ನಾಮ ನಿರ್ದೇಶನ ಅಸಮಾಧಾನ; ಆಕಾಂಕ್ಷಿಗಳಿಗೆ ನಿಗಮ‌ ಮಂಡಳಿ ಸ್ಥಾನಮಾನ ಭರವಸೆ

Congress (5)
Published on

ಬೆಂಗಳೂರು: ವಿಧಾನ ಪರಿಷತ್‌ನ ಮೂರು ಸ್ಥಾನಗಳಿಗೆ ನಾಮನಿರ್ದೇಶನ‌ ಮಾಡುವ ಪ್ರಕ್ರಿಯೆ ಕೊನೆ ಹಂತ ತಲುಪಿದ್ದು, ಈ ವೇಳೆ ಆಡಳಿತ ಪಕ್ಷದ ಹಲವು ಆಕಾಂಕ್ಷಿಗಳು ಬೇಸರ ಹೊರಹಾಕಲು ಆರಂಭಿಸಿದ್ದಾರೆ.

ಮೂರು ಸ್ಥಾನಗಳಿಗೆ ಹನ್ನೆರಡು ಪ್ರಮುಖ, ಪ್ರಬಲ‌ ಆಕಾಂಕ್ಷಿಗಳಿದ್ದು. ಆರಂಭದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ಮನ್ಸೂರ್, ಮಾಜಿ ಇಡಿ ಅಧಿಕಾರಿ ಸುಧಾಮ್ ದಾಸ್ ಹಾಗೂ ಮಾಜಿ ಸಚಿವ ಎಂ.ಆರ್.ಸೀತಾರಾಮ್ ಹೆಸರು ಚರ್ಚೆಯಲ್ಲಿತ್ತು.

ಸುಧಾಮ್ ದಾಸ್ ಅವರ ಬದಲು ಉಮಾಶ್ರೀಗೆ ಅವಕಾಶ ಕೊಡಬೇಕೆಂಬ ಒತ್ತಡ ಹೆಚ್ಚಾಯಿತು. ಅಂತಿಮವಾಗಿ ಸುಧಾಮ್ ದಾಸ್ ಕೈ ಮೇಲಾಗಿದ್ದರಿಂದ ಮನ್ಸೂರ್ ಬದಲು ಉಮಾಶ್ರೀ ಹೆಸರು ಅಂತಿಮವಾಗಿದೆ. ಉಮಾಶ್ರೀಗೆ ಅವಕಾಶ ಕೊಡಲೇಬೇಕೆಂದು ಖುದ್ದು ಸಿಎಂ ಸಿದ್ದರಾಮಯ್ಯ ಪಟ್ಟುಹಿಡಿದಿದ್ದರು.

ಈ‌ಮೂರು ಆಯ್ಕೆ ಬಗ್ಗೆ ಪಕ್ಷದಲ್ಲಿ ಬಿಸಿಬಿಸಿ ಚರ್ಚೆ ನಡೆದಿದ್ದು, ಅಸಮಾಧಾನ ಹೊರಹಾಕಲು ಸಹ ಆರಂಭಿಸಿದ್ದಾರೆ.

ಕಾಂಗ್ರೆಸ್​ ವಕ್ತಾರ, ವಕೀಲ ಸಂಕೇತ್ ಏಣಗಿ ಟ್ವಿಟರ್​ನಲ್ಲಿ ತಮ್ಮ ಬೇಸರವನ್ನು ಪರೋಕ್ಷವಾಗಿ ತೋಡಿಕೊಂಡಿದ್ದಾರೆ.

"ಪ್ರಾಮಾಣಿಕ/ಅಭಿಪ್ರಾಯ: ಹಿರಿಯ ರಾಜಕಾರಣಿಗಳು ಹಾಗೂ ಅವರ ಪರಿವಾರದವರಿಗೆ ಮಾತ್ರ ಮಣೆ ಹಾಕದೇ, ಇನ್ನಾದರೂ ಸಮರ್ಥ, ಸುಶಿಕ್ಷಿತ, ಪಕ್ಷನಿಷ್ಠ, ನ್ಯಾಯಪರತೆ ಇರುವ ಯುವ ರಾಜಕಾರಣಿಗಳಿಗೆ ಪಕ್ಷ ವಿಶೇಷ ಅವಕಾಶ ನೀಡಬೇಕು. ಹೀಗೆಯೇ ಮುಂದುವರಿದರೆ, ಪಕ್ಷ ಮುಂದೊಮ್ಮೆ ಯುವ ರಾಜಕಾರಣಿಗಳಿಲ್ಲದೇ ಬರಿದಾದರೆ ವಿಶೇಷವೇನಿಲ್ಲ" ಎಂದು ಅವರು ಕಳವಳದ ಜತೆಗೆ ಬೇಸರ ವ್ಯಕ್ತಪಡಿಸಿದ್ದಾರೆ.

ಈ ನಡುವೆ ಪರಿಷತ್ ಸ್ಥಾನದ ಆಕಾಂಕ್ಷಿಗಳಿಗೆ ನಿಗಮ‌ಮಂಡಳಿಗಳಲ್ಲಿ ಸ್ಥಾನಮಾನ‌ ಕಲ್ಪಿಸಲಾಗುತ್ತದೆ. ಶೀಘ್ರವೇ ನಿಗಮ ಮಂಡಳಿಗಳಿಗೆ ಆಯ್ಕೆ ನಡೆಯಲಿದೆ. ಹಾಗೆಯೇ ಪಕ್ಷದ ಪ್ರಮುಖರು ಬೇಸರಗೊಂಡವರ ಮನವೊಲಿಸುತ್ತಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಅಂದಹಾಗೆ, ಕಲಾವಿದರ ಕೋಟಾದಡಿ ಉಮಾಶ್ರೀ ಅವರಿಗೆ ಸ್ಥಾನ ನೀಡಿದರೆ, ಶಿಕ್ಷಣ ಕ್ಷೇತ್ರದ ಕೋಟಾದಡಿ ಮಾಜಿ ಸಚಿವ ಎಂ.ಆರ್.ಸೀತಾರಾಮ್​ ಹಾಗೂ ಸಮಾಜಸೇವೆ ಕೋಟಾದಡಿ ನಿವೃತ್ತ ಇಡಿ ಅಧಿಕಾರಿ ಸುಧಾಮ್ ದಾಸ್​ ಅವರಿಗೆ ಪರಿಷತ್ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net