

Tianjin Declaration: ಚೀನಾದ ಟಿಯಾಂಜಿನ್ನಲ್ಲಿ ನಡೆದ SCO ಶೃಂಗಸಭೆಯಲ್ಲಿ ಸದಸ್ಯ ದೇಶಗಳು ಮಂಡಿಸಿದ, ಎಲ್ಲಾ ರೀತಿಯ ಭಯೋತ್ಪಾದನೆ ಮತ್ತು ಅಭಿವ್ಯಕ್ತಿಗಳನ್ನು ಖಂಡಿಸುವ ಘೋಷಣೆಯ ವಿಶ್ವಾಸಾರ್ಹತೆಯನ್ನು ಹಿರಿಯ ಕಾಂಗ್ರೆಸ್ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಮಂಗಳವಾರ (ಸೆಪ್ಟೆಂಬರ್,02) ಪ್ರಶ್ನಿಸಿದ್ದಾರೆ.
ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಚಿದಂಬರಂ, ಟಿಯಾಂಜಿನ್ ಘೋಷಣೆಯು ಭಯೋತ್ಪಾದನೆಯ ಎಲ್ಲಾ ಸ್ವರೂಪಗಳು ಮತ್ತು ಅಭಿವ್ಯಕ್ತಿಗಳಲ್ಲಿ ಬಲವಾಗಿ ಖಂಡಿಸಿದೆ. ಇದಕ್ಕೆ ಪಾಕಿಸ್ತಾನ ಸಹಿ ಹಾಕಿ ಅಂಗೀಕರಿಸಿದೆ. ಇದು ಘೋಷಣೆಯ ಮೌಲ್ಯವನ್ನು ತೋರಿಸುತ್ತದೆ ಎಂದು ಹೇಳಿದ್ದಾರೆ.
ಅಲ್ಲದೆ, ಭಯೋತ್ಪಾದನೆಯನ್ನು ರಫ್ತು ಮಾಡುವ ರಾಷ್ಟ್ರಗಳು ಮತ್ತು ಭಯೋತ್ಪಾದನೆ ಪೀಡಿತ ರಾಷ್ಟ್ರಗಳ ನಡುವೆ ವ್ಯತ್ಯಾಸವನ್ನು ಗುರುತಿಸಲು ವಿಶ್ವದ ದೇಶಗಳಿಗೆ ಸಾಧ್ಯವಾಗಿಲ್ಲ. ಆದರೂ ಇಂತಹ ಅರ್ಥಹೀನ ಘೋಷಣೆಗಳಿಗೆ ಸಹಿ ಹಾಕಲಾಗುತ್ತದೆ ಮತ್ತು ಅಂಗೀಕರಿಸಲಾಗುತ್ತದೆ ಎಂದು ಮಾಜಿ ಕೇಂದ್ರ ಸಚಿವ ಟೀಕಿಸಿದ್ದಾರೆ.
ಚೀನಾದಲ್ಲಿ ನಡೆದ ಟಿಯಾಂಜಿನ್ ಶೃಂಗಸಭೆಯಲ್ಲಿ ಘೋಷಣೆಯನ್ನು ಅಂಗೀಕರಿಸಲಾಯಿತು. ಇದರಲ್ಲಿ ಭಾಗವಹಿಸುವ ರಾಷ್ಟ್ರಗಳು ಜಾಗತಿಕ ಭಯೋತ್ಪಾದನೆಯನ್ನು ಎದುರಿಸಲು ತಮ್ಮ ಸಹಮತವನ್ನು ವ್ಯಕ್ತಪಡಿಸಿದವು.ಅಲ್ಲದೆ, ಭಾರತ ಪಾಕ್ ಗಡಿಯಾಚೆಗಿನ ಭಯೋತ್ಪಾದನೆಯನ್ನು ಬೆಂಬಲಿಸುತ್ತಿದೆ ಎಂದು ಆರೋಪಿಸುತ್ತಿದೆ.
ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ಖಂಡಿಸುವ ಶಾಂಘೈ ಸಹಕಾರ ಸಂಸ್ಥೆ (SCO)ಯ ಜಂಟಿ ಹೇಳಿಕೆಯನ್ನು ವಿದೇಶಿ ಮತ್ತು ರಕ್ಷಣಾ ತಜ್ಞರು ಸ್ವಾಗತಿಸಿದರು. ಜಾಗತಿಕ ವೇದಿಕೆಯಲ್ಲಿ ಗಡಿಯಾಚೆಗಿನ ಭಯೋತ್ಪಾದನೆಯ ಬಗ್ಗೆ ಭಾರತದ ನಿಲುವನ್ನು ದೃಢವಾಗಿ ಪ್ರಸ್ತುತಪಡಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯನ್ನು ಶ್ಲಾಘಿಸಿದರು.
ಏಪ್ರಿಲ್ 22 ರಂದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು SCO ಸದಸ್ಯ ರಾಷ್ಟ್ರಗಳು ಬಲವಾಗಿ ಖಂಡಿಸಿದವು. ಇಂತಹ ಹಿಂಸಾಚಾರದ ಹಿಂದೆ ಇರುವವರನ್ನು ನ್ಯಾಯದ ಕಟಕಟೆಗೆ ತರಬೇಕು ಎಂದು ಘೋಷಿಸಿದವು.(ಏಜೆನ್ಸೀಸ್)