಲ್ ಸಂಭ್ರಮ ಇರುತ್ತದೆ. ರಾಜಸ್ಥಾನ್, ಗುಜರಾತ್, ಪಂಜಾಬ್, ಉತ್ತರ ಪ್ರದೇಶ ಸೇರಿ ಬಹುತೇಕ ಉತ್ತರ ಭಾರತದ ಎಲ್ಲ ಮನೆಗಳಲ್ಲೂ ಈ ಹಬ್ಬದ ಆಚರಣೆ ಇರುತ್ತದೆ. ಬಗೆಬಗೆಯ ಸಿಹಿ ತಿನಿಸು ಒಂದೆಡೆಯಾದರೆ, ಹೊಸ ಬಟ್ಟೆ ಧರಿಸಿ ಮನೆ ಮಂದಿಯೆಲ್ಲ ಒಂದೆಡೆ ಸೇರಿ ಆಚರಣೆ ಮಾಡುತ್ತೇವೆ. ಈ ಹಬ್ಬದ ಸಂದರ್ಭದಲ್ಲಿ ಚಿನ್ನ ಖರೀದಿ ಮಾಡಲಾಗುತ್ತದೆ. ನಾನೂ ಸಹ ಈ ಹಬ್ಬದಂದೇ ಚಿನ್ನ ಖರೀದಿ ಮಾಡುತ್ತೇನೆ. ಮನೆಯಲ್ಲಿನ ಆಚರಣೆಗೆ ಬರುವುದಾದರೆ, ಮಣ್ಣಿನ ಗಣೇಶ ಮತ್ತು ಲಕ್ಷ್ಮೀ ದೇವಿಯ ಪ್ರತಿಮೆಯನ್ನು ಮಾಡಿ, ಪೂಜೆ ಮಾಡಲಾಗುತ್ತದೆ. ಅದರ ಜತೆಗೆ ಲಕ್ಷ್ಮೀ ದೇವರ ವಿಗ್ರಹವನ್ನೂ ಪ್ರತಿಷ್ಠಾಪಿಸಿ, ಚಿನ್ನದ ಒಡವೆಗಳಿಂದ ಅಲಂಕಾರ ಮಾಡುತ್ತೇವೆ. ನೈವೇದ್ಯಕ್ಕೆ ಲಪ್ಸಿ ಅನ್ನೋ ವಿಶೇಷ ಖಾದ್ಯವನ್ನು ಮಾಡುವುದು ನಮ್ಮ ಭಾಗದ ಸಂಪ್ರದಾಯ.
| ಶಾನ್ವಿ ಶ್ರೀವಾತ್ಸವ