

Heavy Rain: ಭಾರಿ ಪ್ರವಾಹದಿಂದ ಬಳಲುತ್ತಿರುವ ಪಂಜಾಬ್, ಜಮ್ಮು ಮತ್ತು ಕಾಶ್ಮೀರ, ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶಗಳಿಗೆ ವಿಶೇಷ ಪರಿಹಾರ ಪ್ಯಾಕೇಜ್ನ್ನು ತಕ್ಷಣ ಘೋಷಿಸುವಂತೆ ಮತ್ತು ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ಚುರುಕುಗೊಳಿಸುವಂತೆ ವಿಪಕ್ಷ ನಾಯಕ ರಾಹುಲ್ ಗಾಂಧಿಯೂ ಪ್ರಧಾನಿ ನರೇಂದ್ರ ಮೋದಿಯನ್ನು ಬುಧವಾರ (ಸೆಪ್ಟೆಂಬರ್, 3) ಒತ್ತಾಯಿಸಿದ್ದಾರೆ.
ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಮೋದಿಜೀ, ಪಂಜಾಬ್‌ನಲ್ಲಿ ಪ್ರವಾಹವು ಭಾರಿ ಹಾನಿಯನ್ನು ಉಂಟು ಮಾಡಿದೆ. ಅಲ್ಲದೆ, ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದ ಪರಿಸ್ಥಿತಿಯೂ ಅತ್ಯಂತ ಚಿಂತಾಜನಕವಾಗಿದೆ ಎಂದು ಹೇಳಿದ್ದಾರೆ.
ಮುಂದುವರೆದು ಮಾತನಾಡಿರುವ ಗಾಂಧಿ, ಇಂತಹ ಕಷ್ಟದ ಸಮಯದಲ್ಲಿ, ನಿಮ್ಮ ಗಮನ ಮತ್ತು ಕೇಂದ್ರ ಸರ್ಕಾರದ ಸಕ್ರಿಯ ಸಹಾಯವು ಅತ್ಯಂತ ಅವಶ್ಯಕವಾಗಿದೆ. ಅಲ್ಲದೆ, ಸಾವಿರಾರು ಕುಟುಂಬಗಳು ತಮ್ಮ ಮನೆಗಳು, ಜೀವಗಳು ಮತ್ತು ಪ್ರೀತಿಪಾತ್ರರನ್ನು ಉಳಿಸಲು ಹೆಣಗಾಡುತ್ತಿವೆ ಎಂದು ಪ್ರವಾಹ ಸ್ಥಿತಿಯನ್ನು ತಿಳಿಸಿದ್ದಾರೆ.
ಪ್ರವಾಹ ಪೀಡಿತ ರಾಜ್ಯಗಳಿಗೆ, ವಿಶೇಷವಾಗಿ ರೈತರಿಗೆ ಪರಿಹಾರ ಪ್ಯಾಕೇಜ್ನ್ನು ತಕ್ಷಣ ಘೋಷಿಸಬೇಕೆಂದು ನಾನು ಒತ್ತಾಯಿಸುತ್ತೇನೆ. ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ಚುರುಕುಗೊಳಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ರಾಹುಲ್ ಗಾಂಧಿ ಮನವಿ ಮಾಡಿದ್ದಾರೆ.
ಅಲ್ಲದೆ, ಜನರು ತಮ್ಮ ಕುಟುಂಬಗಳನ್ನು ಉಳಿಸಲು ಹೆಣಗಾಡುತ್ತಿರುವುದನ್ನು ನೋಡಿದರೆ ದುಃಖವಾಗುತ್ತದೆ. ಮೋದಿ ಜೀ ಜನರನ್ನು ರಕ್ಷಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ. ಈ ಜನರ ರಕ್ಷಣೆಗಾಗಿ ತಕ್ಷಣ ವಿಶೇಷ ಪರಿಹಾರ ಪ್ಯಾಕೇಜ್ ಸಿದ್ಧಪಡಿಸಿ ಎಂದು ಶ್ರೀ ಗಾಂಧಿ ತಮ್ಮ ವೀಡಿಯೊ ಸಂದೇಶದಲ್ಲಿ ತಿಳಿಸಿದ್ದಾರೆ.
ಕಳೆದ ಕೆಲವು ವಾರಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಉತ್ತರ ಭಾರತ ಸಂಕಷ್ಟಕ್ಕೆ ಸಿಲುಕಿದೆ. ಉತ್ತರದ ಪ್ರಮುಖ ನದಿಗಳು ಉಕ್ಕಿ ಹರಿದು ಬಯಲು ಪ್ರದೇಶಗಳು ಜಲಾವೃತಗೊಂಡದೆ. ಹಳಿಗಳು ಮತ್ತು ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತು. ಶಾಲೆಗಳು ರಜೆ ಘೋಷಣೆ ಮಾಡಲಾಗಿದೆ.
ಭಾರಿ ಮಳೆಗೆ ಪಂಜಾಬ್‌ನಲ್ಲಿ, ಸಟ್ಲೆಜ್, ಬಿಯಾಸ್ ಮತ್ತು ರಾವಿ ನದಿಗಳು ಉಕ್ಕಿ ಹರಿಯುತ್ತಿರುವುದರಿಂದ ಪರಿಸ್ಥಿತಿ ಚಿಂತಾಜನಕವಾಗಿದೆ. ಪಂಜಾಬ್ನ ಹನ್ನೆರಡು ಜಿಲ್ಲೆಗಳು ಪ್ರವಾಹಕ್ಕೆ ಸಿಲುಕಿದ್ದು, ಈಗಾಗಲೇ 29 ಜನರು ಸಾವನ್ನಪ್ಪಿದ್ದಾರೆ ಮತ್ತು 2.56 ಲಕ್ಷಕ್ಕೂ ಹೆಚ್ಚು ಜನರ ಮೇಲೆ ಪರಿಣಾಮ ಬೀರಿದೆ.
ಹಿಮಾಚಲ ಪ್ರದೇಶದಲ್ಲಿ ಮಂಗಳವಾರ (ಸೆಪ್ಟೆಂಬರ್ 2) ಭಾರೀ ಮಳೆಯಿಂದಾಗಿ ಭೂಕುಸಿತ ಮತ್ತು ಹಠಾತ್ ಪ್ರವಾಹ ಉಂಟಾಗಿ ಇಬ್ಬರು ಮಹಿಳೆಯರು ಸಾವನ್ನಪ್ಪಿದ್ದಾರೆ. ಪ್ರವಾಹದಿಂದ 1,000 ಕ್ಕೂ ಹೆಚ್ಚು ರಸ್ತೆಗಳು ಮುಚ್ಚಿಹೋಗಿವೆ. ಕಾಂಗ್ರಾ, ಮಂಡಿ, ಸಿರ್ಮೌರ್ ಮತ್ತು ಕಿನ್ನೌರ್ ಜಿಲ್ಲೆಗಳಿಗೆ ಭಾರೀ ಮಳೆಯಾಗುವ ಬಗ್ಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ.
ಅಲ್ಲದೆ, ಶಿಮ್ಲಾದಲ್ಲಿ, ತರಬೇತಿ ಕೇಂದ್ರಗಳು ಮತ್ತು ನರ್ಸಿಂಗ್ ಸಂಸ್ಥೆಗಳು ಸೇರಿದಂತೆ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಮುಚ್ಚಲು ಆದೇಶಿಸಲಾಗಿದೆ.(ಏಜೆನ್ಸೀಸ್)