ಪರಪ್ಪನ ಅಗ್ರಹಾರ ಜೈಲಿನಲ್ಲಿ ನಿಲ್ಲದ ಫೋನ್ ರಿಂಗಣ

ವಿಜಯವಾಣಿ (8)
Published on

ಒಂದೇ ವಾರದಲ್ಲಿ ಎರಡು ಬಾರಿ ಪರಿಶೀಲನೆ, 7 ಮೊಬೈಲ್ ಪತ್ತೆ | ವಿಚಾರಣಾಧೀನ, ಸಜಾಕೈದಿ ಬ್ಯಾರಕ್​ನಿಂದ ಜಪ್ತಿ

ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕೈದಿಗಳಿಗೆ ಐಷಾರಾಮಿ ಸವಲತ್ತು ಮತ್ತು ಮೊಬೈಲ್ ಬಳಕೆ ಕುರಿತು ಚರ್ಚೆ ಮತ್ತು ವಿಶೇಷ ತನಿಖೆ ನಡೆಯುತ್ತಿದ್ದರೂ ಮತ್ತೆ ಮತ್ತೆ ಫೋನ್ ಪತ್ತೆ ಆಗುತ್ತಲೇ ಇವೆ. ಸೆಂಟ್ರಲ್ ಜೈಲಿನ ಸಹಾಯಕ ಅಧೀಕ್ಷಕ ಕರ್ಣ ಬಿ. ಕ್ಷತ್ರಿ ನೇತೃತ್ವದ ತಂಡ ಪರಪ್ಪನ ಅಗ್ರಹಾರ ಜೈಲಿನಲ್ಲಿ 17 ಮತ್ತು 23ರಂದು ದೀಢೀರ್ ತಪಾಸಣೆ ನಡೆಸಿದಾಗ ಏಳು ಮೊಬೈಲ್​ಗಳು ಪತ್ತೆಯಾಗಿವೆ. ಈ ಕುರಿತು ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿವೆ.

17ರ ರಾತ್ರಿ 10.30ರಿಂದ 11 ಗಂಟೆ ನಡುವೆ ಸಜಾ ಬಂದಿಗಳ ವಿಭಾಗದ ಬಿ ಬ್ಯಾರಕ್​ನ ಕೊಠಡಿ ಮೇಲೆ ಅನಿರೀಕ್ಷಿತವಾಗಿ ಜೈಲು ಅಧಿಕಾರಿಗಳು ತಪಾಸಣೆ ನಡೆದ್ದರು. ‘ಬಿ’ ಬ್ಯಾರಕ್​ನ 4ನೇ ಕೊಠಡಿ ಶೌಚಗೃಹದಲ್ಲಿ ಎರಡು ಮೊಬೈಲ್ ಪತ್ತೆಯಾಗಿವೆ. 6ನೇ ಕೊಠಡಿಯ ಶೌಚಗೃಹದಲ್ಲಿ ಎರಡು ಮೊಬೈಲ್ ಪತ್ತೆ ಆಗಿದ್ದು, ಜಪ್ತಿ ಮಾಡಿದ್ದಾರೆ. ಇದಾದ ಮೇಲೆ 23ರ ರಾತ್ರಿ 8.15ರಿಂದ 8.50ರ ನಡುವೆ ವಿಚಾರಣಾಧೀನ ಬಂದಿಗಳ ವಿಭಾಗದ 8ನೇ ಬ್ಯಾರಕ್​ನ ನಾಲ್ಕನೇ ಕೊಠಡಿಯ ಮೇಲೆ ದಿಢೀರ್ ದಾಳಿ ನಡೆಸಿದ್ದಾರೆ. ಆಗ ಶೌಚಗೃಹದ ಕಿಟಕಿಯ ಬಳಿ ಎರಡು ಮೊಬೈಲ್ ಮತ್ತು ಮತ್ತೊಂದೆಡೆ ಒಂದು ಮೊಬೈಲ್ ಪತ್ತೆಯಾಗಿದೆ. ಈ ಬಗ್ಗೆಯೂ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲು ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಟ ದರ್ಶನ್ ಮತ್ತು ಗ್ಯಾಂಗ್​ಗೆ ಐಷಾರಾಮಿ ಸವಲತ್ತು ಒದಗಿಸಿದ ಪ್ರಕರಣ ಸಂಬಂಧ ಜೈಲಿನ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಅಮಾನತು ಮಾಡುವ ಜತೆಗೆ ಕೆಲವರನ್ನು ಬಂಧಿಸಲಾಗಿತ್ತು. ಅಲ್ಲದೆ, ಹಲವು ಕೈದಿಗಳನ್ನು ಸಹ ಸ್ಥಳಾಂತರ ಮಾಡಲಾಗಿದೆ. ಆದರೂ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳು ಮೊಬೈಲ್ ಬಳಕೆ ಮಾಡುವುದು ನಿಂತಿಲ್ಲ ಎಂಬುದು ಜೈಲು ಅಧಿಕಾರಿಗಳಿಗೆ ಸವಾಲಾಗಿದೆ. ಮೊಬೈಲ್ ಪೂರೈಕೆ ಮಾಡುವ ಕೈ ಯಾವುದು ಎಂಬುದು ಪತ್ತೆ ಮಾಡುವುದು ಪೊಲೀಸರಿಗೂ ಸವಾಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net